ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ | ಅಣಬೆ ಕೃಷಿ; ಶ್ರೇಯಸ್‌ಗೆ ಯಶಸ್ಸು

Published 13 ಅಕ್ಟೋಬರ್ 2023, 6:54 IST
Last Updated 13 ಅಕ್ಟೋಬರ್ 2023, 6:54 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನ ಕೂತುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ವೈಕುಂಠಪುರದ ನಿವಾಸಿ ಶ್ರೇಯಸ್ ಎಂಬುವರು ಅಣಬೆ ಬೇಸಾಯದಲ್ಲಿ ತೊಡಗಿಕೊಂಡು ಲಾಭ ಗಳಿಸುತ್ತಿದ್ದಾರೆ.

ಮಲೆನಾಡಿನಲ್ಲಿ ಕೋಳಿ, ಜೇನು ಸಾಕಾಣಿಕೆ, ಹಂದಿಶೇಡ್, ತರಕಾರಿ ಬೆಳೆ ಇತ್ಯಾದಿ ಮಾಡುವವರು ಇದ್ದರೂ, ಅಣಬೆ ಬೇಸಾಯ ಮಾಡುವವರ ಸಂಖ್ಯೆ ವಿರಳ. ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಳ ಇಳುವರಿ ವ್ಯತ್ಯಾಸವಾದಾಗ ಲಾಭ-ನಷ್ಟಗಳ ಲೆಕ್ಕಾಚಾರ ನಡೆಯುತ್ತದೆ. ಉಪ ಕಸಬುಗಳತ್ತ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ರೀತಿ ಉಪ ಕಸುಬು ಅರಸಿ, ಅಣಬೆ ಬೇಸಾಯ ಮಾಡಿ ಶ್ರೇಯಸ್ ಯಶಸ್ಸು
ಕಂಡಿದ್ದಾರೆ.

‘ಆನ್‌ಲೈನ್‌ನಲ್ಲಿ ಅಣಬೆ ಬೇಸಾಯದ ಬಗ್ಗೆ ತಿಳಿದುಕೊಂಡೆ. ಮೈಸೂರು ಪ್ರಯೋಗಾಲಯದಿಂದ ಬಿತ್ತನೆ ಬೀಜ ತರಿಸಿ, ಬೇಸಾಯ ಆರಂಭಿಸಿದೆ. ಉತ್ತಮ ಇಳುವರಿ ಸಿಗಲಿಲ್ಲ. ಆದರೆ, ಆತ್ಮವಿಶ್ವಾಸ ಕಳೆದುಕೊಳ್ಳದೆ ಮರಳಿ ಯತ್ನಿಸಿದೆ. ಸ್ನೇಹಿತರ ಅನುಭವ ಕೇಳಿ, ಶಿವಮೊಗ್ಗದಿಂದ 2 ಕೆ.ಜಿ. ಬೀಜ ತರಿಸಿ, ಅಣಬೆ ಬೆಳೆಸಿದೆ. ಈಗ 20 ಕೆ.ಜಿ ಬೀಜ ಹಾಕಿ, 160 ಕೆ.ಜಿ ಇಳುವರಿ ಪಡೆಯುತ್ತಿದ್ದೇನೆ. ಕುಟುಂಬದ ಸಹಕಾರದಿಂದ ಯಶಸ್ಸು ಗಳಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಶ್ರೇಯಸ್.

ಪ್ರತಿ 25 ದಿನಕೊಮ್ಮೆ ಅಣಬೆ ಕಟಾವು ಮಾಡಿ ಮಾರಾಟ ಮಾಡಬಹುದು. ಹತ್ತು ಕೆ.ಜಿ. ಅಣಬೆ ಬೀಜದಲ್ಲಿ 60ರಿಂದ 70ಕೆ.ಜಿ.ಯಷ್ಟು ಉತ್ಪನ್ನ ಸಿಗುತ್ತದೆ. ತೀರ್ಥಹಳ್ಳಿ, ಕೊಪ್ಪ, ಉಡುಪಿ, ಮಂಗಳೂರು ಭಾಗದಲ್ಲಿ ಮಾರುಕಟ್ಟೆಯಿದೆ. ತಿಂಗಳಿಗೆ ಸರಾಸರಿ ₹20ಸಾವಿರದಿಂದ ₹25ಸಾವಿರದವರೆಗೆ ಆದಾಯ ಪಡೆಯಬಹುದು ಎಂಬುದು ಅವರ ಅನುಭವ.

ಅಣಬೆ ಕೃಷಿ ವಿಧಾನ:
ಒಣಹುಲ್ಲನ್ನು 2.5 ಇಂಚು ಉದ್ದಕ್ಕೆ ಕತ್ತರಿಸಿ ಸುಮಾರು 2 ಗಂಟೆಯ ತನಕ ನೀರಿನಲ್ಲಿ ನೆನೆಸಿಡಬೇಕು. ಬಳಿಕ ಅಣಬೆ ಬಿತ್ತನೆ ಮಾಡಿದ ಹುಲ್ಲನ್ನು ಹಬೆಯಲ್ಲಿ 2 ಗಂಟೆಗಳ ಕಾಲ ಬೇಯಿಸಿ ಒಂದು ಕೆ.ಜಿ. ಬಿತ್ತನೆಯಲ್ಲಿ 8 ಪ್ಯಾಕ್‍ಗಳನ್ನು ಮಾಡಿ 20 ದಿನಗಳ ಕಾಲ ಕತ್ತಲು ಕೋಣೆಯಲ್ಲಿ ಇಟ್ಟು 28ನೇ ದಿನಕ್ಕೆ ಅಣಬೆ ಕಟಾವು ಮಾಡಬೇಕು. ಈ ಕೃಷಿ ಮಾಡಲು ಕಾರ್ಮಿಕರ ಅಗತ್ಯವಿಲ್ಲ. ಮನೆಯವರು ಸೇರಿಕೊಂಡು ಮಾಡಬಹುದು. ಸ್ಥಳೀಯ ಹೋಟೆಲ್‌ಗಳಲ್ಲೂ ಬೇಡಿಕೆ ಇದೆ ಎನ್ನುತ್ತಾರೆ ಅವರು.
‘ಆರ್ಥಿಕ ಸ್ವಾವಲಂಬನೆ’
ಯಾವುದೇ ಉದ್ಯಮ ಪ್ರಾರಂಭಿಸಲು ಆಸಕ್ತಿ ಜೊತೆಗೆ ಮಾರುಕಟ್ಟೆ ಜ್ಞಾನವೂ ಅಗತ್ಯ. ಗ್ರಾಮೀಣ ಭಾಗದಲ್ಲಿ ಈ ಉದ್ಯಮ ಮಾಡುವುದು ಕಷ್ಟವಾದರೂ ಭವಿಷ್ಯದಲ್ಲಿ ಹೆಚ್ಚಿನ ಸಾಧನೆ ಮಾಡುವ ಆಸೆಯಿದೆ. ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿದ ಖುಷಿ ಇದೆ ಎಂದು ಶ್ರೇಯಸ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT