ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಸಿಎಂ, ಕಾಂಗ್ರೆಸ್‌ನಲ್ಲಿ ಈಗಲೇ ಸಂಗೀತ ಕುರ್ಚಿ ಆಟ ಶುರು: ನಳಿನ್‌ಕುಮಾರ್‌

Last Updated 29 ಅಕ್ಟೋಬರ್ 2020, 12:42 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಹುಡುಗಿ ಹುಡುಕಿಲ್ಲ, ‘ಎಂಗೇಜ್‌ಮೆಂಟ್‌’ ಆಗಿಲ್ಲ, ಆಗಲೇ ಮಗು ನಾಮಕರಣಕ್ಕೆ ಕಾಂಗ್ರೆಸ್‌ನಲ್ಲಿ ಸಂಗೀತ ಕುರ್ಚಿ (ಮ್ಯುಸಿಕಲ್‌ ಚೇರ್‌) ಶುರುವಾಗಿದೆ. ಮುಂದಿನ ಮುಖ್ಯಮಂತ್ರಿ ಎಂದು ಟವೆಲ್‌ ಹಾಕಲು ಈಗಲೇ ಶುರು ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು, ‘ರಾಜ್ಯ ಸರ್ಕಾರದ ಅವಧಿ ಇನ್ನು ಮೂರೂವರೆ ವರ್ಷ ಇದೆ।. ಆಗಲೇ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ಸ್ಪರ್ಧೆ, ಜಗಳ ಆರಂಭವಾಗಿದೆ. ಈಗಲೇ ಹೀಗೆ ಆಡಿದರೆ ಇನ್ನು ಅಧಿಕಾರ ಕಾಲ ಸನ್ನಿಹಿತವಾದರೆ ಹೇಗೆ ಆಡಬಹುದು’ ಎಂದು ಲೇವಡಿ ಮಾಡಿದರು.

‘ಬಿಜೆಪಿಯು ಮೋದಿ ಮತ್ತು ಯಡಿಯೂರಪ್ಪ ನೇತೃತ್ವದ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಶಿರಾ ಮತ್ತು ಆರ್‌.ಆರ್‌.ನಗರ ಉಪಚುನಾವಣೆಯಲ್ಲಿ ಮತ ಯಾಚಿಸುತ್ತಿದ್ದೇವೆ. ಕಾಂಗ್ರೆಸ್‌, ಜೆಡಿಎಸ್‌ ಚುನಾವಣೆ ಸಂದರ್ಭದಲ್ಲಿ ಜಾತಿ ರಾಜಕಾರಣದಲ್ಲಿ ತೊಡಗಿವೆ’ ಎಂದು ಟೀಕಿಸಿದರು.

‘ಶಿರಾ ಕ್ಷೇತ್ರದಲ್ಲಿ ಮತದಾರರು ಹಲವಾರು ವರ್ಷಗಳಿಂದ ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಅವರ ಕಾರ್ಯವೈಖರಿಗೆ ಬೇಸತ್ತಿದ್ದಾರೆ. ಕೆರೆಗಳಿಗೆ ನೀರು ಹರಿಸಲು ಕ್ರಮ ವಹಿಸಿಲ್ಲ, ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂಬ ಆಕ್ರೋಶ ಇದೆ. ಟಿ.ಬಿ.ಜಯಚಂದ್ರ ಎರಡು ಬಾರಿ ಆಯ್ಕೆಯಾದರೂ ಕ್ಷೇತ್ರದ ಅಭಿವೃದ್ಧಿಗೆ ಗಮನಕೊಟ್ಟಿಲ್ಲ, ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಇತ್ತ ಗಮನ ಹರಿಸಿಲ್ಲ ಎಂಬ ಬೇಸರ ಇದೆ. ಹೊಸಮುಖ ಆಯ್ಕೆಗೆ ಮತದಾರರು ಒಲವು ತೋರುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಂಟ್ವಾಳದಲ್ಲಿ ದುಷ್ಕರ್ಮಿಗಳು ಅಂಗಡಿಯ ಒಳಕ್ಕೆ ನುಗ್ಗಿ ಬಿಜೆಪಿ ಕಾರ್ಯಕರ್ತ ದಿನೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಮತೀಯ ಗಲಭೆ ಸೃಷ್ಟಿಸಲು ಮಾಡಿರುವ ಕೃತ್ಯ. ಪ್ರಕರಣದ ಹಿಂದೆ ಯಾವುದಾದರೂ ಸಂಘಟನೆ ಕೈವಾಡ ಹಿಂದೆಯೇ ಎಂಬ ಬಗ್ಗೆ ತನಿಖೆ ಮಾಡುವಂತೆ ತಿಳಿಸಿದ್ದೇವೆ’ ಎಂದು ಉತ್ತರಿಸಿದರು.

ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಆರೋಪ: ಸಿ.ಟಿ.ರವಿ

ಚಿಕ್ಕಮಗಳೂರು: ‘ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರು ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಬಿಜೆಪಿಯನ್ನು ಆರೋಪಿಸುತ್ತಾರೆ’ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕುಟುಕಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುನಿರತ್ನ ಕ್ರಿಮಿನಲ್‌ ಹಿನ್ನೆಲೆ ಇರುವವರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಮುನಿರತ್ನ ಅವರಿಗೆ ಎರಡು ಬಾರಿ ಟಿಕೆಟ್‌ ನೀಡಿ ಶಾಸಕರಾಗಿ ಮಾಡಿರಲಿಲ್ಲವೇ? ಕಾಂಗ್ರೆಸ್‌ನಲ್ಲಿದ್ದರೆ ಸಂಭಾವಿತ, ತ್ಯಜಿಸಿದರೆ ಕ್ರಿಮಿನಲ್‌ ಎಂದರ್ಥವೇ?’ ಎಂದು ಪ್ರಶ್ನಿಸಿದರು.

‘2018ರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಮುನ್ನಿರತ್ನ ಅವರನ್ನು ಇಂದ್ರ, ಚಂದ್ರ, ದೇವೇಂದ್ರ ಎಂದು ಡಿ.ಕೆ. ಶಿವಕುಮಾರ್ ಬಣ್ಣಿಸಿದ್ದರು. ಈಗ ರಾಗ ಬದಲಾಯಿಸಿದ್ದಾರೆ’ ಎಂದು ಛೇಡಿಸಿದರು.

‘ಬಿಜೆಪಿ ಮತ್ತು ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ ಎಂದು 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್‌ನವರು ಆರೋಪಿಸಿದ್ದರು. ಆದರೆ, ಚುನಾವಣೆ ಮುಗಿಯುತ್ತಿದ್ದಂತೆ ಅವರೇ ಜೆಡಿಎಸ್‌ ಜತೆ ಒಪ್ಪಂದ ಮಾಡಿಕೊಂಡಿದ್ದರು’ ಎಂದು ಮೂದಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT