ಶುಕ್ರವಾರ, ಡಿಸೆಂಬರ್ 2, 2022
19 °C

ಸಿರಿಧಾನ್ಯ ಬೆಳೆಯಲು ಕೇಂದ್ರ ಉತ್ತೇಜನ: ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ಭಾರತ ಸರ್ಕಾರದ ಕೋರಿಕೆಯಂತೆ ಯುಎನ್‌ಒ ಸಂಸ್ಥೆಯು 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಗುರುತಿಸಿದೆ. ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯ ಗಳನ್ನು ಹೆಚ್ಚು ಬೆಳೆಯಲು ರೈತರನ್ನು ಉತ್ತೇಜಿಸುವ ಜೊತೆಗೆ ಅದನ್ನು ರಫ್ತು ಮಾಡಲು ಬೇಕಾದ ಎಲ್ಲ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕಡೂರಿನಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು. ಸಿರಿಧಾನ್ಯ ಉತ್ಪಾದನೆ ಕುರಿತು ಆಸಕ್ತ ಯುವಕರಿಗೆ ಸೂಕ್ತ ತರಬೇತಿ ನೀಡಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಯೋಜನೆ ತಯಾರಾಗಿದೆ. ಎಲ್ಲ ಕಡೆ ಸಣ್ಣ ರೈತರನ್ನು ಒಟ್ಟುಗೂಡಿಸುವ, ಸಂಸ್ಕರಣಾ ಘಟಕ ಸ್ಥಾಪಿಸಿ ಅವರಿಗೆ ಅನುಕೂಲ ಮಾಡಿಕೊಡುವ ಚಿಂತನೆಯಿದೆ. ಒಟ್ಟಾರೆ ನಾಲ್ಕೈದು ವರ್ಷಗಳಲ್ಲಿ ಭಾರತ ಮುಂದುವರಿದ ರಾಷ್ಟ್ರಗಳಿಗೆ ಪೈಪೋಟಿ ನೀಡುವಂತಾಗುತ್ತದೆ ಎಂದರು.

ದೇಶದಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ದೇಶವಾಸಿಗಳಿಗೆ ಯಾವುದೇ ಕೊರತೆಯಾಗದಂತೆ ಬೆಳೆ ಬೆಳೆದಿದ್ದಾರೆ. ರೈತರು ಬೆಳೆದ ಧಾನ್ಯ, ತರಕಾರಿ, ಹಣ್ಣುಗಳಿಗೆ ಸೂಕ್ತ ಬೆಲೆ ದೊರೆಯಬೇಕು. ಹೆಚ್ಚು ಉತ್ಪಾದನೆಯಾದ ಧಾನ್ಯ, ಹಣ್ಣುಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಚಿಂತನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯಿಂದ ಸುಮಾರು ₹ 50 ಕೋಟಿ ವಿಮಾ ಕಂತು ಪಾವತಿಸಿದ್ದು, ಸುಮಾರು ₹ 237 ಕೋಟಿ ವಿಮೆ ಪರಿಹಾರ ಪಾವತಿಸಲಾಗಿದೆ. ರೈತರು ಬೆಳೆದ ಈರುಳ್ಳಿ ಮುಂತಾದ ಉತ್ಪನ್ನಗಳನ್ನು ಅಗತ್ಯವಾದ ಕೋಲ್ಡ್ ಸ್ಟೋರೇಜ್ ಮಾಡಲು ಜಿಲ್ಲೆಯ ಎರಡು ಕಡೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ಫುಡ್ ಟೆಸ್ಟಿಂಗ್ ಪ್ರಯೋಗಾಲಯಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಶಾಸಕ ಬೆಳ್ಳಿಪ್ರಕಾಶ್, ತರೀಕೆರೆ ಶಾಸಕ ಡಿ.ಎನ್.ಸುರೇಶ್, ತಹಶೀಲ್ದಾರ್ ಜೆ.ಉಮೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮರುಡಪ್ಪ, ಮಂಡಲ ಅಧ್ಯಕ್ಷ ಬಿ.ಪಿ.ದೇವಾನಂದ್, ವಕ್ತಾರ ಶಾಮಿಯಾನ ಚಂದ್ರು, ಅಡಿಕೆ ಚಂದ್ರು, ಜಿಗಣೇಹಳ್ಳಿ ನೀಲಕಂಠಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.