ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲ್ದೂರು | ತಾಂತ್ರಿಕ ಸಮಸ್ಯೆ: ಪಹಣಿ–ಇಕೆವೈಸಿ ಜೋಡಣೆಗೆ ಅಡಚಣೆ

Published : 16 ಮೇ 2024, 7:31 IST
Last Updated : 16 ಮೇ 2024, 7:31 IST
ಫಾಲೋ ಮಾಡಿ
Comments

ಆಲ್ದೂರು: ವಿವಿಧ ಸೌಲಭ್ಯಗಳನ್ನು ಪಡೆಯಲು ಪಹಣಿ ಮತ್ತು ಇಕೆವೈಸಿ ಜೋಡಣೆ ಮಾಡುವ ಪ್ರಕ್ರಿಯೆಯಲ್ಲಿ ಕೆಲವು ದಿನಗಳಿಂದ ತಾಂತ್ರಿಕ ಸಮಸ್ಯೆಗಳು ತಲೆದೋರುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ರೈತರು ದೂರಿದ್ದಾರೆ.

ರೈತರು ಮತ್ತು ಕಾಫಿ ಬೆಳೆಗಾರರಿಗೆ ಸರ್ಕಾರದಿಂದ ಸಿಗುವ ಪರಿಹಾರ ಧನ ಪಡೆಯಲು, ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಹಣ ನೇರವಾಗಿ ಖಾತೆಗೆ ಜಮೆ ಮಾಡಿಸಿಕೊಳ್ಳಲು ಆಧಾರ್ ಸಂಖ್ಯೆಯನ್ನು ಇಕೆವೈಸಿ ಮೂಲಕ ಪಹಣಿಯೊಂದಿಗೆ ಜೋಡಣೆ ಮಾಡಬೇಕಾಗುತ್ತದೆ.

ರೈತರ ಪಹಣಿಯನ್ನು ಬೇನಾಮಿಗಳು ತೆಗೆದುಕೊಂಡು ಹೋಗಿ ಸಾಲ ಪಡೆಯುವುದು ಮತ್ತಿತರ ರೀತಿಯಲ್ಲಿ ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯುವುದಕ್ಕೂ ಇದು ನೆರವಾಗುವುದರಿಂದ ಜೋಡಣೆ ಮಾಡಿಸಿಕೊಳ್ಳುವ ಬಗ್ಗೆ ಸರ್ಕಾರವೇ ಮಾಹಿತಿ ರವಾನಿಸಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ರೈತರು ಮಾತ್ರವಲ್ಲ, ಅಧಿಕಾರಿಗಳು ಕೂಡ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

ಇಕೆವೈಸಿ ಲಿಂಕ್ ಮಾಡಿಸಿಕೊಳ್ಳಲು ಹಲವು ದಿನಗಳಿಂದ ನಾಡಕಚೇರಿಗೆ ಬರುತ್ತಿದ್ದು ಇನ್ನೂ ಕೆಲಸ ಆಗಲಿಲ್ಲ. ಅಪ್ಲೋಡ್ ಮಾಡುವಾಗ  ಪ್ರತಿಯೊಂದು ಪಹಣಿಗೂ ಒಂದೊಂದು ಒಟಿಪಿ ಬರುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ ಎಂದು ಕಾಫಿ ಬೆಳೆಗಾರ ಎಚ್.ಎಸ್. ಉಮಾಶಂಕರ್ ಹೇಳಿದರು.

ಮಾಹಿತಿ ಅಪ್ಲೋಡ್ ಮಾಡುವ ವ್ಯವಸ್ಥೆಯೇ ಸರಿ ಇಲ್ಲ. ಹೀಗಿರುವಾಗ ಅಧಿಕಾರಿಗಳನ್ನು ಪ್ರಶ್ನಿಸಿ ಏನು ಪ್ರಯೋಜನ ಎಂದು ಬೆಳಗಾರರಾದ ಚಿಕ್ಕಮಾಗರವಳ್ಳಿ ವಿಜಯೇಂದ್ರ, ದೊಡ್ಡಮಾಗರವಳ್ಳಿ ಸಂದೀಪ್ ಹಾಗೂ ಪರಮೇಶ್ ಎಚ್.ಆರ್ ಕೇಳಿದರು.

ಬೆಳಗೋಡು ಗ್ರಾಮದ ನಿವಾಸಿ 77 ವರ್ಷ ವಯಸ್ಸಿನ ಈರಯ್ಯ ನಾಡಕಚೇರಿಗೆ ಆಟೋದಲ್ಲಿ ಬರುತ್ತಿದ್ದಾರೆ. ಒಮ್ಮೆ ಬಂದು ಹೋಗಲು ₹ 100 ಖರ್ಚಾಗುತ್ತದೆ. ‘ಬಂದು ಹೋಗಲು ಹಣ ವೆಚ್ಚ ಆಗುವುದರ ಜೊತೆಯಲ್ಲಿ ಆಯಾಸವೂ ಕಾಡುತ್ತದೆ. ಆದ್ದರಿಂದ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಿದರೆ ನನ್ನಂಥವರಿಗೆ ತುಂಬ ಅನುಕೂಲ ಆದೀತು’ ಎನ್ನುತ್ತಾರೆ ಈರಯ್ಯ.

ಕೆಲವರಲ್ಲಿ ಆ್ಯಂಡ್ರಾಯ್ಡ್ ಫೋನ್‌ಗಳು ಇರುವುದಿಲ್ಲ. ಕೀಪ್ಯಾಡ್ ಫೋನ್‌ ಬಳಸುವುದಾದರೆ ನಾಲ್ಕು ಬಾರಿ ಒಟಿಪಿ ಪಡೆದುಕೊಳ್ಳಬೇಕಾಗುತ್ತದೆ. ಆ ಪ್ರಕ್ರಿಯೆ ಮುಗಿದು ಮಾಹಿತಿ ಅಪ್ಲೋಡ್ ಮಾಡುವಷ್ಟರಲ್ಲಿ ನಿಗದಿತ ಸಮಯ ಮುಕ್ತಾಯವಾಗುತ್ತಿದೆ. ಕೆಲವರ ಹ್ಯಾಂಡ್‌ಸೆಟ್‌ಗಳಿಗೆ ಒಟಿಪಿ ಬರುವುದೇ ಇಲ್ಲ. ಬಿಎಸ್ಎನ್ಎಲ್ ನೆಟ್‌ವರ್ಕ್ ಇರುವ ಮೊಬೈಲ್ ಫೋನ್‌ನಲ್ಲಿ ಆಧಾರ್ ಜೋಡಣೆ ಪ್ರಕ್ರಿಯೆ ಬೇಗ ಆಗುತ್ತದೆ. ಸಮಸ್ಯೆ ಉಂಟಾಗಿರುವುದರಿಂದ ಸರ್ಕಾರ ಶೀಘ್ರ ಹೊಸ ಆ್ಯಪ್ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ತಹಶೀಲ್ದಾರ್ ಸುಮಂತ್ ತಿಳಿಸಿದರು.

ಈಕೆವೈಸಿ ಜೋಡಣೆಗೆ ರೈತರಿಗೆ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆ ಹಲವು ದಿನಗಳಿಂದ ಪಹಣಿಗೆ ಆಧಾರ್ ಜೋಡಣೆ ಮಾಡಲು ಪರದಾಟ ಸಮಸ್ಯೆ ಬಗೆಹರಿಸಲು ಶೀಘ್ರ ನೂತನ ಆ್ಯಪ್ ಬಿಡುಗಡೆ ಸಾಧ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT