ರಸ್ತೆ ವಿಭಜಕ: ಸಂಚಾರ ‘ಕಂಟಕ’

ಮಂಗಳವಾರ, ಏಪ್ರಿಲ್ 23, 2019
33 °C

ರಸ್ತೆ ವಿಭಜಕ: ಸಂಚಾರ ‘ಕಂಟಕ’

Published:
Updated:
Prajavani

ಚಿಕ್ಕಮಗಳೂರು: ನಗರದ ಮುಖ್ಯರಸ್ತೆಗಳಲ್ಲಿ ಅಳವಡಿಸಿರುವ ರಸ್ತೆವಿಭಜಕ ಪ್ಲಾಸ್ಟಿಕ್ ಪೋಲ್‌ಗಳು ಕಿತ್ತುಹೋಗಿದ್ದು, ಆ ಜಾಗದಲ್ಲಿ ವಾಹನ ಅಡ್ಡಾದಿಡ್ಡಿಯಾಗಿ ತಿರುಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದು ಬೇರೆ ವಾಹನ ಚಾಲಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ.

ಬಸ್‌ ನಿಲ್ದಾಣದ ಬಳಿ, ಮಲ್ಲಂದೂರು ವೃತ್ತ, ಶೃಂಗಾರ್ ವೃತ್ತ, ತೊಗರಿಹಂಕಲ್ ವೃತ್ತ, ಎಐಟಿ ವೃತ್ತಗಳಲ್ಲಿನ ರಸ್ತೆ ವಿಭಜಕದ ಪ್ಲಾಸ್ಟಿಕ್ ಪೋಲ್‌ಗಳು ಬಹುತೇಕ ಮುರಿದಿವೆ. ಮಲ್ಲಂದೂರು ವೃತ್ತ ಮತ್ತು ಹನುಮಂತಪ್ಪ ವೃತ್ತದಲ್ಲಿನ ರಸ್ತೆ ವಿಭಜಕ ಪ್ಲಾಸ್ಟಿಕ್ ಪೋಲ್‌ಗಳು ಹೆಚ್ಚು ಕಿತ್ತುಹೋಗಿವೆ.

ಈ ವೃತ್ತಗಳ ಆಸುಪಾಸು ಜನದಟ್ಟಣೆ ಇರುತ್ತದೆ. ಕಾಲೇಜು, ವೈನ್ ಸ್ಟೋರ್, ಪೆಟ್ರೊಲ್ ಬಂಕ್‌ನತ್ತ ವಾಹನಗಳು ಮತ್ತು ಜನರು ಓಡಾಡುತ್ತಾರೆ. ರಸ್ತೆ ವಿಭಜಕಗಳ ನಡುವೆ ಏಕಾ ಏಕಿ ವಾಹನ ದಾಟಿಸುವುದರಿಂದ ಸಂಚಾರಕ್ಕೆ ತೊಡಕಾಗುತ್ತದೆ. ಅಪಘಾತಗಳಿಗೆ ಎಡೆ ಮಾಡುತ್ತದೆ.

ರಸ್ತೆ ವಿಭಜಕ ಪ್ಲಾಸ್ಟಿಕ್ ಪೈಪ್‌ಗಳ ಅಂತರ ಮುಂಚೆಯೇ ಹೆಚ್ಚು ಇತ್ತು. ಅವುಗಳ ನಡುವೆ ದ್ವಿಚಕ್ರ ವಾಹನಗಳ ಸವಾರರು ತೂರಿಸಿಕೊಂಡು ರಸ್ತೆ ದಾಟುತ್ತಿದ್ದರು. ಈಗ ರಸ್ತೆ ವಿಭಜಕ ಪ್ಲಾಸ್ಟಿಕ್ ಪೋಲ್‌ಗಳು ಕಿತ್ತುಹೋಗಿರುವುದರಿಂದ ಆ ಜಾಗದಲ್ಲಿ ಆಟೋ ಮತ್ತು ನಾಲ್ಕು ಚಕ್ರದ ವಾಹನಗಳನ್ನು ‌ದಾಟಿಸುವ ಚಾಳಿಯೂ ಶುರುವಾಗಿದೆ.

‘ಚಿಕ್ಕಮಗಳೂರಿನಿಂದ ಕಡೂರಿಗೆ ಹೋಗುವಾಗ ಹನುಮಂತಪ್ಪ ವೃತ್ತದ ಬಳಿ ಮುಂದೆ ಸಾಗುತ್ತಿದ್ದ ಕಾರಿನ ಚಾಲಕ ಏಕಾಏಕಿ ವಿಭಜಕದ ನಡುವೆ ಯೂ ಟರ್ನ್ ಮಾಡಿದ. ಕಾರಿನ ಹಿಂದೆ ಹೋಗುತ್ತಿದ್ದ ವಾಹನಗಳು ಸಡನ್ ಬ್ರೇಕ್ ಹಾಕಿದವು. ರಸ್ತೆ ವಿಭಜಕದ ಪ್ಲಾಸ್ಟಿಕ್ ಪೋಲ್‌ಗಳು ಕಿತ್ತು ಹೋಗಿರುವುದರಿಂದ ಕೆಲವರು ಅಲ್ಲೆ ಯೂ ಟರ್ನ್ ತೆಗೆದುಕೊಳ್ಳುತ್ತಾರೆ. ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಶಾಶ್ವತ ರಸ್ತೆ ವಿಭಜಕ ನಿರ್ಮಿಸಲು ಕ್ರಮವಹಿಸಬೇಕು’ಎಂದು ದ್ವಿಚಕ್ರ ವಾಹನ ಚಾಲಕ ಸಂತೋಷ್ ಒತ್ತಾಯಿಸಿದರು.

ರಜಾ ದಿನಗಳಲ್ಲಿ ಚಿಕ್ಕಮಗಳೂರಿನಲ್ಲಿ ಪ್ರವಾಸಿ ವಾಹನ ಸಂದಣಿ ಹೆಚ್ಚು ಇರುತ್ತದೆ. ರಸ್ತೆ ವಿಭಜಕ, ರಿಫ್ಲೆಕ್ಟರ್ ಅಳವಡಿಸಲು, ಝೀಬ್ರಾ ಕ್ರಾಸ್‌ ಲೈನ್‌ ಬರೆಸಲು, ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮವಹಿಸಬೇಕು ಎಂಬುದು ಸ್ವಚ್ಛ ಟ್ರಸ್ಟ್ ಮುಖ್ಯಸ್ತೆ ಶುಭಾವಿಜಯ್ ಆಗ್ರಹವಾಗಿದೆ.

ಕೆಲ ಸಂಘ ಸಂಸ್ಥೆಗಳು, ಕೈಗಾರಿಕೆಗಳಲ್ಲಿ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ನಿಧಿ ಇರುತ್ತದೆ. ಅವರನ್ನು ‌ಪೊಲೀಸ್ ಇಲಾಖೆ ಸಂಪರ್ಕಿಸಬೇಕು. ಆ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ಶಾಶ್ವತ ಸೀಮೆಂಟ್‌ ರಸ್ತೆ ವಿಭಜಕ ನಿರ್ಮಾಣ ಮತ್ತು ರಿಫ್ಲೆಕ್ಟರ್ಸ್‌ ಅಳವಡಿಕೆಗೆ ಮುಂದಾಗಬೇಕು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !