ಊದಲಿನ ಬರ್ಫಿ; ಸಾವೆಯ ಪೊಂಗಲ್‌ ಸವಿಗೆ ಮನಸೋತರು...

7
ಸಿರಿಧಾನ್ಯದ ಮಹತ್ವ, ರುಚಿ ಪರಿಚಯಿಸಿದ ಆಹಾರ ಮೇಳ

ಊದಲಿನ ಬರ್ಫಿ; ಸಾವೆಯ ಪೊಂಗಲ್‌ ಸವಿಗೆ ಮನಸೋತರು...

Published:
Updated:
ಕಳಸದ ಕಳಸೇಶ್ವರ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಶ್ರಯದಲ್ಲಿ ಸೋಮವಾರ ಮುಕ್ತಾಯವಾದ ಸಿರಿಧಾನ್ಯ ಆಹಾರ ಮೇಳದಲ್ಲಿ ಗ್ರಾಹಕರು ಸಿರಿಧಾನ್ಯದ ಸಿಹಿ ತಿನಿಸು ಖರೀದಿಸುತ್ತಿರುವ ದೃಶ್ಯ.

ಕಳಸ: ಒಂದೆಡೆ ಸಿರಿಧಾನ್ಯದಿಂದ ಮಾಡಿದ ಬಗೆಬಗೆಯ ಸಿಹಿ ತಿನಿಸುಗಳು, ದೈನಂದಿನ ಬದುಕಿನಲ್ಲಿ ಸೇವಿಸಬಹುದಾದ ಸಿರಿಧಾನ್ಯದ ಇಡ್ಲಿ, ದೋಸೆ, ಪುಲಾವ್‍ನಂತಹ ತಿನಿಸುಗಳು ಜನರ ಹೊಟ್ಟೆ ತುಂಬಿಸುತ್ತಿದ್ದವು. ಇನ್ನೊಂದೆಡೆ ಧ್ವನಿವರ್ಧಕದ ಮೂಲಕ ಸತತವಾಗಿ ಕೇಳುಬರುತ್ತಿದ್ದ ಸಿರಿಧಾನ್ಯಗಳ ಮಹತ್ವದ ಬಗೆಗಿನ ಮಾಹಿತಿ ಈ ವಿಚಾರದಲ್ಲಿನ ಜ್ಞಾನದ ಹಸಿವನ್ನು ನೀಗಿಸುತ್ತಿತ್ತು.

ಕಳಸೇಶ್ವರ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಮತ್ತು ಸೋಮವಾರ ನಡೆದ ಸಿರಿಧಾನ್ಯ ಆಹಾರ ಮೇಳ ಪ್ರದರ್ಶನ ಮತ್ತು ಮಾರಾಟದಲ್ಲಿ ಕಂಡು ಬಂದ ದೃಶ್ಯ ಇದು.

ಆಹಾರ ಮೇಳದ ಒಳ ಹೊಕ್ಕೊಡನೆ ವಿವಿಧ ಖಾದ್ಯಗಳ ಪರಿಮಳ ಘಮ್ಮೆನ್ನುತ್ತಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡು ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಖಾದ್ಯ ಸೇವಿಸಲು ಎಲ್ಲರನ್ನೂ ಆಹ್ವಾನಿಸುತ್ತಿದ್ದರು.
ಊದಲು ಧಾನ್ಯದಿಂದ ಮಾಡಿದ ಹಲ್ವಾ, ನೆಲಗಡಲೆ, ಊದಲಿನಿಂದ ಹಾಗೂ ಹುರಿಗಡಲೆ ಮತ್ತು ಊದಲಿನಿಂದ ಮಾಡಿದ ಬರ್ಫಿ, ಹಾರಕದ ಪಾಯಸ, ಸಾವೆಯ ಪೊಂಗಲ್, ಕೊರಲೆಯ ಮೊಸರನ್ನ, ಬರಗಿನ ಇಡ್ಲಿ, ನವಣೆಯ ಪುಲಾವ್ ಮತ್ತು ಮಸಾಲೆ ದೋಸೆ, ಸಜ್ಜೆ ಮತ್ತು ರಾಗಿಯ ಹಾಲು ಮತ್ತು ಪಾಯಸ ವಿಶೇಷ ತಿನಿಸುಗಳಾಗಿದ್ದವು.

ಮಲೆನಾಡಿನ ಸಾಂಬಾರ ಪದಾರ್ಥಗಳಿಂದ ಮಾಡಿದ ಕಷಾಯ ಸುರಿಮಳೆಯಲ್ಲಿ ಇಲ್ಲಿಗೆ ತಲುಪುತ್ತಿದ್ದ ಗ್ರಾಹಕರಿಗೆ ಸ್ವಾಗತ ನೀಡಿತ್ತು. ಉತ್ತರ ಕರ್ನಾಟಕದಲ್ಲಿ ಬೆಳೆಯುವ ಬಗೆಬಗೆಯ ಸಿರಿಧಾನ್ಯವನ್ನು ರಾಜ್ಯದಲ್ಲೇ ಮಾರಾಟ ಮಾಡುವ ಮೂಲಕ ರೈತರಿಗೆ ಉತ್ತೇಜನ ನೀಡಲು ಸಿರಿ ಗ್ರಾಮೋದ್ಯೋಗ ಸಂಸ್ಥೆ ಸಿರಿಧಾನ್ಯಗಳನ್ನು ರಾಜ್ಯದೆಲ್ಲೆಡೆ ಬಳಸುವ ಬಗ್ಗೆ ಪ್ರಚಾರ ನಡೆಸುತ್ತಿದೆ ಎಂದು ಶಿಬಿರ ಸಂಯೋಜಕರಾದ ಸಿರಿ ಗ್ರಾಮೋದ್ಯೋಗದ ರಾಮ್‍ಕುಮಾರ್ ಮಾಹಿತಿ ನೀಡಿದರು.

ಸಿರಿಧಾನ್ಯದಿಂದ ಹೇಗೆ ಬಗೆಬಗೆಯ ರುಚಿಕರ ಖಾದ್ಯ ಸಿದ್ಧಪಡಿಸಬಹುದು ಎಂದು ಅರಿವು ಮೂಡಿಸಲು ಹತ್ತಾರು ಖಾದ್ಯಗಳನ್ನು ಮೇಳದಲ್ಲಿ ಪರಿಚಯಿಸುತ್ತಿದ್ದೇವೆ. ಆಸಕ್ತರು ಅವುಗಳನ್ನು ದೈನಂದಿನ ಆಹಾರದಲ್ಲಿ ಅಳವಡಿಸಿಕೊಳ್ಳಬಹುದು, ಇದು ಆರೋಗ್ಯಕ್ಕೂ ಒಳ್ಳೆಯದು ಎಂದೂ ಅವರು ಮಾಹಿತಿ ನೀಡಿದರು.

ಭಾನುವಾರ ಆರಂಭಗೊಂಡ ಆಹಾರ ಮೇಳದಲ್ಲಿ 2 ದಿನಗಳಲ್ಲಿ 4 ಸಾವಿರ ಜನರು ಭಾಗವಹಿಸಿ ವಿವಿಧ ಖಾದ್ಯಗಳನ್ನು ಸೇವಿಸಿದರು. ಸಿರಿಧಾನ್ಯಗಳಾದ ಹಾರಕ, ಊದಲು, ಸಾವೆ, ಬರಗು, ನವಣೆ, ಕೊರಲೆ, ಸಜ್ಜೆ, ರಾಗಿ ಮತ್ತು ಜೋಳವನ್ನು ಸಿರಿಧಾನ್ಯ ಸಂಸ್ಥೆ ಮೇಳದಲ್ಲೆ ಮಾರಾಟಕ್ಕೆ ಇರಿಸಿತ್ತು. ಸ್ಥಳೀಯರಿಂದ ಸಾಕಷ್ಟು ಸ್ಪಂದನೆಯೂ ಸಿಕ್ಕು ಕೆಲವರು ಸಿರಿಧಾನ್ಯಗಳನ್ನು ಖರೀದಿಸಿದರು.

'ಈ ಆಹಾರ ಮೇಳದಿಂದ ಮಲೆನಾಡಿನ ಜನರಿಗೆ ಸಿರಿಧಾನ್ಯ ಬಳಸಿ ಖಾದ್ಯಗಳನ್ನು ತಯಾರಿಸುವ ಬಗ್ಗೆ ಮಾಹಿತಿ ಸಿಕ್ಕಿತು. ಜೊತೆಗೆ ವಿವಿಧ ಬಗೆಯ ರೋಗಗಳನ್ನು ಸಿರಿಧಾನ್ಯದ ಬಳಕೆ ಮೂಲಕ ನಿವಾರಣೆ ಮಾಡಿಕೊಳ್ಳುವ ಬಗ್ಗೆಯೂ ತಿಳಿವಳಿಕೆ ಸಿಕ್ಕಿತು’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಹಳುವಳ್ಳಿ ಒಕ್ಕೂಟದ ಅಧ್ಯಕ್ಷ ರಂಗನಾಥ್ ಭಟ್ ಅಭಿಪ್ರಾಯಪಟ್ಟರು.

ನಾರಿನ ಅಂಶ ಹೆಚ್ಚಿರುವ ಸಿರಿಧಾನ್ಯಗಳನ್ನು ಅಡುಗೆಯಲ್ಲಿ ಬಳಸುವ ಮುನ್ನ ಚೆನ್ನಾಗಿ ನೀರಿನಲ್ಲಿ ನೆನೆಸಬೇಕು. ಇವುಗಳಿಂದ ಮಾಡಿದ ಖಾದ್ಯ ಸೇವಿಸಿದ ಮೇಲೂ ಹೆಚ್ಚಿನ ನೀರು ಕುಡಿಯಬೇಕು ಎಂಬ ಅಂಶವನ್ನು ಖಾದ್ಯ ತಯಾರಿಸುತ್ತಿದ್ದ ಬೆಂಗಳೂರಿನ ಬಾಣಸಿಗ ರಾಘವೇಂದ್ರ ಕಾಮತ್ ಹೇಳಿದರು.

‘ತಾಲ್ಲೂಕು ಮಟ್ಟದಲ್ಲಿ ನಡೆಯುವ ಈ ಆಹಾರ ಮೇಳವನ್ನು ಕಳಸದಲ್ಲಿ ಸಂಘಟಿಸುವ ಮೂಲಕ ಇಲ್ಲಿನ ಜನರಿಗೆ ಅನುಕೂಲ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಕಳಸದ ದಿನಸಿ ಅಂಗಡಿಗಳಲ್ಲಿ ಸಿರಿಧಾನ್ಯದ ಮಾರಾಟಕ್ಕೆ ಗ್ರಾಮೋದ್ಯೋಗ ಸಂಸ್ಥೆ ನೆರವಾಗುತ್ತದೆ' ಎಂದು ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜ್ ಹೇಳಿದರು.

ಸಿರಿಧಾನ್ಯದ ಖಾದ್ಯಗಳ ರುಚಿ ಮತ್ತು ಅವುಗಳಿಂದ ಆಗುವ ಆರೋಗ್ಯದ ಲಾಭದ ಬಗ್ಗೆ ಅರಿತುಕೊಂಡ ಕೆಲ ಸ್ಥಳೀಯರು ಇದನ್ನು ನಿಯಮಿತವಾಗಿ ಆಹಾರದಲ್ಲಿ ಬಳಸುವ ಬಗ್ಗೆ ಆಹಾರಮೇಳದಲ್ಲಿ ಗಂಭೀರ ಚಿಂತನೆಯಲ್ಲಿ ತೊಡಗಿದ್ದರು.
ರವಿ ಕೆಳಂಗಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !