ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತರೀಕೆರೆ: ಬತ್ತಿದ ಕೆರೆ, ಕುಸಿದ ಅಂತರ್ಜಲ

ನಾಗರಾಜ
Published : 26 ಮಾರ್ಚ್ 2024, 6:03 IST
Last Updated : 26 ಮಾರ್ಚ್ 2024, 6:03 IST
ಫಾಲೋ ಮಾಡಿ
Comments

ತರೀಕೆರೆ: ಮಲೆನಾಡಿನ ಹೆಬ್ಬಾಗಿಲು ಎಂದೇ ಹೆಸರಾಗಿರುವ ತರೀಕೆರೆ ಪಟ್ಟಣ, ನಾಲ್ಕು ದಿಕ್ಕುಗಳಿಂದಲೂ ಕೆರೆಗಳಿಂದ ಕೂಡಿದ್ದು, ಈ ಕೆರೆಗಳಿಂದಾಗಿಯೇ ‘ತರೀಕೆರೆ’ ಎಂಬ ಹೆಸರು ಪ್ರಚಲಿತಕ್ಕೆ ಬಂದಿದೆ. ಪೂರ್ವಕ್ಕೆ ಚಿಕ್ಕೆರೆ, ಪಶ್ಚಿಮಕ್ಕೆ ದಳವಾಯಿಕೆರೆ, ಉತ್ತರಕ್ಕೆ ದೊಡ್ಡಕೆರೆ ಹಾಗೂ ದಕ್ಷಿಣದಲ್ಲಿ ರಾಮನಾಯ್ಕನ ಕೆರೆಗಳಿವೆ. ಕೆರೆಗಳಿಂದ ಪಟ್ಟಣದ ಸುತ್ತಮುತ್ತ 5 ರಿಂದ 8 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಉದಾಹರಣೆ ಕಡಿಮೆ.

ಆದರೆ, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆ ಹಾಗೂ ಕೊಳವೆ ಬಾವಿ ಸಂಖ್ಯೆ ಏರುತ್ತಿರುವುದರಿಂದ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮಳೆಗಾಲದಲ್ಲಿ ನೀರು ಕಲ್ಲತ್ತಿಗಿರಿಯಿಂದ ವಿವಿಧ ಕಾಲುವೆ ಮತ್ತು ಕೆರಗಳು ತುಂಬಿದ ನಂತರ ರಾಮನಾಯ್ಕನ ಕೆರೆಗೆ ಹರಿದು ಬರುತ್ತದೆ. ಇದರಲ್ಲಿ ಎರಡು ಕೋಡಿಗಳಿದ್ದು, ಪೂರ್ವದಲ್ಲಿರುವ ಕೋಡಿಯಿಂದ ಚಿಕ್ಕರೆ ನಂತರ ದೊಡ್ಡಕೆರೆಗೆ ಹಾದು ಹೋಗುತ್ತದೆ. ಪಶ್ಚಿಮದ ಕೋಡಿಯಿಂದ ದಳವಾಯಿಕೆರೆಗೆ ನೀರು ಹರಿಯುತ್ತದೆ. ಸದ್ಯ ಬರಗಾಲ ಇರುವುದರಿಂದ ನೀರು ಬತ್ತಿ ಹೋಗಿದೆ. ಇದರಿಂದ ಪಟ್ಟಣದಲ್ಲಿರುವ  ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸಿದ್ದು, 4 ಕಿರು ನೀರು ಸರಬರಾಜು ಘಟಕಗಳ ಪೈಕಿ 2ಕ್ಕೆ ಮಾತ್ರ ನೀರು ತುಂಬುವಂತಹ ಪರಿಸ್ಥಿತಿ ಬಂದಿದೆ.

ಪಟ್ಟಣದಿಂದ 6 ಕಿ.ಮೀ. ದೂರವಿರುವ ದುಗ್ಲಾಪುರದ ಭದ್ರಾ ಬಲದಂಡೆ ನಾಲೆಯಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ.  ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿದ್ದು, 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಒಬ್ಬ ವ್ಯಕ್ತಿಗೆ ಪ್ರತಿದಿನ 135 ಲೀಟರ್‌ನಷ್ಟು  ನೀರು ಬೇಕಾದರೆ ಈ ಪಟ್ಟಣದ ಒಟ್ಟು ಜನಸಂಖ್ಯೆಗೆ 5.40 ಎಂಎಲ್‌ಡಿಯಷ್ಟು ನೀರು ಬೇಕಾಗುತ್ತದೆ. ಸದ್ಯ ಪುರಸಭಾ ವ್ಯಾಪ್ತಿಯ  60 ಕೊಳವೆ ಬಾವಿಗಳಿಂದ 233 ಕಿರು ನೀರು ಸರಬರಾಜು ಘಟಕಗಳ ಮೂಲಕ 2.18  ಎಂಎಲ್‌ಡಿ ಹಾಗೂ ಭದ್ರಾ ಬಲದಂಡೆ ನಾಲೆಯಿಂದ 3.22 ಎಂಎಲ್‌ಡಿ ನೀರನ್ನು 8 ಓವರ್‌ಹೆಡ್‌ ಟ್ಯಾಂಕ್‍ಗಳ ಮೂಲಕ ಜನರಿಗೆ ಪೂರೈಸಲಾಗುತ್ತಿದೆ. 

ನಾಲೆಯಲ್ಲಿ ನೀರು ನಿಲ್ಲಿಸಿದ ಸಂದರ್ಭದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸೀಪೇಜ್‍ ವಾಟರ್ ಜಲಾಶಯದಿಂದ ಬಿಡುತ್ತಾರೆ. ಆದರೆ ನಾಲೆಯ ಅಚ್ಚುಕಟ್ಟಿನ ಪ್ರದೇಶದಲ್ಲಿರುವ ರೈತರು ಈ ನೀರನ್ನು ತಡೆದು ನಿಲ್ಲಿಸಿ ಬಳಸುತ್ತಾರೆ. ಇದರಿಂದ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಪುರಸಭಾ ಸಿಬ್ಬಂದಿ ಇಂತಹ ಪ್ರಯತ್ನಗಳನ್ನು ತೆರವುಗೊಳಿಸಿ ಕುಡಿಯುವ ನೀರು ಪೂರೈಸಲು ಶ್ರಮಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ 60ಕ್ಕೂ ಹೆಚ್ಚು ಪಂಪ್‍ಸೆಟ್‍ಗಳನ್ನು ತೆರವುಗೊಳಿಸಲಾಗಿತ್ತು.

ನಾಲೆಯಲ್ಲಿ ಒಂದು ವೇಳೆ ನೀರಿನ ಹರಿವು ನಿಂತರೆ ದುಗ್ಲಾಪುರದ ನೀರು ಸರಬರಾಜು ಕೇಂದ್ರದ ಪಕ್ಕದಲ್ಲಿರುವ 22 ಎಕರೆ ವಿಸ್ತೀರ್ಣದ ಮಾನಸಿಕೆರೆಯಲ್ಲಿ ನೀರಿನ ಸಂಗ್ರಹವಿದೆ. ಅದರಿಂದ ಸುಮಾರು 25 ರಿಂದ 30 ದಿನಗಳವರೆಗೆ ಕುಡಿಯುವ ನೀರನ್ನು ಸರಬರಾಜು ಮಾಡಬಹುದು. ಇದು ಸಹ ನಿಂತರೆ ಭದ್ರಾ ಜಲಾಶಯದಿಂದ ಬೀರೂರು-ಕಡೂರು ನಗರಗಳಿಗೆ ಪೈಪ್‍ ಮೂಲಕ ಹಾದುಹೋಗಿರುವ ನೀರನ್ನು ಪಡೆದುಕೊಳ್ಳಲು ದುಗ್ಲಾಪುರ ಗೇಟ್‍ ಬಳಿ ವಾಲ್ವ್‌ ಅಳವಡಿಸಿ 6 ಇಂಚಿನ ಪೈಪ್‍ ಅಳವಡಿಸಲಾಗಿದೆ.

ಕೊಳವೆಬಾವಿ ನೀರೇ ಆಸರೆ

ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಹಳ್ಳಿ, ಉಪ್ಪಾರ ಬಸವನಹಳ್ಳಿ, ಹಳಿಯೂರು ಮತ್ತು ಗೋಣಿಕಟ್ಟೆ ಗ್ರಾಮಗಳು 1995ರಲ್ಲಿ ತರೀಕೆರೆ ಪುರಸಭಾ ವ್ಯಾಪ್ತಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿವೆ. ಇದಾಗಿ 3 ದಶಕಗಳು ಸಮೀಪಿಸಿದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರ ನಿರ್ಲಕ್ಷ್ಯದಿಂದ ಗಾಳಿಹಳ್ಳಿ ಹೊರತುಪಡಿಸಿ ಹಳಿಯೂರು, ಉಪ್ಪಾರ ಬಸವನಹಳ್ಳಿ ಹಾಗೂ ಗೋಣಿಕಟ್ಟೆ ಗ್ರಾಮದ ನಿವಾಸಿಗಳಿಗೆ ಕೊಳವೆಬಾವಿಗಳ ನೀರೇ ಜೀವಜಲವಾಗಿದೆ. ಭದ್ರಾ ನೀರಿನ ಕನಸು ಇದುವರೆಗೂ ನನಸಾಗಿಲ್ಲ. ಇದಕ್ಕೆ ಕೆಲವು ತಾಂತ್ರಿಕ ತೊಂದರೆಗಳಿದ್ದು ಅದನ್ನು ನಿವಾರಿಸುವ ಕೆಲಸ ಶೀಘ್ರವಾಗಿ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಸ್ವಚ್ಛಗೊಳಿಸಬೇಕು

ಕಿರು ನೀರು ಸರಬರಾಜು ಘಟಕಗಳಲ್ಲಿ ನಲ್ಲಿಯ ಟ್ಯಾಪ್‍ ಕಿತ್ತು ಹೋಗಿ ನೀರು ಪೋಲಾಗುತ್ತಿರುತ್ತದೆ. ಇವುಗಳನ್ನು ಸರಿಯಾಗಿ ಸ್ವಚ್ಚಗೊಳಿಸುವುದಿಲ್ಲ. ಇದರಿಂದ ರೋಗಗಳು ಹರಡುವ ಸಾಧ್ಯತೆ ಇದೆ. ಇದನ್ನು ಪ್ರಶ್ನಿಸಿದರೆ ಸಿಬ್ಬಂದಿ ನಮ್ಮ ವಿರುದ್ಧವೇ ಗಲಾಟೆ ಮಾಡಲು ಬರುತ್ತಾರೆ. ಇದನ್ನು ಸರಿಪಡಿಸಬೇಕು ಎಂದು ತರೀಕೆರೆಯ ರೇಣುಕಮ್ಮ ಒತ್ತಾಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT