ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕೆಟ್ ರಸ್ತೆಯಲ್ಲಿ ನಿತ್ಯ ವಾಹನ ದಟ್ಟಣೆ

ಕೊಪ್ಪ ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ, ಜನರಿಗೆ ತಪ್ಪದ ಬವಣೆ
Last Updated 14 ಮಾರ್ಚ್ 2023, 5:05 IST
ಅಕ್ಷರ ಗಾತ್ರ

ಕೊಪ್ಪ: ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ವಾಹನ ಸವಾರರಿಗೆ ಪರದಾಟ, ಸಾರ್ವಜನಿಕರಿಗೆ ನಿತ್ಯ ಕಿರಿಕಿರಿಯಾಗಿ ಪರಿಣಮಿಸಿದೆ.

ಕಾಯಿ ಮಾರುಕಟ್ಟೆ ರಸ್ತೆಯಲ್ಲಿ ತೆಂಗಿನಕಾಯಿ ಅಂಗಡಿ ಒಳಗೊಂಡಂತೆ ದಿನಸಿ ಅಂಗಡಿಗಳು, ಗ್ಯಾರೇಜ್, ಹೋಟೆಲ್ ಮುಂತಾದವುಗಳು ಇವೆ. ಗುಂಡಿ ಬಿದ್ದ ಈ ರಸ್ತೆಯಲ್ಲಿ ಕೆಲವೊಮ್ಮೆ ವಾಹನಗಳನ್ನು ಮತ್ತೊಂದು ರಸ್ತೆಗೆ ದಾಟಿಸಲು ಚಾಲಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ.

ಕಾಯಿ ಮಾರುಕಟ್ಟೆ ರಸ್ತೆಯಲ್ಲಿನ ಅಂಗಡಿಗಳಲ್ಲಿ ಏನಾದರೂ ಖರೀದಿಸುವ ಉದ್ದೇಶವಿಟ್ಟುಕೊಂಡು ಅಲ್ಲಿ ವಾಹನ ನಿಲ್ಲಿಸಬೇಕೆಂದರೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಒಂದೆಡೆ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನಗಳು, ಮತ್ತೊಂದೆಡೆ ಕಿರಿದಾದ ರಸ್ತೆ. ಇಕ್ಕೆಲಗಳಲ್ಲಿ ಜನರು ನಡೆದುಕೊಂಡು ಹೋಗಲು ಪಾದಚಾರಿ ಮಾರ್ಗವೂ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದ ಆವರಣ ಸಂಪರ್ಕಿಸುವಲ್ಲಿ ವಾಹನ ಪಾರ್ಕಿಂಗ್‌ಗೆ ಸ್ವಲ್ಪವೇ ಜಾಗವಿದ್ದು, ಅಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರೂ ಅದನ್ನೂ ದಾಟಿಸಿ ವಾಹನ ನಿಲ್ಲಿಸುವುದನ್ನು ನಿತ್ಯ ಕಾಣಬಹುದಾಗಿದೆ. ಇದು ವಾಹನ ಸವಾರರಿಗೆ ಅನಿವಾರ್ಯವೆಂಬಂತೆಯೂ ಆಗಿದೆ.

‘ಮಾರ್ಕೆಟ್ ರಸ್ತೆ ಅಭಿವೃದ್ಧಿಗಾಗಿ ಪಟ್ಟಣ ಪಂಚಾಯಿತಿ ವತಿಯಿಂದ ನಗರೋತ್ಥಾನದಲ್ಲಿ ₹8 ಲಕ್ಷ ಕಾಯ್ದಿಡಲಾಗಿದೆ. ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಟೆಂಡರ್ ಹಾಕಲು ಯಾರೂ ಮುಂದಕ್ಕೆ ಬಂದಿರಲಿಲ್ಲ’ ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ಮೈತ್ರಾ ಗಣೇಶ್ ಪ್ರತಿಕ್ರಿಯಿಸಿದ್ದಾರೆ.

‘ಕಾಯಿ ಮಾರ್ಕೆಟ್ ರಸ್ತೆ ಕಿರಿದಾಗಿದ್ದು, ಜತೆಗೆ ಹೊಂಡ ಗುಂಡಿಗಳಿಂದ ಕೂಡಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಪಟ್ಟಣ ಪಂಚಾಯಿತಿಗೆ ಕೋಟ್ಯಂತರ ರೂಪಾಯಿ ಅನುದಾನ ಅಭಿವೃದ್ಧಿಗಾಗಿ ಬಂದಿದೆ ಎಂದು ಹೇಳುತ್ತಾರೆ. ಬಂದ ಹಣವನ್ನು ಎಲ್ಲಿಗೆ ಖರ್ಚು ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಪಟ್ಟಣ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳು ಒತ್ತುಕೊಡಬೇಕಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT