ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ಮನೆಯಲ್ಲಿ ಕಾರ್ಮಿಕರ ಪಾಡು

ಕಾಯ್ದಿರಿಸಿದ ನಿವೇಶನ ಹಂಚಿಕೆ ಮಾಡಲು ಹರಂದೂರು ಗ್ರಾಮಸ್ಥರ ಆಗ್ರಹ
Last Updated 30 ಅಕ್ಟೋಬರ್ 2022, 4:27 IST
ಅಕ್ಷರ ಗಾತ್ರ

ಕೊಪ್ಪ: ಟಾರ್ಪಲ್ ಹೊದ್ದಿರುವ ಚಾವಣಿ, ತಗಡಿನ ಶೀಟುಗಳು ಮತ್ತು ಉಡುವ ಸೀರೆಗಳೇ ಮನೆಯ ಗೋಡೆ. ಇದು ಪ್ರಸ್ತುತ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಕೌರಿಗುಡ್ಡ ಫಸ್ಟ್ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಕೂಲಿ ಕಾರ್ಮಿಕರ ಪಾಡು.

ತಾಲ್ಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದ ಬಡವರು ಆಶ್ರಯ ನಿವೇಶನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಬಹುತೇಕ ಮಂದಿ ಎರಡು ದಶಕದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ನೀಡುತ್ತಿದ್ದಾರೆ.

ನಿವೇಶನ ಒದಗಿಸಲು ಭೂಮಿ ಮಂಜೂರಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ವರ್ಗಾಯಿಸಿ ಕೆಲವು ತಿಂಗಳು ಕಳೆದರೂ ಹಂಚಿಕೆ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

‘ಬಾಡಿಗೆ ಮನೆಯಲ್ಲಿ ಜೀವ ಕೈಯಲ್ಲಿ ಹಿಡಿದು ಮಳೆಗಾಲ ಕಳೆದಿದ್ದೇವೆ, ಇನ್ನು ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಜಾರಿಯಾಗುವುದರಿಂದ ನಿವೇಶನ ಹಂಚಿಕೆ ಎಂಬುದು ಸದ್ಯಕ್ಕೆ ಕನಸಿನ ಮಾತು’ ಎಂಬುದು ನಿವೇಶನರಹಿತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಪತಿ ಕಳೆದುಕೊಂಡು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಕಳೆದ 20 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ನಮಗೆ ನಿವೇಶನ ಹಂಚಿಕೆ ಮಾಡಿಕೊಡಿ, ಬದುಕು ಕಟ್ಟಿಕೊಳ್ಳುತ್ತೇವೆ’ ಎಂದು ಸುಶೀಲಾ ಎಂಬ ಕಾರ್ಮಿಕ ಮಹಿಳೆ ಅಸಹಾಯಕತೆ ತೋಡಿಕೊಂಡಿದ್ದಾರೆ.

‘ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ನಿವೇಶನ ಸಮಸ್ಯೆಯನ್ನು ಬಗೆಹರಿಸಿ. ಇಲ್ಲದಿದ್ದಲ್ಲಿ ವಸತಿ ಹಕ್ಕಿಗಾಗಿ ಗ್ರಾಮ ಪಂಚಾಯಿತಿ ಎದುರು ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ’ ಎಂಬುದಾಗಿ ಸುಮಾರು 25ಕ್ಕೂ ಹೆಚ್ಚು ಮಂದಿ ವಸತಿ ರಹಿತರು ಅ.20ರಂದು ಸ್ಥಳೀಯ ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.

ಮನವಿ ಪತ್ರವನ್ನು ಹರಂದೂರು ಗ್ರಾಮ ಪಂಚಾಯಿತಿ, ಶಾಸಕರ ಕಚೇರಿ, ಜಿಲ್ಲಾ ಪಂಚಾಯಿತಿ ಸಿಇಒ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಡಿವೈಎಸ್ಪಿ
ಅವರಿಗೆ ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT