ಚಿಕ್ಕಮಗಳೂರು: ಶಿಷ್ಟಾಚಾರ ಉಲ್ಲಂಘನೆ ಹೆಚ್ಚು

ಶುಕ್ರವಾರ, ಜೂಲೈ 19, 2019
24 °C
ವಿಧಾನಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ಆಯನೂರು ಮಂಜುನಾಥ್‌

ಚಿಕ್ಕಮಗಳೂರು: ಶಿಷ್ಟಾಚಾರ ಉಲ್ಲಂಘನೆ ಹೆಚ್ಚು

Published:
Updated:
Prajavani

ಚಿಕ್ಕಮಗಳೂರು: ‘ಜಿಲ್ಲೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಜಾಸ್ತಿ ಇದೆ. ಜಿಲ್ಲಾಮಟ್ಟದ ಬಹಳಷ್ಟು ಅಧಿಕಾರಿಗಳಿಗೂ ಶಿಷ್ಟಾಚಾರದ ಬಗ್ಗೆ ಮಾಹಿತಿ ಇಲ್ಲ’ ಎಂದು ವಿಧಾನಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ಆಯನೂರು ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ವಿಧಾನಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸದನ, ಶಾಸಕರ ಶಿಷ್ಟಾಚಾರ ಎಲ್ಲಿ ಮತ್ತು ಯಾಕೆ ಉಲ್ಲಂಘನೆಯಾಗುತ್ತಿದೆ, ತಡೆಗಟ್ಟುವುದು ಹೇಗೆ ಎಂಬ ನಿಟ್ಟಿನಲ್ಲಿ ಸಮಿತಿ ಪ್ರವಾಸ ಮಾಡುತ್ತಿದೆ. ಈ ಜಿಲ್ಲೆಯ ಯಾವುದೇ ಇಲಾಖೆಯಲ್ಲೂ ಶಿಷ್ಟಾಚಾರ ಪಾಲನೆ ಅಂಶ ತ್ತಪಿಕರವಾಗಿ ಕಂಡುಬಂದಿಲ್ಲ. ಬಹಳಷ್ಟು ಮಂದಿಗೆ ಮಾಹಿತಿ ಕೊರತೆ ಇದೆ ಎಂದು ತಿಳಿಸಿದರು. 

‘ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌, ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಭೆಗೆ ಕರೆಯಲಾಗಿತ್ತು. ಸಭೆಗೆ ಐದಾರು ಮಂದಿ ಗೈರು ಹಾಜರಾಗಿದ್ದಾರೆ. ಅವರಿಗೆ ನೋಟಿಸ್‌ ನೀಡಿ ವಿವರಣೆ ಪಡೆಯುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇವೆ. ಗೈರು ಹಾಜರಿಗೆ ಸಕಾರಣವಿಲ್ಲದಿದ್ದರೆ ಶಿಸ್ತುಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ’ ಎಂದರು.

ವಿಧಾನ ಪರಿಷತ್ತಿನ ಉಪಸಭಾಪತಿ ಇಲ್ಲಿಯವರು. ಶಿಷ್ಟಾಚಾರ ಉಲ್ಲಂಘನೆ ಅವರಿಗೂ ಆಗಿದೆ. ಈ ಸಭೆಯು ಸಮಿತಿಗೆ ಕಿಂಚಿತ್ತೂ ಸಮಾಧಾನ ಉಂಟುಮಾಡಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಿದ್ದೇವೆ. ಮತ್ತೊಮ್ಮೆ ಸಭೆ ಮಾಡಲಾಗುವುದು. ಆಗಲೂ ಕಂಡು ಬಂದರೆ ತಪ್ಪುಗಳು ಶಿಸ್ತುಕ್ರಮ ಜರುಗಿಸಲು ಸಮಿತಿ ಶಿಫಾರಸು ಮಾಡಲಿದೆ ಎಂದು ತಿಳಿಸಿದೆ.

ಕಾಯಕ್ರಮ ಹೇಗೆ ಆಯೋಜನೆ ಮಾಡಬೇಕು, ಆಹ್ವಾನಪತ್ರಿಕೆಯಲ್ಲಿ ಹೆಸರು ಯಾವ ಕ್ರಮದಲ್ಲಿ ಹಾಕಬೇಕು ಎಂಬ ಕನಿಷ್ಠ ಮಾಹಿತಿಯೂ ಗೊತ್ತಿಲ್ಲ. ವಿಧಾನಸಭೆ, ಪರಿಷತ್ತು, ಲೋಕಸಭೆ, ರಾಜ್ಯಸಭೆ ಸದಸ್ಯರು ಎಂಬ ತಾರತಮ್ಯ ಇಲ್ಲ. ಈ ಬಗ್ಗೆಯೂ ಮಾಹಿತಿ ಕೊರತೆ ಇದೆ. ಸುತ್ತೋಲೆಗಳನ್ನು ಸರಿಯಾಗಿ ಓದುವುದಿಲ್ಲ, ಅರ್ಥೈಸಿಕೊಳ್ಳುವುದಿಲ್ಲ. ಕೆಲವರಿಗೆ ತಿಳಿವಳಿಕೆ ಕೊರತೆ, ಮತ್ತೆ ಕೆಲವು ಉಡಾಫೆ ಮಾಡುತ್ತಾರೆ ಎಂದರು.

ಒತ್ತಡಕ್ಕೆ ಮಣಿದರೆ ಅಧಿಕಾರಿಗಳೇ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಧಿಕಾರಿಗಳಿಗೆ ದೌರ್ಬಲ್ಯಗಳು ಇದ್ದಾಗ ರಾಜಕಾರಣಿಗಳ ಸುತ್ತ ಗಿರಕಿ ಹೊಡೆಯುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ತರಬೇತಿ ಶಿಬಿರ ಏರ್ಪಡಿಸಲು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. 15 ದಿನಗಳಲ್ಲಿ ಏರ್ಪಡಿಸುವುದಾಗಿ ಅವರು ಹೇಳಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ಸ‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಸಮಿತಿಯ ಅಲ್ಲಂವೀರಭದ್ರಪ್ಪ, ವಿಜಯಸಿಂಗ್‌, ಅ.ದೇವೇಗೌಡ, ಅರವಿಂದ ಅರಳಿ, ಹನುಮಂತಪ್ಪರುದ್ರಪ್ಪ ನಿರಾಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !