ಕೊಟ್ಟಿಗೆ ಗೋಡೆ ಕುಸಿದು ಮಹಿಳೆ ಸಾವು, 4 ಮನೆಗೆ ಹಾನಿ

7
ಕಾಫಿನಾಡಿನಲ್ಲಿ ಮುಂಗಾರು ಮಳೆ ಚುರುಕು

ಕೊಟ್ಟಿಗೆ ಗೋಡೆ ಕುಸಿದು ಮಹಿಳೆ ಸಾವು, 4 ಮನೆಗೆ ಹಾನಿ

Published:
Updated:

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಗಿರಿಶ್ರೇಣಿ ಮಾರ್ಗದಲ್ಲಿ ರಸ್ತೆ ಬದಿ ಕೆಲವೆಡೆ ಗುಡ್ಡ ಕುಸಿದು ಮಣ್ಣು ಬಿದ್ದು ವಾಹನ ಸಂಚಾರಕ್ಕೆ ಸಂಚಕಾರವಾಗಿದೆ. ತಾಲ್ಲೂಕಿನ ಜಾಗರ ಹೋಬಳಿಯಲ್ಲಿ ನಾಲ್ಕು ಮನೆಗಳು ಭಾಗಶಃ ಕುಸಿದಿವೆ.

ತೋಗರಿಹಂಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಿಹಳ್ಳಿಯಲ್ಲಿ ಕೊಟ್ಟಿಗೆಯಲ್ಲಿ ವನಜಾ (48) ಮೃತಪಟ್ಟಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ‘ಹಸು ಕಟ್ಟಲು ಕೊಟ್ಟಿಗೆಗೆ ಹೋಗಿದ್ದರು. ಈ ವೇಳೆ ಗೋಡೆ ಕುಸಿದು ಅವರು ಮೃತಪಟ್ಟಿದ್ದಾರೆ. ವನಜಾ ಅವರು ಗ್ರಾಮದ ಗಣೇಶ್‌ ಅವರ ಪತ್ನಿ’ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಮಳೆಯಿಂದಾಗಿ ಜಾಗರ ಮತ್ತು ತೊಗರಿ ಹಂಕಲ್‌ ಗ್ರಾಮಗಳಲ್ಲಿ ತಲಾ ಎರಡು ಮನೆಗಳ ಗೋಡೆಗಳು ಭಾಗಶಃ ಕುಸಿದಿವೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

‘ಗಿರಿಶ್ರೇಣಿ ಮಾರ್ಗದ ಹಲಸಿನಖಾನ್‌, ಅತ್ತಿಗುಂಡಿ, ಕೊಳಗಾಮೆ ರಸ್ತೆ ಬದಿಯಲ್ಲಿ ಕೆಲವೆಡೆ ಗುಡ್ಡದ ಮಣ್ಣು ಕುಸಿದಿದೆ. ಮಣ್ಣು ಕುಸಿದಿರುವ ಭಾಗದಲ್ಲಿ ವಾಹನ ಸಂಚಾರ ಹರಸಾಹಸವಾಗಿದೆ’ ಎಂದು ಸ್ಥಳೀಯರೊಬ್ಬರು ತಿಳಿಸಿದರು. ಕೆಲದಿನಗಳಿಂದ ಮಲೆನಾಡು ಮತ್ತು ಬಯಲುಸೀಮೆ ಭಾಗದಲ್ಲಿ ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಹೆಚ್ಚು ಇದೆ. ರಸ್ತೆಗಳು ಕೆಲವು ಕಡೆ ಕೊರಕಲಾಗಿದೆ. ಹಳ್ಳಕೊಳ್ಳ, ನದಿ, ಜಲಪಾತಗಳು ಮೈದುಂಬಿಕೊಳ್ಳುತ್ತಿವೆ. ಕೆರೆಗಳಿಗೆ ನೀರಾಗುತ್ತಿದೆ. ಮಳೆಯಿಂದಾಗಿ ರೈತರಲ್ಲಿ ಮಂದಹಾಸ ಮೂಡಿದೆ.

ಹಿರೇಮಗಳೂರು ಕೆರೆ, ಕಲ್ಲಳ್ಳಿ ಕುಕ್ಕ ಸಮುದ್ರ ಕೆರೆ ಭರ್ತಿ ಹಂತದಲ್ಲಿದೆ. ಹಿರೇಕೊಳಲೆ ಕೆರೆ ಶೇ 60 ತುಂಬಿದೆ. ಮಧಗದ ಕೆರೆ, ಅಯ್ಯನ ಕೆರೆ, ಇತರ ಕೆರೆಗಳಿಗೂ ಸ್ವಲ್ಪ ನೀರು ಬಂದಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !