ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಸವಾರರಿಗೆ ಮುಗಿಯದ ಗೋಳು

ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣ-–ಆಗಾಗ ಅನಾಹುತ
Last Updated 10 ಮೇ 2020, 16:37 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234 ರಲ್ಲಿನ ರಸ್ತೆ ವಿಸ್ತರಣೆ ಕಾಮಗಾರಿ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದರೂ ಪೂರ್ಣಗೊಳ್ಳದೇ ವಾಹನ ಸವಾರರು ನಿತ್ಯವೂ ಜೀವ ಬಗಿಹಿಡಿದು ಹೆದ್ದಾರಿಯಲ್ಲಿ ಸಾಗುವಂತಾಗಿದೆ.

ವಿಲ್ಲುಪುರಂನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ವಿಸ್ತರಣೆ ಕಾಮಗಾರಿ ನಡೆಸಲಾಗಿದ್ದು, ಒಂದೂವರೆ ವರ್ಷಗಳ ಹಿಂದೆ ಹ್ಯಾಂಡ್ ಪೋಸ್ಟಿನಿಂದ ಕೊಟ್ಟಿಗೆಹಾರದವರೆಗೂ ಸುಮಾರು 28 ಕಿರುಸೇತುವೆಗಳನ್ನು ನಿರ್ಮಿಸಿ ರಸ್ತೆ ವಿಸ್ತರಣೆಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಳೆದ ವರ್ಷ ಮಳೆಗಾಲ ಪ್ರಾರಂಭಕ್ಕೂ ಮುನ್ನ ಸೇತುವೆ ಕಾಮಗಾರಿಯನ್ನು ನಡೆಸಲಾಗಿತ್ತು. ಹಲವು ಕಡೆ ಕಿರುಸೇತುವೆ ನಿರ್ಮಾಣವು ಎರಡೂ ಬದಿಯಲ್ಲಿ ನಿರ್ಮಾಣವಾಗಿದ್ದರೆ, ಫಲ್ಗುಣಿ, ಬಣಕಲ್, ಕೊಟ್ಟಿಗೆಹಾರ ಮುಂತಾದ ಕಡೆಗಳಲ್ಲಿ ರಸ್ತೆಯ ಒಂದು ಬದಿಯಲ್ಲಿ ಕಿರು ಸೇತುವೆಯನ್ನು ನಿರ್ಮಿಸಿದ್ದು, ಮತ್ತೊಂದು ಬದಿಯಲ್ಲಿ ನಿರ್ಮಿಸುವ ವೇಳೆಗೆ ಮಳೆಗಾಲ ಪ್ರಾರಂಭವಾಗಿದ್ದರಿಂದ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಮಳೆಗಾಲ ಮುಗಿದು ಮತ್ತೆ ಈ ಬಾರಿಯ ಮಳೆಗಾಲ ಪ್ರಾರಂಭವಾಗುತ್ತಿದ್ದರೂ, ಕಾಮಗಾರಿಯನ್ನು ನಡೆಸದೇ ಅಪೂರ್ಣವಾಗಿಯೇ ಉಳಿದಿದೆ.

ತಾಲ್ಲೂಕಿನಿಂದ ಧರ್ಮಸ್ಥಳ, ಮಂಗಳೂರು, ಕಳಸ, ಹೊರನಾಡು, ಕುದುರೆಮುಖ ಮುಂತಾದ ಭಾಗಗಳಿಗೆ ಇದೇ ಹೆದ್ದಾರಿಯ ಮೂಲಕ ಸಾಗಬೇಕಿದ್ದು, ಹೆದ್ದಾರಿಯ ಹಲವೆಡೆ ಕಾಮಗಾರಿ ಅಪೂರ್ಣವಾಗಿ ಬಾಯ್ದೆರೆದಿರುವ ಗುಂಡಿಗಳು ವಾಹನ ಸವಾರರನ್ನು ಬಲಿ ಪಡೆಯಲು ಸಿದ್ಧವಾಗಿವೆ. ಕಳೆದ ಮಳೆಗಾಲದಲ್ಲಿಯೇ ಅನೇಕರು ಅಪೂರ್ಣವಾಗಿರುವ ಸೇತುವೆ ಬಳಿ ಅಪಘಾತಕ್ಕೀಡಾಗಿ ಕೈಕಾಲು ಕಳೆದುಕೊಂಡ ನಿದರ್ಶನಗಳಿವೆ. ಈ ಬಾರಿಯೂ ಕಾಮಗಾರಿ ಅಪೂರ್ಣವಾಗಿರುವುದರಿಂದ ಅಪಘಾತಗಳು ಕಟ್ಟಿಟ್ಟ ಬುತ್ತಿಯಾಗಿವೆ. ಕಾಮಗಾರಿ ಅಪೂರ್ಣವಾಗಿರುವ ಸ್ಥಳಗಳಲ್ಲಿ ಯಾವುದೇ ನಾಮಫಲಕ ಹಾಕದಿರುವುದರಿಂದ ಪದೇ ಪದೇ ಅನಾಹುತಗಳು ಸಂಭವಿಸುತ್ತಿವೆ.

‘ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳನ್ನು ಕೇಳಿದರೆ ಈಗ ಕೋವಿಡ್‌ ನೆಪ ನೀಡುತ್ತಿದ್ದಾರೆ. ಒಂದು ವರ್ಷಗಳ ಕಾಲಾವಕಾಶವಿದ್ದರೂ ಕಾಮಗಾರಿಯನ್ನು ನಡೆಸದೇ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತೆ ಮಾಡಿದ್ದರು. ಮಳೆಗಾಲದಲ್ಲಿ ಅಪೂರ್ಣವಾಗಿರುವ ಸೇತುವೆಗಳ ಬಳಿ ನೀರು ಸಂಗ್ರಹವಾಗಿ ಅನಾಹುತ ಸಂಭವಿಸುವ ಅಪಾಯವಿರುವುದರಿಂದ ಮಳೆಗಾಲದೊಳಗೆ ಅಪೂರ್ಣವಾಗಿರುವ ಸೇತುವೆ ಕಾಮಗಾರಿಗಳನ್ನಾದರೂ ಪೂರ್ಣಗೊಳಿಸಬೇಕು’ ಎನ್ನುತ್ತಾರೆ ಕೆ.ಆರ್.ಎಸ್ ಪಕ್ಷದ ಪದಾಧಿಕಾರಿ ಹಾಂದಿ ಲಕ್ಷ್ಮಣ್.

ಲಾಕ್‌ಡೌನ್ ಬಳಿಕ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುವುದರಿಂದ ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯ ದುರಸ್ತಿ ಅನಿವಾರ್ಯವಾಗಿದ್ದು, ಕಿರು ಸೇತುವೆಗಳ ಬಳಿ ಬಾಯ್ದೆರೆದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಬೇಕು ಎಂಬುದು ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT