ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳೊಳಗೆ ತಾಂತ್ರಿಕ ವರದಿ ನೀಡಲು ಸೂಚನೆ

ಚಿಕ್ಕಮಗಳೂರು: ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಆನಂದ್ ಸಿಂಗ್
Last Updated 16 ಏಪ್ರಿಲ್ 2021, 12:46 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಟಿಆರ್‌ 72 ಆಸನ ಸಾಮರ್ಥ್ಯದ ವಿಮಾನ ನಿಲ್ದಾಣ ನಿರ್ಮಾಣ ನಿಟ್ಟಿನಲ್ಲಿ ಜಾಗ ಮತ್ತು ಪರಿಸರವನ್ನು ಪರಿಶೀಲಿಸಿ ಮೇ 15ರೊಳಗೆ ತಾಂತ್ರಿಕ ವರದಿ ನೀಡುವಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಆನಂದ್‌ ಸಿಂಗ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಬಳೆ ಕೈಗಾರಿಕಾ ಪ್ರದೇಶದ ಬಳಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಿರುವ ಜಾಗವನ್ನು ಶುಕ್ರವಾರ ವೀಕ್ಷಣೆ ಮಾಡಿ ಅವರು ಮಾತನಾಡಿದರು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎಷ್ಟು ಎಕರೆ ಜಾಗ ಇರಬೇಕು, ಹಾಲಿ ಗುರುತಿಸಿರುವ ಪ್ರದೇಶದ ವಿಸ್ತೀರ್ಣ ಎಷ್ಟಿದೆ, ಭೂಸ್ವಾಧೀನ ಎಷ್ಟು ಮಾಡಬೇಕಾಗುತ್ತದೆ ಮೊದಲಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಹಾಲಿ ಗುರುತಿಸಿರುವ ಜಾಗ ಪ್ರಶಸ್ತವೇ ಎಂಬ ಬಗ್ಗೆ ಸಮಗ್ರ ಪರಿಶೀಲನೆ ಮಾಡಬೇಕು. ಕಾರ್ಯಸಾಧುವಲ್ಲ ಎನಿಸಿದರೆ ಬೇರೆ ಕಡೆ ಜಾಗ ಗುರುತಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಹಾಲಿ ಗುರುತಿಸಿರುವ ಜಾಗವು ಕೈಗಾರಿಕಾ ಪ್ರದೇಶದ ಸನಿಹದಲ್ಲಿದೆ. ಕೈಗಾರಿಕಾ ಘಟಕಗಳ ಬಳಿ ವಿಮಾನ ನಿಲ್ದಾಣ ನಿರ್ಮಾಣ ಸಾಧಕ–ಬಾಧಕಗಳ ಬಗ್ಗೆಯೂ ಚರ್ಚಿಸಿ ವರದಿ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಇಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ಸ್ಥಾಪನೆ ಅಗತ್ಯ ಇದೆ. ತಾಂತ್ರಿಕ ವರದಿ ನೀಡಿದ ಬಳಿಕ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ಅನುದಾನ ಒದಗಿಸುವಂತೆ ಕೋರಲಾಗುವುದು ಎಂದು ಹೇಳಿದರು.

ಶಾಸಕ ಸಿ.ಟಿ.ರವಿ, ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ. ಹಾಕೆ, ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು ಇದ್ದರು.

‘ಕನಿಷ್ಠ 350 ಎಕರೆ ಅಗತ್ಯ’

ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ.‍ಪ್ರಕಾಶ್‌ ಮಾತನಾಡಿ, ಜಿಲ್ಲೆಯ ಕಿರು ವಿಮಾನ ನಿಲ್ದಾಣದ ಪ್ರಸ್ತಾವದ ಕುರಿತು ಮಾಹಿತಿ ನೀಡಿದರು.

ಉದ್ದೇಶಿತ ಕಿರು ವಿಮಾನ ನಿಲ್ದಾಣ ನಿರ್ಮಿಸಲು 140.03 ಎಕರೆ ಇರಬೇಕು. ಹಾಲಿ ಗುರುತಿಸಿರುವ ಪ್ರದೇಶದಲ್ಲಿ 120 .22 ಎಕರೆ ಸರ್ಕಾರಿ ಜಾಗ ಲಭ್ಯ ಇದೆ. 19.21 ಎಕರೆ ಭೂಸ್ವಾಧೀನ (ಖಾಸಗಿ ಜಾಗ) ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ತಾಂತ್ರಿಕ ತಜ್ಞ ಪೂರ್ವಿಮಠ್‌ ಮಾತನಾಡಿ, ಎಟಿಆರ್‌ 72 ಆಸನ ಸಾಮರ್ಥ್ಯದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕನಿಷ್ಠ ಸುಮಾರು 350 ಎಕರೆ ಜಾಗ ಬೇಕಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT