ಅಡಿಕೆ,ಕಾಫಿ ಮತ್ತು ಕಾಳುಮೆಣಸುಗೆ ಕೊಳೆರೋಗ

7
ತತ್ತರಿಸಿದ ಶೃಂಗೇರಿ ತಾಲ್ಲೂಕಿನ ರೈತರು

ಅಡಿಕೆ,ಕಾಫಿ ಮತ್ತು ಕಾಳುಮೆಣಸುಗೆ ಕೊಳೆರೋಗ

Published:
Updated:
Deccan Herald

ಶೃಂಗೇರಿ: ಶೃಂಗೇರಿ ತಾಲ್ಲೂಕಿನಲ್ಲಿ ಸರಾಸರಿ 120 ರಿಂದ 140 ಇಂಚು ವಾಡಿಕೆ ಮಳೆಯಾಗುತ್ತಿತ್ತು.ಆದರೆ ಈ ಬಾರಿ ಜನವರಿಯಿಂದ ಆಗಸ್ಟ್ 1 ನೇ ತಾರೀಖಿನವರೆಗೆ ಬಂದ ಮಳೆ 133 ಇಂಚು.2017ರಲ್ಲಿ ಆಗಸ್ಟ್‍ವರೆಗೆ 66 ಇಂಚು ಮಳೆಯಾಗಿತ್ತು.

ಜೂನ್‍ನಲ್ಲಿ ಅಡಿಕೆ ತೋಟಗಳಿಗೆ ನೊದಲಬಾರಿ ಬೋರ್ಡೋ ಸಿಂಪಡಿಸುತ್ತಿದ್ದ ಇಲ್ಲಿನ ಶೇಕಡಾ 40 ರಷ್ಟು ಕೃಷಿಕರು ವಿಪರೀತ ಮಳೆ ಬಂದ ಕಾರಣ ತೋಟಕ್ಕೆ ಜೌಷಧಿ ಸಿಂಪಡಣೆ ಮಾಡದ ಕಾರಣ ಶೇಕಾಡ 60 ರಷ್ಟು ಕೊಳೆರೋಗ ಎದುರಾಗಿ ಭೀತಿ ಕಾಡುತ್ತಿದೆ.ತೋಟಗಾರಿಕಾ ಇಲಾಖೆಯ ಶಿಫಾರಸ್ಸಿನಂತೆ 45 ರಿಂದ 50 ಇಂಚು ಮಳೆಯಾಗುವ ಮುನ್ನ ತೋಟಗಳಿಗೆ ಮೊದಲನೇ ಜೌಷಧ ಸಿಂಪಡಣೆ ತೀರಾ ಅಗತ್ಯವಾಗಿದೆ.ಆದರೆ ಮಳೆಯ ಅಬ್ಬರದಿಂದ ರೈತರು ಪ್ರಸ್ತುತ ತೊಂದರೆಗೆ ಸಿಲುಕಿದ್ದಾರೆ.

ಹೆಚ್ಚಿದ ಕಾರ್ಮಿಕರ ಬೇಡಿಕೆ: ತಾಲ್ಲೂಕಿನಲ್ಲಿ ಜೌಷಧ ಸಿಂಪಡಣೆ ಮಾಡುವ ಕಾರ್ಮಿಕ ವರ್ಗ ಸೀಮಿತವಾಗಿದೆ.ಇದರಿಂದ ಮಳೆ ಕಡಿಮೆಯಾದ ತಕ್ಷಣ ಕಾರ್ಮಿಕರ ಬೇಡಿಕೆ ಹೆಚ್ಚುತ್ತದೆ.ಹಲವಾರು ರೈತರ ತೋಟಗಳಲ್ಲಿ ಜೌಷಧ ಸಿಂಪಡಣೆ ಮಾಡುವ ಜವಾಬ್ದಾರಿಯನ್ನು ಅವರು ಹೊಂದಿದ್ದು ಕ್ಷಪ್ತ ಕಾಲದಲ್ಲಿ ಕಾರ್ಮಿಕರು ಸಿಗದ ಕಾರಣ ತೋಟಗಳು ಮಳೆಗೆ ನಲಗುತ್ತಿದೆ.

ತಾಲ್ಲೂಕಿನಲ್ಲಿ ಜೌಷಧಿ ಸಿಂಪಡಣೆಯ ಪ್ರಕ್ರಿಯೆ: 40 ವರ್ಷಗಳಿಂದ ಕೃಷಿಕರನ್ನು ಬೆಂಬಿಡದೇ ಕಾಡಿದ ಅಡಿಕೆ ಹಳದಿ ಎಲೆರೋಗದ ಜೊತೆಗೆ ಮಳೆಯ ಅವಾಂತರ ಸೃಷ್ಟಿಸುವ ಕೊಳೆ ರೋಗದ ಸಮಸ್ಯೆ ಎದುರಾಗಿದೆ.ಜೂನ್ ತಿಂಗಳಲ್ಲಿ ಬೋರ್ಡೋ ಸಿಂಪಡಣೆಯ ಕಾರ್ಯ ಪ್ರಾರಂಭವಾಗುತ್ತದೆ. 40 ದಿನಗಳ ಬಳಿಕ ಎರಡನೇ ಬಾರಿ ತೋಟಗಳಿಗೆ ಜೌಷಧ ಸಿಂಪಡಣೆ,ಮಳೆ ಜಾಸ್ತಿ ಇದ್ದರೆ ಮೂರನೇ ಬಾರಿ ಸುಣ್ಣ,ಮೈಲುತುತ್ತ,ರಾಳ ಬಳಸುವ ಪದ್ಧತಿಯಿದೆ. ಈ ಬಾರಿ ಸತತವಾಗಿ ಹೊಡೆದ ಮಳೆಯಿಂದ ರೈತರು ಎರಡನೇ ಬಾರಿ ಜೌಷಧಿ ನೀಡಲು ಸಾಧ್ಯವಾಗುತ್ತಿಲ್ಲ.ಒಂದೇ ಕಡೆ ಅಡಿಕೆ ತೋಟವಿರುವ ಪ್ರದೇಶದಲ್ಲಿ ಒಂದು ತೋಟಕ್ಕೆ ರೋಗ ತಗಲಿದರೆ ಅದು ಬೇರೆ ತೋಟಕ್ಕೆ ಹಬ್ಬುವ ಸಾಧ್ಯತೆ ಇದೆ.

ಉದುರುತ್ತಿರುವ ಕಾಫಿ ಗಿಡದ ಕಾಯಿಗಳು: ಪರ್ಯಾಯ ಬೆಳೆಯಾಗಿ ಬೆಳೆಸಿದ ಕಾಫಿಗಿಡಗಳ ಕಾಯಿಗಳು ಉದುರಲು ಪ್ರಾರಂಭಗೊಂಡಿವೆ. ತಾಲ್ಲೂಕಿನಲ್ಲಿ ಶೇಕಡಾ 30ರಷ್ಟು ರೈತರ ತೊಟಗಳಲ್ಲಿ ಕಾಯಿಗಳು ನೆಲಕ್ಕೆ ಉರುಳಿವೆ.ಮಲೆನಾಡಿಗೆ ಹೊಂದಿಕೊಳ್ಳುವ ರೋಬಸ್ಟಾ ಗಿಡಗಳನ್ನು ನೆಟ್ಟು ಉತ್ತಮ ಫಸಲನ್ನು ತೆಗೆಯುವ ನಿರೀಕ್ಷೆ ರೈತರಲ್ಲಿತ್ತು.ಏಕೆಂದರೆ ಇದು ದೀರ್ಘಾವಧಿ ಬೆಳೆ.ಉಷ್ಣಾಂಶ ಹಾಗೂ ತೇವಾಂಶಗಳನ್ನು ತಡೆಯುವ ಶಕ್ತಿ ಇದೆ.ಆದರೆ ಈ ಬಾರಿ ಶೇಕಡಾ 25 ರಷ್ಟು ಕೃಷಿಕರ ತೋಟಗಳಲ್ಲಿ ಕಾಫಿ ಗಿಡದ ಬೆಳೆಗಳು ಅತಿಯಾದ ತೇವಾಂಶದಿಂದ ನಾಶವಾಗುತ್ತಿದೆ.

ಸೊರಗು ರೋಗದ ಭೀತಿ: ಸಮೃದ್ಧವಾಗಿ ಬೆಳೆದ ಕಾಳು ಮೆಣಸಿನ ಬಳ್ಳಿಗಳಿಗೆ ಸೊರಗು ರೋಗದ ಭೀತಿ ಎದುರಾಗಿದೆ. ಪಣಿಯೂರು,ಕರಿಮುಂಡ ಮುಂತಾದ ಕಾಳುಮೆಣಸಿನ ಗರೆ ಉದುರುತ್ತಿರುವ ಕಾರಣ ಹೆಚ್ಚಿನ ಬೆಳೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಒಟ್ಟಾರೆ ಪ್ರಸ್ತುತ ಸುರಿಯುತ್ತಿರುವ ಮಳೆಯಿಂದ ರೈತರ ಸ್ಥಿತಿ ಅತಂತ್ರದಲ್ಲಿದೆ.

ಮಳೆ ಬಿಟ್ಟ ವೇಳೆಯಲ್ಲಿ ಒಂದು ಎಕ್ರೆ ಕಾಫಿತೋಟಕ್ಕೆ ಒಂದು ಚೀಲ ಯೂರಿಯ ಹಾಕಬೇಕಿದೆ.ಜೊತೆಗೆ ಶೇಕಡಾ 1 ರಷ್ಟು ಬೋರ್ಡೋ ದ್ರಾವಣ ಗಿಡಗಳಿಗೆ ಸಿಂಪಡಿಸಬೇಕಿದೆ.ಪ್ರಾಕೃತಿಕ ವಿಕೋಪದಿಂದ ಬೆಳೆಗಳು ನಾಶವಾಗುತ್ತಿದೆ.ಸರ್ಕಾರ ರೈತರಿಗೆ ಸಮಸ್ಯೆಗಳ ಬಗ್ಗೆ ಗಂಭೀರವಾದ ಚಿಂತನೆ ಮಾಡಬೇಕಿದೆ.ಇಗಾಗಲೇ ಕಾಫಿ ಶೇಕಾಡ 10% ನಾಶವಾಗಿದೆ.
- ಎನ್,ಎಸ್ ದೇವರಾಜ್,ವಿಸ್ತರಣಾ ಅಧಿಕಾರಿ, ಕಾಫಿಮಂಡಳಿ ಘಟಕ,ಶೃಂಗೇರಿ

ಕಳೆದ ಮೂರು ದಶಕದಲ್ಲಿಯೇ ಅತ್ಯಂತ ಹೆಚ್ಚಾಗಿರುವ ಮಳೆಯಿಂದ ರೈತರ ತೋಟದ ಬೆಳೆಗಳನ್ನು ಸಂರಕ್ಷಿಸಲು ಸಾಧ್ಯವಾಗುತ್ತಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚಾಗಿರುವ ಮಳೆಯಿಂದ ಜೌಷಧಿ ಸಿಂಪಡಣೆಗೆ ಅಡ್ಡಿಯಾಗುತ್ತಿದೆ.ಈ ವರ್ಷ ತೋಟದ ಬೆಳೆಗಳಿಂದ ಹೆಚ್ಚಿನ ಅರ್ಥಿಕ ಲಾಭ ನಿರೀಕ್ಷಿಸುವುದು ಅಸಾಧ್ಯ ಹಾಗೂ ಕೃಷಿಯನ್ನೆ ಆಧಾರವಾಗಿ ನಂಬಿರುವ ತಾಲ್ಲೂಕಿನ ರೈತರಿಗೆ ಸರ್ಕಾರ ಹೆಚ್ಚಿನ ಸಹಕಾರ ನೀಡುವ ಅವಶ್ಯಕತೆ ಇದೆ.
- ಕಲ್ಕುಳಿ ವಿಠಲ್ ಹೆಗ್ಗಡೆ ಪ್ರಗತಿಪರ ಕೃಷಿಕರು

ಶೃಂಗೇರಿ ತಾಲ್ಲೂಕಿನಲ್ಲಿ ಸುಮಾರು 2700 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಿವೆ.ಅಡಿಕೆ,ಕಾಳುಮೆಣಸು,ಕಾಫಿ ಮುಂತಾದ ಬೆಳೆಗಳು ಇಲ್ಲಿ ಅಧಿಕವಾಗಿದೆ.ಅಡಿಕೆ ಹಾಗೂ ಕಾಳುಮೆಣಸಿಗೆ ಬರುವ ಕೊಳೆರೋಗ.ಎಲೆಚುಕ್ಕೆರೋಗ,ಸೊರಗುರೋಗ ಮುಂತಾದ ರೋಗಗಳನ್ನು ಅಧಿಕಮಳೆಯಿಂದ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ.ಸಸ್ಯ ಸಂರಕ್ಷಣಾ ಕಾರ್ಯಗಳ ಕುರಿತು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ರೈತರಿಗೆ ಮಾರ್ಗದರ್ಶನ ನೀಡಬೇಕಾಗಿದೆ. ಈ ಕುರಿತು ಅವರಿಗೆ ಮನವಿ ಸಲ್ಲಿಸಲಾಗಿದೆ.
- ಶ್ರೀಕೃಷ್ಣ,ಸಹಾಯಕ ತೋಟಗಾರಿಕಾ ನಿರ್ದೇಶಕರು,ಶೃಂಗೇರಿ
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !