ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಆಡಳಿತದಲ್ಲಿ ಒಂದೇ ಒಂದು ಶಂಕುಸ್ಥಾಪನೆ ನಡೆಸಿಲ್ಲ: ವಿಜಯೇಂದ್ರ ಟೀಕೆ

Published 26 ಮೇ 2024, 15:11 IST
Last Updated 26 ಮೇ 2024, 15:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕಾಂಗ್ರೆಸ್ ನೇತೃತ್ವದ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಶೂನ್ಯ. ಶಿಕ್ಷಣ, ಕಾನೂನು ಸುವ್ಯವಸ್ಥೆ ಹದಗೆಟ್ಟು ಜನರು ಆತಂಕದಿಂದ ಬದುಕುವಂತಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಒಂದೇ ಒಂದು ಹೊಸ ಕಾಮಗಾರಿಯ ಶಂಕುಸ್ಥಾಪನೆ ನಡೆದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯ ಬಾಕಿ ಕಾಮಗಾರಿಗಳನ್ನು ಮುಂದುವರಿಸಲಾಗಿದೆಯೇ ಹೊರತು ಕಾಂಗ್ರೆಸ್ ಸರ್ಕಾರ ತಮ್ಮ ವರ್ಷದ ಆಡಳಿತದಲ್ಲಿ ಯಾವುದೇ ಹೊಸ ಯೋಜನೆ, ಅಭಿವೃದ್ಧಿ ಕಾಮಗಾರಿ ಕೈಗೆತ್ತಿಗೊಂಡಿಲ್ಲ. ನೀರಾವರಿ ಯೋಜನೆಗಳಿಗೆ ಬೊಮ್ಮಾಯಿ ನೀಡಿದ್ದ ₹18,500 ಕೋಟಿ ಅನುದಾನವನ್ನು ತಡೆಹಿಡಿದಿದೆ. ‘ಗ್ಯಾರಂಟಿ’ ಯೋಜನೆಗಳ ಗುಂಗಿನಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ’ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಗ್ರಮಾನ್ಯ ರಾಷ್ಟ್ರವಾಗಿಸುವ ಆಶಯ ಹೊಂದಿದ್ದಾರೆ. ಅದಕ್ಕಾಗಿ ಯುವ ಜನರಲ್ಲಿ ಶಕ್ತಿ ತುಂಬಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದರು. ಆದರೆ, ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅದನ್ನು ಅನುಷ್ಠಾನಗೊಳಿಸದೆ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆ. ಇದರಿಂದ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಶಿಕ್ಷಕರು, ಮಕ್ಕಳು, ಪೋಷಕ ವರ್ಗ ಅಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ ಎಂದರು.

‘ಕಾಂಗ್ರೆಸ್ ಅಲ್ಪಸಂಖ್ಯಾತ ವರ್ಗದ ತುಷ್ಟೀಕರಣಕ್ಕೆ ಮುಂದಾಗಿದೆ. ವಿಧಾನಸೌಧದ ಆವರಣದಲ್ಲಿಯೇ ಪಾಕಿಸ್ತಾನ್ ಜಿಂದಾಬಾಂದ್ ಘೋಷಣೆ ಕೂಗಿದರೂ ಯಾವುದೇ ಕ್ರಮವಾಗಿಲ್ಲ. ಇಂತಹ ಧೋರಣೆಗಳಿಂದ ರಾಜ್ಯದಲ್ಲಿ ಯುವತಿಯರ ಹತ್ಯೆ. ಲವ್‌ಜಿಹಾದ್‌ ರೀತಿಯ ಪ‍್ರಕರಣಗಳು ಹೆಚ್ಚುತ್ತಿವೆ. ಚನ್ನಗಿರಿಯಲ್ಲಿ ಮಟ್ಕಾ ದಂಧೆ ಪ್ರಕರಣದಲ್ಲಿ ಕಿಡಿಗೇಡಿಗಳು ಪೊಲೀಸ್ ಠಾಣೆಗೆ ನುಗ್ಗಿ ಹಲ್ಲೆ ನಡೆಸಿ ಧ್ವಂಸ ಮಾಡಿದ್ದಾರೆ. ಇಂತಹ ಘಟನೆಗಳಿಂದ ರಾಜ್ಯದಲ್ಲಿ ಸರ್ಕಾರ ಹಾಗೂ ಗೃಹ ಸಚಿವರು ಇದ್ದಾರಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ’ ಎಂದು ಕುಟುಕಿದರು.

ರಾಜ್ಯದಲ್ಲಿ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಚುನಾವಣೆಯ 6 ಸ್ಥಾನಗಳಲ್ಲಿ ಎಲ್ಲವನ್ನೂ ಬಿಜೆಪಿ–ಜೆಡಿಎಸ್ ಮೈತ್ರಿ ಗೆಲ್ಲಲಿದೆ. ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಎಸ್‌.ಎಲ್. ಭೋಜೇಗೌಡ ಸ್ಪರ್ಧೆ ಮಾಡಲಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾರ್ಯಕರ್ತರು ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೂನ್‌ 3ರಂದು ಮತದಾನ ನಡೆಯಲಿದ್ದು, ಪಕ್ಷದ ಅಭ್ಯರ್ಥಿಗಳು ಅಧಿಕ ಮತಗಳ ಅಂತರದಲ್ಲಿ ದೊಡ್ಡ ಗೆಲುವು ಸಾಧಿಸಲಿದ್ದಾರೆ. ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗದು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಗೆಲ್ಲುವ ಭ್ರಮೆಯಲ್ಲಿದೆ. ಫಲಿತಾಂಶದ ಬಳಿಕ ಕಾಂಗ್ರೆಸ್‌ಗೆ ಜ್ಞಾನೋದಯವಾಗಲಿದೆ ಎಂದು ವ್ಯಂಗ್ಯವಾಡಿದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಲೋಕಸಭಾ ಚುನಾವಣೆಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಪದವೀಧರ ಕ್ಷೇತ್ರದ ಅಭ್ಯರ್ಥಿ ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್‌.ಎಲ್‌.ಭೋಜೇಗೌಡ, ಚುನಾವಣಾ ಉಸ್ತುವಾರಿ ಹಾಗೂ ಶಾಸಕ ವಿ. ಸುನೀಲ್‌ಕುಮಾರ್, ವಿಧಾನ ಪರಿಷತ್ತಿನ ಸದಸ್ಯ ಡಿ.ಎಸ್. ಅರುಣ್‌ಕುಮಾರ್, ಮುಖಂಡರಾದ ಸಿ.ಟಿ. ರವಿ, ಡಿ.ಎನ್‌. ಜೀವರಾಜ್, ಡಿ.ಎಸ್.ಸುರೇಶ್, ದತ್ತಾತ್ರಿ, ಕಲ್ಮುರುಡಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶೆಟ್ಟಿ ಇದ್ದರು.

ಭಿನ್ನಾಭಿಪ್ರಾಯ ಬದಿಗಿಟ್ಟು ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗದು ‘ಗ್ಯಾರಂಟಿ’ ಯೋಜನೆಗಳ ಗುಂಗಿನಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT