ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಿಂದ 33 ಸಾವಿರ ಟನ್ ಜೇನುತುಪ್ಪ ರಪ್ತು: ಟಿ.ವಿ.ವಿಜಯನ್

Published 12 ನವೆಂಬರ್ 2023, 14:18 IST
Last Updated 12 ನವೆಂಬರ್ 2023, 14:18 IST
ಅಕ್ಷರ ಗಾತ್ರ

ನರಸಿಂಹರಾಜಪುರ: ‘ಭಾರತದಲ್ಲಿ 2019–20ನೇ ಸಾಲಿನಲ್ಲಿ 1.25ಲಕ್ಷ ಟನ್ ಜೇನು ಸಂಗ್ರಹವಾಗಿ 33ಸಾವಿರ ಟನ್ ಜೇನುತುಪ್ಪವನ್ನು ರಪ್ತು ಮಾಡಲಾಗಿತ್ತು’ ಎಂದು ತಾಲ್ಲೂಕು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಟಿ.ವಿ.ವಿಜಯನ್ ಹೇಳಿದರು.

ಪಟ್ಟಣದ ಮೇದರಬೀದಿ ಸಮುದಾಯ ಭವನದಲ್ಲಿ ಶಿವಮೊಗ್ಗ ಪ್ರಾದೇಶಿಕ ರಬ್ಬರ್ ಮಂಡಳಿ, ಚೈತನ್ಯ ಆರ್‌ಪಿಎಸ್‌ನಿಂದ ಹಮ್ಮಿಕೊಂಡಿದ್ದ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಹಮ್ಮಿಕೊಂಡಿದ್ದ ಜೇನು ಸಾಕಾಣಿಕೆ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಇಂದು ಹಿಮಾಲಯ, ಗಂಗಾ ನದಿಯ ತೀರ ಹಾಗೂ ಪಶ್ಚಿಮಘಟ್ಟಗಳ ಭಾಗದಲ್ಲಿ ನೈಸರ್ಗಿಕವಾಗಿ ಸಿಗುವ ಜೇನು ತುಪ್ಪದಲ್ಲಿ ಔಷಧೀಯ ಗುಣ ಇರುವುದರಿಂದ ಭಾರತದ ಜೇನು ತುಪ್ಪಕ್ಕೆ ಹೆಚ್ಚಿನ ಬೇಡಿಕೆಯಿದೆ. ಶೇ 80ರಷ್ಟು ಹೂಗಳನ್ನು ಪರಾಗಸ್ಪರ್ಶ ಮಾಡುವುದೇ ಜೇನು ನೊಣಗಳು. ಆದ್ದರಿಂದ ಜೇನು ನೊಣಗಳೂ ರೈತನ ಮಿತ್ರ ಎಂದರು.

ಶಿವಮೊಗ್ಗದ ಪ್ರಾದೇಶಿಕ ರಬ್ಬರ್ ಮಂಡಳಿ ಅಧಿಕಾರಿ ಸುರೇಶ್ ಮಾತನಾಡಿ, ಪ್ರತಿ ಮನುಷ್ಯನಿಗೂ ವರ್ಷಕ್ಕೆ 10 ಕೆ.ಜಿ ಜೇನು ತುಪ್ಪದ ಅವಶ್ಯಕತೆಯಿದೆ. ಅದನ್ನು ನಾವು ಹಣಕೊಟ್ಟು ಕೊಳ್ಳುವುದಕ್ಕಿಂತ ತರಬೇತಿ ಪಡೆದ ಪ್ರತಿಯೊಬ್ಬರು ಕನಿಷ್ಠ 1 ಜೇನು ಪೆಟ್ಟಿಗೆಯನ್ನು ತಮ್ಮ ಮನೆಯ ಅಂಗಳ ಅಥವಾ ಜಮೀನಿನಲ್ಲಿ ಇಟ್ಟು ಪ್ರಾಯೋಗಿಕವಾಗಿ ಜೇನು ಸಾಕಾಣಿಕೆ ಮಾಡಬಹುದು ಎಂದರು.

ತರಬೇತುದಾರ ರಂಜಿತ್ ಮಾತನಾಡಿ, ಜೇನುಸಾಕಾಣಿಕೆ ಪ್ರಾರಂಭದಲ್ಲಿ ಉಪಕಸುಬನ್ನಾಗಿ ಮಾಡಿ ನಂತರ ಅದನ್ನು ಒಂದು ದೊಡ್ಡ ಉದ್ಯಮವನ್ನಾಗಿ ಬೆಳೆಸಬಹುದು. ನಾನು 80 ಜೇನು ಪೆಟ್ಟಿಗೆ ಇಟ್ಟಿದ್ದು ಪ್ರತಿ ಪೆಟ್ಟಿಗೆಯಿಂದ ಸರಾಸರಿ 5 ಕೆ.ಜಿ ಜೇನುತುಪ್ಪ ತೆಗೆಯುತ್ತಿದ್ದೇನೆ. ಫೆಬ್ರುವರಿ 15ರ ನಂತರ ಮೇ ತಿಂಗಳವರೆಗೆ 3ರಿಂದ 4ಬಾರಿ ಜೇನು ತುಪ್ಪ ತೆಗೆಯಬಹುದು. ಪ್ರತಿ ಕೆ.ಜಿ ಜೇನು ತುಪ್ಪಕ್ಕೆ ₹700 ರಿಂದ 800ರವರೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಧಾರಣೆ ಇದೆ ಎಂದರು.

ಅಧ್ಯಕ್ಷತೆಯನ್ನು ಚೈತನ್ಯ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಪ್ರೇಮ್ ಜಿ ವಹಿಸಿದ್ದರು.

ಶಿವಮೊಗ್ಗ ರಬ್ಬರ್ ಮಂಡಳಿಯ ಸಹಾಯಕ ಅಭಿವೃದ್ಧಿ ಅಧಿಕಾರಿ ರಘು, ದೇಗುಲ ಸಮಿತಿ ಅಧ್ಯಕ್ಷ ಪ್ರವೀಣ್, ಚೈತನ್ಯ ಆರ್‌ಪಿಎಸ್ ಸಂಘದ ಉಪಾಧ್ಯಕ್ಷ ಎಲ್ದೋ, ನರಸಿಂಹರಾಜಪುರ ತಾಲ್ಲೂಕು ರಬ್ಬರ್ ಮಂಡಳಿಯ ಕ್ಷೇತ್ರಾಧಿಕಾರಿ ಟೋನಿ, ಶೆಟ್ಟಿಕೊಪ್ಪ ಎಂ.ಮಹೇಶ್ ಇದ್ದರು. ತರಬೇತಿ ಪಡೆದವರಿಗೆ ಜೇನು ಸಾಕಾಣಿಕೆಯ ಕಿಟ್ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT