ಭಾನುವಾರ, ಜುಲೈ 25, 2021
22 °C
ಪಟ್ಟಣ ಪಂಚಾಯಿತಿ ಜನಪ್ರತಿನಿಧಿಗಳ ಅಸಹಾಯಕತೆ

ಒಂದು ವರ್ಷ ಕಳೆದರೂ ದಕ್ಕದ ಅಧಿಕಾರ!

ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ವಾಸಿಸುವ ನಾಗರಿಕರಿಗೆ ಮೂಲಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳ ಆಡಳಿತ ನೋಡಿಕೊಳ್ಳಲು ಸ್ಥಾಪಿತವಾಗಿ ರುವ ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿಗೆ ಚುನಾವಣೆ ನಡೆದು ಮೇ 31ಕ್ಕೆ ಒಂದು ವರ್ಷ ಸಂದರೂ ಅಧಿಕಾರದ ಭಾಗ್ಯ ಇನ್ನೂ ಧಕ್ಕಿಲ್ಲ.

ಹಿಂದಿನ ಆಡಳಿತ ಮಂಡಳಿಯ ಅಧಿಕಾರ ಅವಧಿ ಮಾರ್ಚ್ 2019ಕ್ಕೆ ಪೂರ್ಣಗೊಂಡಿತ್ತು. ಹಾಗಾಗಿ, ಅದೇ ವರ್ಷ 29ರಂದು ಚುನಾವಣೆ ನಡೆಸಿ ಮೇ 31ಕ್ಕೆ ಫಲಿತಾಂಶ ಪ್ರಕಟಿಸಲಾಗಿತ್ತು. ಆದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಪ್ರಶ್ನಿಸಿ ನ್ಯಾಯಾಲ ಯದ ಮೇಟ್ಟಿಲೇರಿದ್ದರಿಂದ ಇಡೀ ರಾಜ್ಯದಲ್ಲಿಯೇ ಆಡಳಿತ ಮಂಡಳಿಯ ನೇಮಕಾತಿ ನನೆಗುದಿಗೆ ಬಿದ್ದಿತ್ತು.

ಕೆಲವು ತಿಂಗಳ ಹಿಂದೆ ಸರ್ಕಾರ ಮತ್ತೆ ಹೊಸದಾಗಿ ಮೀಸಲಾತಿಯ ಸಿದ್ಧಪಡಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿತು. ಇದನ್ನು ಸಹ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಇದು ಅದೂ ನನೆಗುದಿಗೆ ಬಿದ್ದಿತು. ಇದರ ಪರಿಣಾಮ ಜನರಿಂದ ಚುನಾಯಿತರಾಗಿದ್ದರೂ ಅಧಿಕಾರ ನಡೆಸುವ ಭಾಗ್ಯ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಸಿಕ್ಕಿಲ್ಲ.

ಹಿಂದೆ ಚುನಾವಣೆ ನಡೆದ ಕೂಡಲೇ ಆಡಳಿತ ಮಂಡಳಿ ನೇಮಕವಾಗುತ್ತಿತ್ತು. ಕಳೆದ ಎರಡು ಅವಧಿಯಿಂದ ಚುನಾವಣೆ ನಡೆದು ಹಲವು ತಿಂಗಳವರೆಗೆ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲು ವಿಳಂಬವಾಗುತ್ತಿದೆ. ಈ ರೀತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಳಂಬ ನೀತಿ ಅನುಸರಿಸುವುದರಿಂದ ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಮೊಟಕುಗಳಿಸಿದಂತಾಗುತ್ತದೆ. ಚುನಾ ವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸದಸ್ಯರಿಗೆ ವಿಳಂಬವಾಗುತ್ತದೆ. ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಬಿ.ರಘುವೀರ್.

‘ತಮ್ಮ ಅವಧಿಯಲ್ಲೂ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ರಿಂದ ಚುನಾವಣೆ ನಡೆದು 10 ತಿಂಗಳ ನಂತರ ಅಧಿಕಾರ ಲಭಿಸಿತ್ತು. ಈ ಬಾರಿ ಅದಕ್ಕಿಂತಲೂ ಅಧಿಕ ಅವಧಿಯಾದರೂ ಆಡಳಿತ ಮಂಡಳಿ ನೇಮಕವಾಗಿಲ್ಲ’ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಅಂಜುಮ್ ಹೇಳುತ್ತಾರೆ.

‘ಜನರು ಆಯ್ಕೆ ಮಾಡಿದ್ದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದು ಆಡಳಿತ ಮಂಡಳಿ ರಚನೆಯಾಗದಿ ರುವುದರಿಂದ ಜನರ ಸಮಸ್ಯೆಗಳಿಗೆ ಅಧಿಕಾರಯುತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸದಸ್ಯ ಪ್ರಶಾಂತ್ ಎಲ್.ಶೆಟ್ಟಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿ ಗಳಿಗೆ ಅಧಿಕಾರ ಒದಗಿಸಿ ಸರ್ಕಾರದ ಸವಲತ್ತುಗಳನ್ನು ಫಲಾನುಭವಿ ಗಳಿಗೆ ತಲುಪಿಸಲು ಅನುಕೂಲ ವಾಗುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲೇ ಮೀಸಲಾತಿ ನಿಗದಿ ಪಡಿಸಿ ನ್ಯಾಯಾಲ ಯಕ್ಕೆ ಸಲ್ಲಿಸಿ ಜನಪರ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.