ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂತುಗೋಡು ಗ್ರಾ. ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ  

ಅ.2ಕ್ಕೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ
Published 29 ಸೆಪ್ಟೆಂಬರ್ 2023, 7:04 IST
Last Updated 29 ಸೆಪ್ಟೆಂಬರ್ 2023, 7:04 IST
ಅಕ್ಷರ ಗಾತ್ರ

ಶೃಂಗೇರಿ: ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದ ತಾಲ್ಲೂಕಿನ ಕೂತುಗೋಡು ಗ್ರಾಮ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

‘ಬಯಲು ಮಲ ವಿಸರ್ಜನೆ ಅನಾಗರಿಕತೆಯ ಲಕ್ಷಣ, ಶೌಚಾಲಯ ನಿರ್ಮಿಸಿ ಬಳಸುವುದೇ ನಾಗರಿಕತೆಯ ಲಕ್ಷಣ’, ‘ವೈಜ್ಞಾನಿಕವಾಗಿ ಕಸ ನಿರ್ವಹಿಸಿ, ಅಪಾರ ಪ್ರಯೋಜನ ಗಳಿಸಿ’ ಇಂತಹ ನಾಮಫಲಕಗಳು ಕೂತುಗೋಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾಣಸಿಗುತ್ತವೆ.

ಬೆಟ್ಟಗೆರೆ, ವೈಕುಂಠಪುರ, ಕೊಚ್ಚವಳ್ಳಿ, ಕೂತುಗೋಡು, ಗುಂಡ್ರೆ ಹೀಗೆ ಐದು ಕಂದಾಯ ಗ್ರಾಮಗಳನ್ನು ಹೊಂದಿರುವ ಪಂಚಾಯಿತಿಯ ಜನಸಂಖ್ಯೆ 2,400ರಷ್ಟು. ಗ್ರಾಮದಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ₹21.58 ಲಕ್ಷ ಅನುದಾನ ವೆಚ್ಚದಲ್ಲಿ, ಇಂಗುಗುಂಡಿ, ಎರೆಹುಳ ತೊಟ್ಟಿ, ಕಾಂಕ್ರೀಟ್ ರಸ್ತೆ, ಬಾವಿ, ದನದ ಕೊಟ್ಟಿಗೆ, ನೀರಿನ ಕಾಲುವೆ ನಿರ್ಮಾಣ, ಶಾಲಾ ಕಾಂಪೌಂಡ್, ಆಟದ ಮೈದಾನ ನಿರ್ಮಿಸಲಾಗಿದೆ.

2022-23ರಲ್ಲಿ ಅಮೃತ ಗ್ರಾಮ ಯೋಜನೆಯಡಿ ₹24.75 ಲಕ್ಷ ಅನುದಾನದಲ್ಲಿ ಸೋಲಾರ್ ಬೀದಿ ದೀಪ, ಅಂಗನವಾಡಿ ಮತ್ತು ಶಾಲೆಗೆ ಆಟದ ಸಾಮಗ್ರಿ, ವೈಕುಂಠಪುರ ಪ್ರೌಢಶಾಲೆಗೆ ಪ್ರಯೋಗಾಲಯದ ಸಾಮಗ್ರಿ, ಗ್ರಂಥಾಲಯ ಡಿಜಿಟಲೀಕರಣಕ್ಕೆ ವೆಚ್ಚ ಮಾಡಲಾಗಿದೆ. ಗ್ರಾಮದಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಿರುವ ಪಂಚಾಯಿತಿಯು, ಅನುದಾನಗಳನ್ನು ವಿವೇಚನೆಯಿಂದ ಬಳಸಿ, ಗ್ರಾಮವನ್ನು ಅಭಿವೃದ್ಧಿಗೊಳಿಸಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಂಚಾಯಿತಿ ಆಯ್ಕೆಗೊಂಡಿದ್ದು, ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಬಾಕಿ ಇರುವ ಮೂಲ ಸೌಕರ್ಯಕ್ಕೆ ಸರ್ಕಾರ ಅನುದಾನ ನೀಡಬೇಕಾಗಿದೆ. ಹಿರಿಯ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಪ್ರಶಸ್ತಿ ಲಭಿಸಿದೆ ಎಂದು ಪಂಚಾಯಿತಿ ಅಧ್ಯಕ್ಷ ಕೆ.ಬಿ ನಾಗೇಶ್ ಹೇಳಿದರು.

ಇದು ಗ್ರಾಮಕ್ಕೆ ಹೆಮ್ಮೆ ತಂದ ವಿಷಯ. ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಜನರ ಜೊತೆಗಿದ್ದು ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ ಎಂದು ಕೃಷಿಕ ಕೊಡತಲು ರಮೇಶ್ ಭಟ್ ಹೇಳಿದರು.

‘ಅನುದಾನ ಅಭಿವೃದ್ಧಿಗೆ ಬಳಕೆ’
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಂದಿರುವ ಅನುದಾನವನ್ನು ಕ್ರಿಯಾ ಯೋಜನೆ ರೂಪಿಸಿ ಗ್ರಾಮದ ಅಭಿವೃದ್ಧಿಗೆ ಬಳಸಲಾಗುತ್ತದೆ. ಗ್ರಾಮ ಪಂಚಾಯಿತಿಯ ಎಲ್ಲ ಮನೆಗಳು ಶೌಚಾಲಯ ಹೊಂದಿದ್ದು ಕಸ ವಿಲೇವಾರಿಗೆ ಸಾರ್ವಜನಿಕರು ಸಹಕರಿಸಿದ್ದಾರೆ. ಜನಪ್ರತಿನಿಧಿಗಳು ಅಧಿಕಾರಿಗಳ ಸಹಕಾರವೂ ಇದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT