ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಣ ಹೊತ್ತು ಸಂಭ್ರಮಿಸಿ ಮರೆಯಾದ ದ್ವಿತೀಯ ಪಿಯು ವಿದ್ಯಾರ್ಥಿ !

ಪಿಯು ಪರೀಕ್ಷೆಯಲ್ಲಿ ಮೋಹಿತ್‌ಗೆ ಉತ್ತಮ ಅಂಕ
Last Updated 20 ಜುಲೈ 2020, 12:31 IST
ಅಕ್ಷರ ಗಾತ್ರ

ತರೀಕೆರೆ: ಆತ ದ್ವಿತೀಯ ಪಿಯು ವಾಣಿಜ್ಯ ವಿದ್ಯಾರ್ಥಿ. ಐದು ವಿಷಯಗಳ ಪರೀಕ್ಷೆ ಬರೆದು ಶೇಕಡ 92ರಷ್ಟು (461/500) ಅಂಕ ಗಳಿಸಿದ್ದ. ತನ್ನ ಸಾಧನೆಯನ್ನು ಸಂಭ್ರಮಿಸಲು ವಿಧಿ ಹೆಚ್ಚು ಅವಕಾಶವೇ ನೀಡಲಿಲ್ಲ. ಫಲಿತಾಂಶ ಬಂದ ದಿನವೇ ಸಂಜೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

ಪಟ್ಟಣದ ಸ್ವರ ಸಂಗೀತ್ ಕ್ಯಾಸೆಟ್ ಸೆಂಟರ್ ಮಾಲೀಕರಾದ ವೇದಾವತಿ ಮತ್ತು ಲಿಂಗಮೂರ್ತಿ ದಂಪತಿಯ ಪುತ್ರ ಟಿ.ಎಂ. ಮೋಹಿತ್ ಕ್ಯಾನ್ಸರ್‌ ಕಾಯಿಲೆಗೆ ಬಲಿಯಾಗಿದ್ದಾನೆ. ಈತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡಿದ್ದ.

ಮೋಹಿತ್‌ ಪುತ್ತೂರಿನ ಹಾಸ್ಟೆಲ್‌ ನಲ್ಲೇ ಇದ್ದು, ಐದು ವಿಷಯಗಳ ಪರೀಕ್ಷೆ ಎದುರಿಸಿದ್ದಾನೆ. ಸರ್ಕಾರ ಲಾಕ್‌ಡೌನ್ ಘೋಷಿಸಿದ ಕಾರಣ ಊರಿಗೆ ಹಿಂದಿರುಗಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದ.. ಈ ನಡುವೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗಿತ್ತು. ಹೀಗಾಗಿ, ನಂತರ ನಡೆದ ಇಂಗ್ಲಿಷ್‌ ಭಾಷೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.

ಬೆಂಗಳೂರಿಗೆ ಚಿಕಿತ್ಸೆಗೆ ಹೋಗುವ ಮಧ್ಯೆ ತರೀಕೆರೆಗೆ ಜುಲೈ 14ರಂದು ಬಂದಿದ್ದ ಮೋಹಿತ್, ಅಂತರ್ಜಾಲದಲ್ಲಿ ಪ್ರಕಟವಾದ ತನ್ನ ಫಲಿತಾಂಶವನ್ನು ಗಮನಿಸಿ, ಉತ್ತಮ ಅಂಕ ಸಿಕ್ಕಿದೆ ಎಂದು ಸಂಭ್ರಮಿಸಿದ್ದಾನೆ. ಆದರೆ, ಅದೇ ದಿನ ಸಂಜೆ 5ಗಂಟೆಗೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

ಲಿಂಗಮೂರ್ತಿ ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಮೋಹಿತ್ ಒಬ್ಬನೇ ಪುತ್ರ. ಓದಿನಲ್ಲಿ ಮುಂಚೂಣಿಯಲ್ಲಿದ್ದ ಆತವನ್ನು ಚೆನ್ನಾಗಿ ಓದಿಸುವ ಹಂಬಲ ದಿಂದ ಪುತ್ತೂರಿಗೆ ಕಳುಹಿಸಿದ್ದರು.

‘ಅಪ್ಪಾ ನಾನು ಇನ್ನೊಂದು ವಿಷಯ ಬರೆದಿದ್ದರೆ ಚೆನ್ನಾಗಿರುತ್ತಿತ್ತು. ಒಳ್ಳೆಯ ಫಲಿತಾಂಶ ಬರೋದು. ಆಮೇಲೆ ಯಾವ ಕಾಲೇಜಿಗೆ ನನ್ನ ಸೇರಿಸುತ್ತಿದ್ದೆ ?’ ಎಂದು ಫಲಿತಾಂಶ ನೋಡಿದ ಬಳಿಕ ಮಗ ಕೇಳಿದ್ದ ಕೊನೆಯ ಪ್ರಶ್ನೆಯನ್ನು ನೆನೆದು ಕಣ್ಣೀರಾಗುತ್ತಾರೆ ಲಿಂಗಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT