ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆಮುಖದಲ್ಲಿ ವಾರಂತ್ಯದ ಚಾರಣಕ್ಕೆ ನೂಕುನುಗ್ಗಲು..!

ದಿನಕ್ಕೆ 300 ಜನರಿಗೆ ಮಾತ್ರ ಅವಕಾಶ ನೀಡುತ್ತಿರುವ ಅರಣ್ಯ ಇಲಾಖೆ
Published 14 ಜುಲೈ 2023, 20:44 IST
Last Updated 14 ಜುಲೈ 2023, 20:44 IST
ಅಕ್ಷರ ಗಾತ್ರ

-ರವಿ ಕೆಳಂಗಡಿ

ಕಳಸ: ರಾಜ್ಯದ ಪ್ರಮುಖ ಚಾರಣ ತಾಣವಾದ ಕುದುರೆಮುಖ ಗಿರಿಶ್ರೇಣಿಯನ್ನು ಏರಲು ವಾರಾಂತ್ಯದಲ್ಲಿ ನೂಕುನುಗ್ಗಲು ಶುರು ಆಗಿದೆ. ಮಲೆನಾಡಿನಲ್ಲಿ ಮಳೆಗಾಲದ ಟ್ರಕ್ಕಿಂಗ್ ಜನಪ್ರಿಯಗೊಳ್ಳುತ್ತಿದ್ದು, ವಾರಾಂತ್ಯದಲ್ಲಿ ನೂರಾರು ಯುವಜನರು ರಾಜ್ಯದ ವಿವಿಧೆಡೆಯಿಂದ ಕುದುರೆಮುಖದತ್ತ ಮುಖ ಮಾಡುತ್ತಿದ್ದಾರೆ. 

ದಿನಕ್ಕೆ 300 ಜನರಿಗೆ ಮಾತ್ರ ಚಾರಣಕ್ಕೆ ಅವಕಾಶ ಎಂಬ  ಅರಣ್ಯ ಇಲಾಖೆ ನಿಯಮ ಚಾರಣ ಪ್ರಿಯರಲ್ಲಿ ನಿರಾಶೆ ತರುತ್ತಿದೆ. ಕಳೆದ ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಕಾರಣಕ್ಕೆ ಕುದುರಮುಖ ಚಾರಣ ನಿಲ್ಲಿಸಲಾಗಿತ್ತು. ಜೂನ್ ತಿಂಗಳಲ್ಲಿ ಮತ್ತೆ ಅವಕಾಶ ನೀಡಲಾಗಿದ್ದು, ಆಸಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.

ಕಳೆದ ವರ್ಷ ದಿನವೊಂದಕ್ಕೆ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಬಾರಿ ವಾರಾಂತ್ಯದಲ್ಲಿ ಚಾರಣಕ್ಕೆ ಬರುತ್ತಿರುವವರ ಸಂಖ್ಯೆ ಸಾವಿರಕ್ಕೂ ಹೆಚ್ಚು ಇರುವುದರಿಂದ ಅರಣ್ಯ ಇಲಾಖೆ 300 ಜನರಿಗೆ ಅವಕಾಶವನ್ನು ನೀಡಿದೆ. ಚಾರಣಕ್ಕೆ ಹೋಗಲು ಬಯಸುವವರಿಗೆ  ಆನ್‍ಲೈನ್ ಮೂಲಕ ಮುಂಗಡ ಬುಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳ ಬಹುತೇಕ ವಾರಾಂತ್ಯದ ದಿನಗಳ ಚಾರಣದ ಬುಕಿಂಗ್‌ (300 ಜನರ ಮಿತಿಯಲ್ಲಿ) ಮುಗಿದಿದೆ ಎಂಬ ಮಾಹಿತಿ ಇದೆ. ಬುಕಿಂಗ್‌ ಮಾಡಲು ಸಾಧ್ಯವಾಗದಿರುವ ಚಾರಣ ಪ್ರಿಯರಲ್ಲಿ ಇದು ನಿರಾಶೆ ತರುತ್ತಿದೆ.

'ಸಂಸೆ ಗ್ರಾಮದಲ್ಲಿ 30ಕ್ಕೂ ಹೆಚ್ಚು ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಕುದುರೆಮುಖ ಚಾರಣಕ್ಕೆ ಬರುವ ಪ್ರವಾಸಿಗರೇ ಇಲ್ಲಿನ ಅತಿಥಿಗಳು. ಆದರೆ, ಸ್ಥಳೀಯ ಹೋಂ ಸ್ಟೇ ಅತಿಥಿಗಳಿಗೆ ಚಾರಣಕ್ಕೆ ಅವಕಾಶ ಸಿಗದೆ ಅವರು ನಿರಾಸೆಯಿಂದ ಮರಳುವಂತಾಗಿದೆ' ಎಂದು ಹೋಂಸ್ಟೇ ಮಾಲೀಕರಾದ ಕಡೇಪಾಲ್ ಪ್ರದೀಪ್ ಹೇಳಿದರು.

ಬೆಂಗಳೂರು ಮೂಲದ ಪ್ರವಾಸ ನಿರ್ವಹಣೆ ಸಂಸ್ಥೆಗಳು ಆನ್‍ಲೈನ್ ಮೂಲಕ ನೂರಿನ್ನೂರು ಟಿಕೆಟ್‍ಗಳನ್ನು ಬುಕಿಂಗ್ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಹೋಂಸ್ಟೇ ಅತಿಥಿಗಳಿಗೆ ಟಿಕೆಟ್ ಸಿಗುತ್ತಿಲ್ಲ. ಪರಿಣಾಮವಾಗಿ ಅನೇಕ ಹೋಂಸ್ಟೇಗಳಿಗೆ ಈಗ ಜನರೇ ಬರುತ್ತಿಲ್ಲ ಎನ್ನುತ್ತಾರೆ ಪ್ರದೀಪ್‌.

‘300 ಜನರ ಮಿತಿ ದಾಟಿದ ಮೇಲೂ ಅರಣ್ಯ ಇಲಾಖೆಯು ಹೆಚ್ಚುವರಿ ಟಿಕೆಟ್‍ಗಳನ್ನು ನಿಯಮ ಬಾಹಿರವಾಗಿ ಕೊಡುತ್ತದೆ’ ಎಂಬ ಸ್ಥಳೀಯರ ಆರೋಪವನ್ನು ವಲಯ ಅರಣ್ಯಾಧಿಕಾರಿ ಜ್ಯೋತಿ ಮೆಣಸಿನಕಾಯಿ ತಳ್ಳಿಹಾಕಿದರು.

ಆಗಸ್ಟ್‌ವರೆಗೆ ವಾರಾಂತ್ಯದ ಚಾರಣದ ಟೆಕೆಟ್‍ಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ, ಕೆಲವರು ವಾರದ  ಇತರೆ ದಿನಗಳಲ್ಲಿ ಕುದುರೆಮುಖ ಗಿರಿ ಏರುವ ಯೋಜನೆ ರೂಪಿಸುತ್ತಿದ್ದಾರೆ. ಕುರಿಂಜಾಲು, ಬಂಡಾಜೆ, ಬಲ್ಲಾಳರಾಯನದುರ್ಗ ಮತ್ತು ನೇತ್ರಾವತಿ ಚಾರಣದ ಸಾಧ್ಯತೆಗಳ ಬಗ್ಗೆಯೂ ಪ್ರವಾಸಿಗರು ಗಮನ ಹರಿಸುತ್ತಿದ್ದಾರೆ.

ಒಂದು ಐಡಿ ಮೂಲಕ 10 ಟಿಕೆಟ್‌

'ಒಂದು ಇಮೇಲ್ ಐಡಿಯ ಮೂಲಕ ಗರಿಷ್ಟ 10 ಜನರಿಗೆ ಬುಕಿಂಗ್ ಮಾಡುವ ಅವಕಾಶ ಇರುತ್ತದೆ. ಈ ನಿಯಮದ ಅಡಿಯಲ್ಲೇ ಜನರು ಚಾರಣ ಬುಕಿಂಗ್ ಮಾಡುತ್ತಿದ್ದಾರೆ. ಬುಕಿಂಗ್ ಮಾಡಿದ ವ್ಯಕ್ತಿ ಜೊತೆಗೆ ಇದ್ದರೆ ಮಾತ್ರ ಆ ತಂಡವನ್ನು ಚಾರಣಕ್ಕೆ ಕಳಿಸುತ್ತೇವೆ' ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಹರೀಶ್ ಹೇಳಿದರು. ಸ್ಥಳೀಯರಿಗೆ ಅವಕಾಶ ಸಿಗುತ್ತಿಲ್ಲ ಎಂಬ ದೂರಿನ ಬಗ್ಗೆ ಅವರ ಗಮನ ಸೆಳೆದಾಗ ‘ಕೆಲವೊಮ್ಮೆ ಬುಕಿಂಗ್ ಮಾಡಿದವರು ಬರದಿದ್ದಾಗ ಸ್ಥಳದಲ್ಲಿ ಇದ್ದವರಿಗೆ 300 ಜನರ ಮಿತಿ ಮೀರದಂತೆ ಟೆಕೆಟ್ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT