ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ಕಾಲು ಸೇತುವೆಗೆ ಬೇಕಿದೆ ಕಾಯಕಲ್ಪ!

ಮೂಲಸೌಕರ್ಯ ಕಲ್ಪಿಸುವಂತೆ ಅಬ್ಬಿಗುಂಡಿ ಗ್ರಾಮಸ್ಥರಿಂದ ಸರ್ಕಾರಕ್ಕೆ ಮೊರೆ
Last Updated 2 ಜುಲೈ 2019, 20:00 IST
ಅಕ್ಷರ ಗಾತ್ರ

ಕೊಪ್ಪ: ಅಬ್ಬಿಗುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ಕಾಲು ಸೇತುವೆಯ ಎರಡೂ ಬದಿಯಲ್ಲಿ ಜಖಂಗೊಂಡಿದ್ದು, ಗ್ರಾಮಸ್ಥರು ಓಡಾಡಲು ಪರದಾಡುವಂತಾಗಿದೆ.

ನಮಗೆ ರಸ್ತೆ ನಿರ್ಮಿಸಿ ಕೊಡಿ ಮತ್ತು ಕಾಲು ಸೇತುವೆಯನ್ನು ದುರಸ್ತಿಪಡಿಸಿಕೊಡಿ ಎಂದು ತಾಲ್ಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಅಬ್ಬಿಗುಂಡಿ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

9 ಕುಟುಂಬಗಳು ವಾಸವಿರುವ ಪ್ರದೇಶಕ್ಕೆ ಓಡಾಡಲು ಗಡಿಕಲ್ ಮಾರ್ಗವಾಗಿ ಗಣಪತಿ ಕಟ್ಟೆ ಮೂಲಕ ಮಣ್ಣಿನ ರಸ್ತೆ ಇದ್ದು, ಹೊಂಡ ಗುಂಡಿಗಳಿಂದ ಕೂಡಿದೆ. ಈ ಮಾರ್ಗದಲ್ಲಿ ಐದಾರು ಕಿಲೋ ಮೀಟರ್ ದೂರ ಸುತ್ತು ಬಳಸಿ ತಲುಪಬೇಕಾಗಿದೆ. ಈ ಭಾಗಕ್ಕೆ ಯಾವುದೇ ವಾಹನಗಳು ಬಾರದಷ್ಟು ರಸ್ತೆ ಹದಗೆಟ್ಟಿರುವುದಕ್ಕೆ ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಪ್ರತಿಯೊಂದು ಸಭೆಯಲ್ಲೂ ಸಮಸ್ಯೆ ನಿವಾರಿಸುವಂತೆ ನಾವು ಹೇಳಿದಾಗಲೂ ಕೇವಲ ಭರವಸೆಯನ್ನಷ್ಟೇ ನೀಡುತ್ತಿದ್ದಾರೆ. ಇಲ್ಲಿರುವ ವೃದ್ಧರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ವಾಹನಗಳ ಮೂಲಕ ಕರೆದೊಯ್ಯಲು ಗ್ರಾಮಕ್ಕೆ ಬರಲು ಯಾವ ವಾಹನದವರೂ ಒಪ್ಪುವುದಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಇದೇ ಗ್ರಾಮದ ಕಾಲೇಜು ವಿದ್ಯಾರ್ಥಿಯೊಬ್ಬ ಪಟ್ಟಣದಲ್ಲಿ ಬೈಕ್ ಅಪಘಾತದಲ್ಲಿ ಸಿಲುಕಿ, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಅವನಿಗೆ ಚಿಕಿತ್ಸೆ ಕೊಡಿಸಲೆಂದು ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲು ಬಂದಿದ್ದ ಆಂಬುಲೆನ್ಸ್‌ ಹೊಂಡದ ರಸ್ತೆಯಲ್ಲಿ ಹೋಗಲು ಕಷ್ಟವಾಗಿದ್ದರಿಂದ ಗ್ರಾಮಸ್ಥರೇ ಒಟ್ಟಾಗಿ ವಾಹನವನ್ನು ದೂಡಿಕೊಟ್ಟಿದ್ದೆವು ಎಂಬುದಾಗಿ ಅಲ್ಲಿನ ವ್ಯಕ್ತಿಯೊಬ್ಬರು ತಿಳಿಸುತ್ತಾರೆ.

ಕಾಲು ಸಂಕದಿಂದ ಹಳ್ಳಕ್ಕೆ ಜಾರಿ ಬಿದ್ದ ಬಾಲಕಿಯನ್ನು ಶಿಕ್ಷಕಿ ರಕ್ಷಿಸಿದ ಘಟನೆ ನಂತರದ ಬೆಳವಣಿಗೆಯಾಗಿ ಇದೇ ಜಾಗಕ್ಕೆ ಕಾಲು ಸೇತುವೆಯನ್ನು ಸರ್ಕಾರ ನಿರ್ಮಿಸಿ ಕೊಟ್ಟಿತ್ತು. ಇದೀಗ, ಅದೂ ಕೂಡ ಇಬ್ಬದಿಯಲ್ಲಿ ಜಖಂಗೊಂಡು ಕಾಲು ಹಾದಿ ಸಂಪರ್ಕವನ್ನು ಕಳೆದುಕೊಂಡಿದೆ. ಸಂಪರ್ಕಕ್ಕಾಗಿ ಸೇತುವೆಗೆ ಸ್ಥಳೀಯರು ಮರದ ಹಲಗೆ, ಅಡಿಕೆ ಮರದ ತುಂಡು ಜೋಡಿಸಿದ್ದಾರೆ. ಮಳೆಗಾಲದಲ್ಲಿ ಇಂತಹ ದುಸ್ಥಿತಿಯಲ್ಲಿರುವ ಸೇತುವೆ ಮೇಲೆ ಓಡಾಡುವುದೆಂದರೆ ಜೀವ ಭಯವಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಪತ್ರ ಬರೆದಿರುವ ಗ್ರಾಮಸ್ಥರು ರಸ್ತೆ ನಿರ್ಮಿಸಿ ಕೊಡುವಂತೆ, ಕಾಲು ಸೇತುವೆಯನ್ನು ದುರಸ್ತಿಪಡಿಸಿಕೊಡಬೇಕೆಂಬ ಮನವಿಯನ್ನು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಬಾಲಕಿಯನ್ನು ರಕ್ಷಿಸಿದ್ದ ಶಿಕ್ಷಕಿ

ಕೆಲವು ವರ್ಷಗಳ ಹಿಂದೆ ಆಲೇಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿ ವಾಪಸ್ಸಾಗುತ್ತಿದ್ದಾಗ ಬಾಲಕಿಯೊಬ್ಬಳು ಕಾಲು ಸಂಕದಿಂದ ಜಾರಿ ಹಳ್ಳಕ್ಕೆ ಬಿದ್ದಿದ್ದಳು. ಇದೇ ಸಂದರ್ಭ ಜತೆಗಿದ್ದ ಬಾಲಕಿಯ ಊರಿನವರೇ ಆದ ಶಿಕ್ಷಕಿ ಶೈಲಾ ಎಂಬುವವರು ಧೈರ್ಯ ತೋರಿ ಹಳ್ಳಕ್ಕೆ ಜಿಗಿದು, ಬಾಲಕಿಯನ್ನು ರಕ್ಷಿಸಿದ್ದರು ಎಂಬುದನ್ನು ಗ್ರಾಮಸ್ಥರು ನೆನಪು ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT