ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಿ.ಟಿ.ರವಿ ವಿರುದ್ಧ ವಿವಿಧ ಪಕ್ಷ, ಸಂಘಟನೆಗಳ ಪ್ರತಿಭಟನೆ

ಕನ್ನಡರಾಜ್ಯೋತ್ಸವ:ನಾಡಧ್ವಜಾರೋಹಣ ನೆರವೇರಿಸದೆ ಉದ್ಧಟತನ ಆರೋಪ
Last Updated 6 ನವೆಂಬರ್ 2019, 13:52 IST
ಅಕ್ಷರ ಗಾತ್ರ

ಚಿಕ್ಕಮಗಳೂರು:‘ಜಿಲ್ಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಕನ್ನಡ ಧ್ವಜಾರೋಹಣ ಮಾಡದೆ ಉದ್ಧಟತನ ತೋರಿದ್ದಾರೆ’ ಎಂದು ಆರೋಪಿಸಿ ವಿವಿಧ ಪಕ್ಷ, ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಕ್ಷಣಾವೇದಿಕೆ, ಕನ್ನಡಸೇನೆ, ನವಕರ್ನಾಟಕ ಯುವ ಶಕ್ತಿ, ಕಸ್ತೂರಿ ಕರ್ನಾಟಕ, ಜೆಡಿಎಸ್, ಸಿಪಿಐ, ಬಿಎಸ್‌ಪಿ, ರಾಜ್ಯ ರೈತ ಸಂಘದ ಕಾರ್ಯಕರ್ತರು ಜಮಾಯಿಸಿದರು. ಆಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಚಿವ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಿದರು.

ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಸಚಿವ ಸಿ.ಟಿ.ರವಿ ಅವರು ಕನ್ನಡಕ್ಕೆ ಅಪಮಾನ ಮಾಡಿದ್ದಾರೆ. ನಾಡು, ನುಡಿ ಬಗ್ಗೆ ಅಭಿಮಾನ ಇಲ್ಲದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಹಿಂದಿಭಾಷೆಗೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 344 ಹಾಗೂ 351 ವಿಧಿ ರದ್ದುಪಡಿಸಬೇಕು. ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಕನ್ನಡ ಸಹಿತ 22 ಭಾಷೆಗಳನ್ನು ಸಮಾನವಾಗಿ ಪರಿಗಣಿಸಬೇಕು. ಜತೆಗೆ ತಳು, ಕುರುಂಬ, ಕೊಡವ, ಹವ್ಯಕ, ಬಡಗ ಭಾಷೆಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕನ್ನಡ ಭಾಷೆ ಅಭಿವ್ಯಕ್ತಿ ಮಾಧ್ಯಮ ಮಾತ್ರವಲ್ಲ. ಅದು ಸ್ಥಳೀಯ ಸಂಸ್ಕೃತಿ, ಕಲೆ, ಸಾಹಿತ್ಯದ, ಧರ್ಮ, ಪ್ರಾದೇಶಿಕ ವೈಶಿಷ್ಟತೆ ಬಿಂಬಿಸುವ ಪ್ರಬಲವಾದ ಸಂಕೇತವಾಗಿದೆ. ಹಿಂದಿ ಭಾಷೆ ಹೇರಿಕೆಯಿಂದ ಚಾರಿತ್ರಿಕ ಮಹತ್ವವುಳ್ಳ ಕನ್ನಡವನ್ನು ಎರಡನೇ ದರ್ಜೆ ಭಾಷೆಯಾಗಿಸಲು ಕೇಂದ್ರಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
ಜೆಡಿಎಸ್ ರಾಜ್ಯಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕನ್ನಡಧ್ವಜಾರೋಹಣ ಮಾಡಿದ್ದಾರೆ. ಸಚಿವರಾಗುವ ಮೊದಲು ಸಿ.ಟಿ.ರವಿ ಅವರು ಕನ್ನಡಧ್ವಜಕ್ಕೆ ಒತ್ತು ನೀಡುತ್ತಿದ್ದರು. ಅವರು ಅಧಿಕಾರ ದೊರೆತಾಗ ಭಾಷಾಭಿಮಾನ ಮರೆತಿದ್ದಾರೆ ಎಂದು ಟೀಕಿಸಿದರು.

ಬಿಎಸ್‌ಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಟಿ.ರಾಧಕೃಷ್ಣ ಮಾತನಾಡಿ, ಕನ್ನಡ ರಾಜ್ಯೋತ್ಸವದಂದು 9 ಜಿಲ್ಲೆಗಳಲ್ಲಿ ನಾಡಧ್ವಜಾರೋಹಣ ಮಾಡಲಾಗಿದೆ. ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ. ನಾಡಧ್ವಜಕ್ಕೆ ಸರ್ಕಾರ ಮನ್ನಣೆ ನಿಡಬೇಕು. ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜದ ಜತೆಗೆ ನಾಡಧ್ವಜಾರೋಹಣ ನೆರವೇರಿಸಬೇಕು ಎಂದರು.

ಕನ್ನಡಸೇನೆಯ ರಾಜೇಗೌಡ, ಕರ್ನಾಟಕ ರಕ್ಷಣಾವೇದಿಕೆಯ ತೇಗೂರು ಜಗದೀಶ್, ರೈತಮುಖಂಡರಾದ ಕೆ.ಕೆ.ಕೃಷ್ಣೇಗೌಡ, ಚಂದ್ರೇಗೌಡ, ಗುರುಶಾಂತಪ್ಪ, ಸಿಪಿಐ ಮುಖಂಡರಾದ ಬಿ.ಅಮ್ಜದ್, ರಾಧಾಸುಂದರೇಶ್, ಕಾಂಗ್ರೆಸ್ ಮುಖಂಡ ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT