ಮಂಗಳವಾರ, ನವೆಂಬರ್ 19, 2019
23 °C

ನೆರೆ ಸಂತ್ರಸ್ತರ ಪುನರ್ವಸತಿಗೆ ಒತ್ತಾಯ

Published:
Updated:
Prajavani

ಚಿಕ್ಕಮಗಳೂರು:ನೆರೆ ಸಂತ್ರಸ್ತರಿಗೆ ಪರ್ಯಾಯ ಜಮೀನು ನೀಡಲು ಸರ್ಕಾರ ವಿಳಂಬ ನೀತಿ ಅನುಸರಿಸಿದರೆ, ರೈತ ಸಂಘದಿಂದ ಸರ್ಕಾರಿ ಜಮೀನು ಗುರುತಿಸಿ, ಹಂಚಿಕೆ ಮಾಡಲಾಗುವುದು ಎಂದು ರೈತ ಸಂಘ–ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇಲ್ಲಿ ಗುರುವಾರ ಹೇಳಿದರು.

ಅತಿವೃಷ್ಟಿಯಿಂದಾಗಿ ಜನರು ಮನೆ, ಜಮೀನು ಕಳೆದುಕೊಂಡಿದ್ದಾರೆ. ಒಂದೂವರೆ ತಿಂಗಳಾದರೂ ಅವರಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಸಂತ್ರಸ್ತರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಯುದ್ದೋಪಾದಿಯಲ್ಲಿ ಪುನರ್ವಸತಿ ಕಾರ್ಯ ನಡೆಯಬೇಕು. ಇಲ್ಲವಾದಲ್ಲಿ ರೈತ ಸಂಘ–ಹಸಿರುಸೇನೆ ಕಾರ್ಯಕರ್ತರು ಸಂತ್ರಸ್ತರೊಟ್ಟಿಗೆ ಸೇರಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸುದ್ದಿಗೋಷ್ಟಿಯಲ್ಲಿ ಅವರು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ನೆರೆಯಿಂದ ಹಾನಿಯಾಗಿರುವ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸದೆ ಅಧಿಕಾರಿಗಳು ಅವರಿಗೆ ಬೇಕಾದಂತೆ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಿದ್ದಾರೆ. ನಿರಾಶ್ರಿತರ ಕೇಂದ್ರಗಳಿಂದ ಹೊರ ಹೋಗುವಂತೆ ಅಧಿಕಾರಿಗಳು ಸಂತ್ರಸ್ತರನ್ನು ಪ್ರೇರೇಪಿಸುತ್ತಿದ್ದಾರೆ. ಬಟ್ಟೆ ಖರೀದಿಸಲು ನೀಡಿರುವ ಪರಿಹಾರ ಧನದ ಚೆಕ್‌ಗಳು ಬೌನ್ಸ್ ಆಗಿವೆ. ಕಂದಾಯ ಸಚಿವ ಆರ್.ಅಶೋಕ್ ಅವರು ನೆರೆ ಪೀಡಿತ ಪ್ರದೇಶಗಳಿಗೆ ತಡವಾಗಿ ಭೇಟಿ ನೀಡುತ್ತಿದ್ದಾರೆ. ತಪ್ಪು ಸರಿಪಡಿಸಿಕೊಂಡು ಪರಿಹಾರ ವಿತರಿಸಲು ಶೀಘ್ರವಾಗಿ ಕ್ರಮವಹಿಸಬೇಕು ಎಂದರು.

ಒಕ್ಕಲಿಗ ಸಮುದಾಯದ ಪ್ರಭಾವಿ ರಾಜಕಾರಣಿ ಬಂಧನ ವಿರೋಧಿಸಿ ಸಮುದಾಯದ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದವು. ಆದರೆ ನೆರೆ ಪರಿಹಾರ ಸಿಗದೆ ಆತ್ಮಹತ್ಯೆ ಮಾಡಿಕೊಂಡ ಚೆನ್ನಪ್ಪಗೌಡ ಅವರು ಒಕ್ಕಲಿಗರ ಸಂಘಕ್ಕೆ ಕಾಣಲಿಲ್ಲ. ಎಲ್ಲಾ ಜಾತಿ ಸಂಘಟನೆಗಳು ನೈತಿಕತೆಯಿಂದ ವರ್ತಿಸಬೇಕು. ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ ಪ್ರವಾಹ, ಧರೆಕುಸಿತದಿಂದ ಸಾವು, ನೋವು ಸಂಭವಿಸಿವೆ. ಚಂದ್ರಯಾನ–2 ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನ ಮಂತ್ರಿ ಅವರು, ನೆರೆ ಪರಿಹಾರದ ಬಗ್ಗೆ ತುಟಿ ಬಿಚ್ಚಲಿಲ್ಲ. ಇದು ಪ್ರಧಾನಿಗೆ ಶೋಭೆ ತರುವುದಿಲ್ಲ. ಪಾಕಿಸ್ತಾನವನ್ನು ವಿರೋಧಿಸಿವುದು, ಕಾಶ್ಮೀರದ ವಿಶೇಷ ಸ್ಥಾನ–ಮಾನ ರದ್ದುಗೊಳಿಸುವುದಷ್ಟೆ ಆಡಳಿತವಲ್ಲ. ದೇಶದ ಜನರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ, ಸದಸ್ಯರಾದ ಭೈರೇಗೌಡ, ಲಕ್ಷ್ಮಣ್ ಸ್ವಾಮಿ, ನಾಗಣ್ಣ, ದಯಾಕರ್, ನಿರಂಜನ್ ಮೂರ್ತಿ, ಸುರೇಶ್, ಮರಿಯಪ್ಪ ಇದ್ದರು.

ಪ್ರತಿಕ್ರಿಯಿಸಿ (+)