ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ: ಜಿಲ್ಲಾಧಿಕಾರಿ

ಪೂರ್ವ ಮುಂಗಾರು, ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ
Published 16 ಮೇ 2024, 14:33 IST
Last Updated 16 ಮೇ 2024, 14:33 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪೂರ್ವ ಮುಂಗಾರು ಆರಂಭವಾಗಿದ್ದು, ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಕೃಷಿ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಸಿದ್ಧತೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳು, ರೈತ ಪ್ರತಿನಿಧಿಗಳು ಹಾಗೂ ರಸಗೊಬ್ಬರಗಳ ಮಾರಾಟಗಾರರೊಂದಿಗೆ ಗುರುವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ಹೆಸರು, ಸೂರ್ಯಕಾಂತಿ, ನೆಲಗಡಲೆ, ಉದ್ದು, ಅಲಸಂದೆ ಸೇರಿ 98 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಏಪ್ರಿಲ್ ಹಾಗೂ ಮೇ ನಲ್ಲಿ ರಸಗೊಬ್ಬರ ಬೇಡಿಕೆ 35,073 ಮೆಟ್ರಿಕ್ ಟನ್‍ ಇತ್ತು. ಜಿಲ್ಲೆಯಲ್ಲಿ ಈಗಾಗಲೇ 41,151 ಮೆಟ್ರಿಕ್ ಟನ್‍ಗಳಷ್ಟು ರಸಗೊಬ್ಬರ ದಾಸ್ತಾನು ಇದೆ. ಬಿತ್ತನೆಗೆ ಬೇಕಾದ ಬೀಜಗಳು ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದೆ. ಯಾವುದೇ ಕೊರತೆ ಇಲ್ಲ ಎಂದು ಹೇಳಿದರು.

ರಸಗೊಬ್ಬರ ಚೀಲಗಳ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ರಸಗೊಬ್ಬರಗಳ ದಾಸ್ತಾನು ಹಾಗೂ ಮಾರಾಟ ದರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮೂಲಕ ರಸಗೊಬ್ಬರಗಳನ್ನು ಮಾರಾಟ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ರಸಗೊಬ್ಬರ ಮಾರಾಟಗಾರರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಮಟ್ಟದ ಸಗಟು ರಸಗೊಬ್ಬರ ಮಾರಾಟ ಪರವಾನಗಿ ಹೊಂದಿರುವವರು ಜಿಲ್ಲೆಗೆ ಹಂಚಿಕೆಯಾದ ರಸಗೊಬ್ಬರವನ್ನು ಹೊರ ಜಿಲ್ಲೆಗೆ ಮಾರಾಟ ಮಾಡಲು ಜಂಟಿ ಕೃಷಿ ನಿರ್ದೇಶಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ರಸಗೊಬ್ಬರ ಪ್ರಮಾಣ ಕನಿಷ್ಠ ಇರುವಾಗ ಮುಂಚಿತವಾಗಿ ಮಾಹಿತಿಯನ್ನು ಕೃಷಿ ಇಲಾಖೆ ಗಮನಕ್ಕೆ ತರಬೇಕು. ಡೀಲರ್ ವಾರು ರಸಗೊಬ್ಬರ ಸರಬರಾಜು ಮಾಡಿದ ತಕ್ಷಣ ಮಾರಾಟ ಕಂಪನಿ, ಸಗಟು ರಸಗೊಬ್ಬರ ಮಾರಾಟಗಾರರು, ಎಂಎಫ್‍ಎಂಎಸ್ ತಂತ್ರಾಂಶ, ಪಿಒಎಸ್ ಮೂಲಕ ದಾಸ್ತಾನು ನಮೂದಿಸುವುದು ಕಡ್ಡಾಯ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ. ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಗೆ ಸರಬರಾಜು ಆಗುವ ರಸಗೊಬ್ಬರಗಳ ಮಾಹಿತಿಯನ್ನು ಕೃಷಿ ಇಲಾಖೆಗೆ ತಪ್ಪದೇ ನೀಡಬೇಕು ಎಂದು ಸರಬರಾಜು ಕಂಪನಿಗಳ ಪ್ರತಿನಿಧಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿಗಳು, ಕೃಷಿ ಪರಿಕರ ಮಾರಾಟಗಾರರ ಸಂಘದ ಪ್ರತಿನಿಧಿಗಳು, ವಿವಿಧ ರಸಗೊಬ್ಬರಗಳ ಸರಬರಾಜು ಕಂಪನಿಯ ಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Cut-off box - ‘ಪ್ರಾತ್ಯಕ್ಷಿಕೆ ಮೂಲಕ ಪ್ರಚಾರ ಮಾಡಿ’ ರಸಗೊಬ್ಬರಗಳ ಜೊತೆಗೆ ಇತರೆ ಕೃಷಿ ಪರಿಕರಗಳನ್ನು ಜೋಡಿಸಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಎಫ್‍ಸಿಒ 1985ರನ್ವಯ ಕ್ರಮ ಜರುಗಿಸಲಾಗುವುದು. ರಸಗೊಬ್ಬರ ಕಂಪನಿಗಳಿಂದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಗಳನ್ನು ಡ್ರೋಣ್‌ ಮೂಲಕ ಸಿಂಪಡಣೆ ಮಾಡಿ ಪ್ರಾತ್ಯಕ್ಷಿಕೆ ಮೂಲಕ ಪ್ರಚಾರ ಕೈಗೊಳ್ಳುವಂತೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಸಗೊಬ್ಬರ ಸರಬರಾಜುದಾರರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT