ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕಸದ ತೊಟ್ಟಿಗಳಾದ ಖಾಲಿ ನಿವೇಶನ

‌ರಘು ಕೆ.ಜಿ
Published 15 ಫೆಬ್ರುವರಿ 2024, 5:54 IST
Last Updated 15 ಫೆಬ್ರುವರಿ 2024, 5:54 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮತ್ತು ತ್ಯಾಜ್ಯ ಮುಕ್ತ ನಗರವಾಗಿಸಲು ಜಿಲ್ಲಾಡಳಿತ ಮತ್ತು ನಗರಸಭೆ ಪ್ರಯತ್ನಿಸುತ್ತಿದ್ದರೆ, ಇತ್ತ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆಯುವ ಜತೆಗೆ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ.

ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್‌ಗಳಿದ್ದು, ನಗರಸಭೆ ಮಾಹಿತಿ ಪ್ರಕಾರ 23,253 ವಸತಿ ನಿವೇಶನ, 4,456 ವಾಣಿಜ್ಯ ನಿವೇಶನ ಹಾಗೂ 7,350 ಖಾಲಿ ನಿವೇಶನಗಳಿವೆ. ಈ ಪೈಕಿ ರಾಮನಹಳ್ಳಿ, ಶಂಕರಪುರ, ಗವನಹಳ್ಳಿ, ಕಲ್ಯಾಣನಗರ, ಕೆಂಪನಹಳ್ಳಿ, ಹೌಸಿಂಗ್‌ ಬೋರ್ಡ್‌, ಚಂದ್ರಕಟ್ಟೆ, ಗೌರಿಕಾಲುವೆ ಬಡಾವಣೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳ ಸಂಖ್ಯೆ ಅಧಿಕ. ಕೆಲವೆಡೆ ಖಾಸಗಿ ಹಾಗೂ ನಗರಸಭೆ ಸುಪರ್ದಿಯ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ನಿರ್ವಹಣೆ ಇಲ್ಲದೇ ಗಿಡಗಳು ಬೆಳೆದುನಿಂತಿವೆ.

ಶಂಕರಪುರ ಬಡಾವಣೆ ಮುಖ್ಯ ರಸ್ತೆ ಹಾಗೂ ಶೆಟ್ರು ಬೀದಿ ತಿರುವಿನಲ್ಲಿರುವ ಖಾಲಿ ನಿವೇಶನ ಜಾಗದಲ್ಲಿ ಪ್ಲಾಸ್ಲಿಕ್‌ ಕವರ್‌, ಮದ್ಯದ ಖಾಲಿ ಪ್ಯಾಕೆಟ್, ಮನೆಯ ತ್ಯಾಜ್ಯಗಳನ್ನು ಸುರಿಯಲಾಗಿದೆ. ಅಲ್ಲದೇ ವಿವಿಧ ಜಾತಿಯ ಗಿಡಗಂಟಿಗಳು ಮಾರುದ್ದ ಬೆಳೆದು ನಿಂತಿವೆ. ಇಲಿ, ಹೆಗ್ಗಣ, ಹಾವು, ಹಲ್ಲಿಗಳ ಆವಾಸ ಸ್ಥಾನವಾಗಿ ರೂಪುಗೊಂಡಿವೆ. ಇದರಿಂದ ಅಕ್ಕ–ಪಕ್ಕದ ನಿವಾಸಿಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿ ರೋಗ ರುಜಿನಗಳು ಹರಡುಂತಾಗಿದೆ.

ಖಾಲಿ ನಿವೇಶನಗಳ ಅಕ್ಕ–ಪಕ್ಕದ ನಿವಾಸಿಗಳು ಭಯದಲ್ಲೇ ಬದುಕು ಸಾಗಿಸುತ್ತಿದ್ದಾರೆ. ನಗರದ ಹೊರ ವಲಯದ  ಖಾಲಿ ನಿವೇಶನಗಳಲ್ಲಿ ಗಿಡಗಳು ಬೆಳೆದಿರುವುದರಿಂದ ಕಾಡುಪ್ರಾಣಿಗಳ ಅಡಗು ತಾಣವಾಗಿರುವ ಆತಂಕದಲ್ಲಿದ್ದಾರೆ. ರಾತ್ರಿ ವೇಳೆ ಓಡಾಡಲು ಭಯಪಡುತ್ತಿದ್ದಾರೆ.

‘ಚಿಕ್ಕಮಗಳೂರು ಎಂದರೆ ಪ್ರಕೃತಿಯ ಸೊಬಗಿನ ತಾಣ. ಹಲವು ಮನಮೋಹಕ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಿದ್ದು, ಇವುಗಳನ್ನು ಕಣ್ತುಂಬಿಕೊಳ್ಳಲು ಹೊರ ರಾಜ್ಯ, ಹೊರ ದೇಶಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ನಗರದೊಳಗೆ ಒಮ್ಮೆ ಹಾದು ಹೋದರೆ ಗುಂಡಿ ಬಿದ್ದು ಹದಗೆಟ್ಟ ರಸ್ತೆ, ಅಲ್ಲಲ್ಲಿ ಎಸೆದಿರುವ ತ್ಯಾಜ್ಯ ಕಂಡು ಅಪಹಾಸ್ಯ ಮಾಡಬಹುದು’ ಎಂದು ನಗರದ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ವರಸಿದ್ಧಿ ವೇಣುಗೋಪಾಲ್‌ ನಗರಸಭೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಗರದ ಪ್ರತಿ ವಾರ್ಡ್‌ಗಳಲ್ಲಿ ತಿಂಗಳಿಗೊಮ್ಮೆ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದರು. ಪೌರಕಾರ್ಮಿಕರ ಸಹಕಾರದೊಂದಿಗೆ ನಗರದ ಚರಂಡಿ, ರಾಜಕಾಲುವೆ, ನಗರಸಭೆ ಖಾಲಿ ನಿವೇಶನ ಸ್ವಚ್ಛತೆ ಹಾಗೂ ರಸ್ತೆ ಬದಿ ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಜಾಗೃತಿ ಮೂಡಿಸಿದ್ದರು. ಈಗ ಅನೈರ್ಮಲ್ಯದಿಂದ ಕೆಲವು ವಾರ್ಡ್‌ಗಳು ಮತ್ತೆ ಹಳೆಯ ಸ್ಥಿತಿಗೆ ತಲುಪಿವೆ ಎಂದು ಹೇಳುತ್ತಾರೆ.

ನಗರದ ವ್ಯಾಪ್ತಿಯಲ್ಲಿರುವ ಖಾಸಗಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮಾಲೀಕರ ಜವಾಬ್ದಾರಿ. ಈ ಸಂಬಂಧ ನಗರಸಭೆ ವತಿಯಿಂದ ಪ್ರಚಾರ ಕೈಗೊಂಡು ಜಾಗೃತಿ ಮೂಡಿಸಲಾಗಿದೆ. ಕಂದಾಯ ಮತ್ತು ಆರೋಗ್ಯ ನಿರೀಕ್ಷಕರು ವಾರ್ಡ್‌ಗಳಿಗೆ ಭೇಟಿ ನೀಡಿ ತಿಳಿವಳಿಕೆ ಮೂಡಿಸಿದ್ದಾರೆ. ನಗರದ ಕೆಲವೆಡೆ ಖಾಲಿ ನಿವೇಶನಗಳಿದ್ದು, ಗಿಡಗಂಟಿಗಳು ಬೆಳೆದು ತ್ಯಾಜ್ಯದ ಸ್ಥಳಗಳಾಗಿರುವುದು ಕಂಡು ಬಂದಿದೆ. ಅಂತಹ ಜಾಗದ ಮಾಲೀಕರಿಗೆ ನಗರಸಭೆ ವತಿಯಿಂದ ನೋಟಿಸ್ ಜಾರಿ ಮಾಡಲಾಗುವುದು. ನಿಗದಿತ ಗಡುವಿನೊಳಗೆ ಸ್ವಚ್ಛತೆ ಕೈಗೊಳ್ಳದಿದ್ದರೆ ಗರಿಷ್ಠ ₹25 ಸಾವಿರವರೆಗೂ ದಂಡ ವಿಧಿಸಿ ಖಾತೆಯನ್ನು ರದ್ದುಪಡಿಸುವುದಾಗಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಕೆಲವು ಬಡಾವಣೆಗಳಲ್ಲಿ ಖಾಸಗಿ ವ್ಯಕ್ತಿಗಳು ನಿವೇಶನ ಜಾಗ ಖರೀದಿಸಿ ವಿದೇಶ, ಹೊರ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಖರೀದಿ ಕುರಿತು ನಗರಸಭೆಯಲ್ಲಿ ಖಾತೆ ನೋಂದಣಿ ಆಗಿಲ್ಲ. ಇದರಿಂದ ನೈಜ ಮಾಲೀಕರು ಯಾರು ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಅಕ್ಕ–ಪಕ್ಕದ ನಿವಾಸಿಗಳಿಗೂ ಗೊಂದಲವಿದೆ. ಈ ಸಂಬಂಧ ವಿಶೇಷ ಅಭಿಯಾನ ನಡೆಸಲಾಗುವುದು ಎಂದರು.

ಖಾಲಿ ನಿವೇಶನಗಳಿಗೆ ತ್ಯಾಜ್ಯ ಸುರಿಯುವುದರಿಂದ ಹಂದಿ ಬೀದಿ ನಾಯಿಗಳ ಹಾವಳಿ ಸೊಳ್ಳೆ ಕಾಟ ಹೆಚ್ಚಿದೆ. ನಗರಸಭೆ ಕೂಡಲೇ ಎಚ್ಚೆತ್ತುಕೊಂಡು ಖಾಲಿ ನಿವೇಶನ ಸ್ವಚ್ಛತೆಗೆ ಕ್ರಮ ವಹಿಸಬೇಕು.
ಕೆ.ಟಿ.ರಾಧಾಕೃಷ್ಣ ಶಂಕರಪುರ ನಿವಾಸಿ
ಖಾಲಿ ನಿವೇಶನ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಲಸಾಗಿದೆ. ನಿರ್ಲಕ್ಷ್ಯ ವಹಿಸಿದ್ದಲ್ಲಿ ನಗರಸಭೆಯಿಂದಲೇ ಸ್ವಚ್ಛಗೊಳಿಸಿ ಜಾಗದ ಮಾಲೀಕರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು.
ಸಿ.ಆರ್. ತೇಜಸ್ವಿನಿ ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪರಿಸರ ವಿಭಾಗ
ಖಾಲಿ ಜಾಗಕ್ಕೆ ನಗರಸಭೆ ಫಲಕ ಅಭಿಯಾನ
ನಗರ ವ್ಯಾಪ್ತಿಯಲ್ಲಿರುವ ಸ್ವಚ್ಛಗೊಳ್ಳದ ಖಾಲಿ ನಿವೇಶನ ಜಾಗಕ್ಕೆ ನಗರಸಭೆಯಿಂದ ಫಲಕಗಳನ್ನು ಅಳವಡಿಸುವ ಅಭಿಯಾನಕ್ಕೆ ಸದ್ಯದಲ್ಲಿ ಚಾಲನೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು. ಗೌರಿಕಾಲುವೆ ರಾಮನಹಳ್ಳಿ ವಿಜಯಪುರ ಸೇರಿದಂತೆ ವಿವಿಧೆಡೆ ಖಾಲಿ ಜಾಗದಲ್ಲಿ ತ್ಯಾಜ್ಯಗಳನ್ನು ತಂದು ಸುರಿಯದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಗರಸಭೆ ವತಿಯಿಂದಲೂ ಕರಪತ್ರ ಆಟೊರಿಕ್ಷಾ ಮೂಲಕ ಪ್ರಚಾರ ನಡೆಸಲಾಗಿದೆ. ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಲೀಕರಿಗೆ ಮತ್ತೊಮ್ಮೆ ತಿಳಿವಳಿಕೆ ಮೂಡಿಸಲಾಗುವುದು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದರು. ನಗರವನ್ನು ಸಂಪೂರ್ಣ ಪ್ಲಾಸ್ಟಿಕ್‌ ಮತ್ತು ತ್ಯಾಜ್ಯ ಮುಕ್ತವಾಗಿಸಲು ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಆಗ ನಗರದ ಸೌಂದರ್ಯ ಕಾಪಾಡಲು ಸಾಧ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT