ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ ಪರಿಹಾರಕ್ಕೆ ವಿಶೇಷ ಪ್ಯಾಕೇಜ್‌ಗೆ ಒತ್ತಾಯ

Last Updated 6 ಆಗಸ್ಟ್ 2013, 6:55 IST
ಅಕ್ಷರ ಗಾತ್ರ

ಕೊಪ್ಪ : ತಾಲ್ಲೂಕಿನಲ್ಲಿ ಅತಿವೃಷ್ಟಿ ಯಿಂದ ಅಪಾರ ಹಾನಿ ಸಂಭವಿಸಿದ್ದು, ತಾಲ್ಲೂಕನ್ನು ಅತಿವೃಷ್ಟಿ ಪೀಡಿತ ಪ್ರದೇಶ ವೆಂದು ಘೋಷಿಸಿ, ಸಂತ್ರಸ್ತರಿಗೆ ಪರಿ ಹಾರ ನೀಡಲು ವಿಶೇಷ ಪ್ಯಾಕೇಜ್ ಪ್ರಕಟಿಸುವಂತೆ ಸರ್ಕಾರಕ್ಕೆ ವರದಿ ನೀಡಿ ಒತ್ತಾಯಿಸಲು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ನಿರ್ಣಯ ಅಂಗೀಕರಿಸಿದೆ.

ಅಧ್ಯಕ್ಷೆ ಪದ್ಮಾವತಿ ರಮೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತಾಲ್ಲೂಕು ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯ ಎಚ್.ಡಿ. ಜಯಂತ್ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಸುರಿದಿರುವ ಮಳೆಯಿಂದ ಅಪಾರ ಹಾನಿಯಾಗಿದ್ದು, ಜೀವನಾಧಾರಿತ ಅಡಿಕೆ ಬೆಳೆ ಕೊಳೆರೋಗಕ್ಕೆ ತುತ್ತಾಗಿ ಬಹುತೇಕ ಫಸಲು ನಷ್ಟವಾಗಿದೆ. ರಸ್ತೆಗಳು ಕೊಚ್ಚಿ ಹೋಗಿದ್ದು, ವಿದ್ಯುತ್ ಅವ್ಯವಸ್ಥೆ ಉಂಟಾಗಿದೆ. ಭತ್ತದ ಕೃಷಿಗೂ ಹಾನಿ ಸಂಭವಿಸಿದ್ದು, ತಾಲ್ಲೂಕು ಆಡಳಿತ ಈ ಬಗ್ಗೆ ಸೂಕ್ತ ಸಮೀಕ್ಷೆ ನಡೆಸಿ ತಾಲ್ಲೂಕನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಫೋಷಿಸಲು ಮತ್ತು ಪರಿಹಾರದ ವಿಶೇಷ ಪ್ಯಾಕೇಜ್ ಪ್ರಕಟಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾ ಯಿಸಿದರು.

ತಹಶೀಲ್ದಾರ್ ಶ್ರಿಧರಮೂರ್ತಿ ಎಸ್. ಪಂಡಿತ್ ಮಾತನಾಡಿ, ಅತಿವೃಷ್ಟಿ ಕುರಿತು ಪ್ರತಿ ಶನಿವಾರ ಜಿ.ಪಂ. ಎಂಜಿನಿಯರಿಂಗ್ ವಿಭಾಗ, ಕಂದಾಯ, ಲೋಕೋಪಯೋಗಿ, ಅರಣ್ಯ, ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಪ್ರಮುಖ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ವರದಿ ಪಡೆದು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುತ್ತಿದೆ ಎಂದರು.

ಅತಿವೃಷ್ಟಿಯಿಂದ ತಾಲ್ಲೂಕಿನ ಹಲವು ಮನೆಗಳಿಗೆ ಹಾನಿ ಉಂಟಾಗಿದ್ದು, ಸ್ಥಳ ಪರಿಶೀಲನೆ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಗುಡ್ಡೆತೋಟ ಗ್ರಾ.ಪಂ. ವ್ಯಾಪ್ತಿಯ ಕೋಣೆಕೊಪ್ಪದಲ್ಲಿ 3 ಆಶ್ರಯ ಮನೆ ಕುಸಿದಿದ್ದು, ಅಲ್ಲಿ ವಾಸವಿದ್ದ ಕುಟುಂಬಗಳನ್ನು ಸ್ಥಳಾಂತರಿಸಿ ಪಂಚಾಯಿತಿ ಕಟ್ಟಡದಲ್ಲಿ ಆಶ್ರಯ ನೀಡಲಾಗಿದೆ ಎಂದರು. ತಾಲ್ಲೂಕಿನಲ್ಲಿ ಜೀತಪದ್ಧತಿ ಬಗ್ಗೆ ಸಮೀಕ್ಷೆ ನಡೆಸಿದ್ದು, ಯಾವುದೇ ಜೀತದಾಳುಗಳ ಇರುವಿಕೆ ಕಂಡುಬಂದಿಲ್ಲ ಎಂದರು.

ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ನಿರ್ವಹಣೆ ಸಮರ್ಪಕ ವಾಗಿಲ್ಲ ವೆಂದು ಸದಸ್ಯ ಪೂರ್ಣಚಂದ್ರ ಆಕ್ಷೇಪ ವೆತ್ತಿದರು. ರಸ್ತೆ ಬದಿ ಕೂಡಿಟ್ಟ ಟಿಂಬರ್ ತೆರವು ಹಾಗೂ ಚರಂಡಿ ನಿರ್ವಹಣೆ ಸರಿಯಿಲ್ಲದೆ ಮಳೆನೀರು ರಸ್ತೆಮೇಲೆ ಹರಿದು ಹಾನಿಯಾಗುತ್ತಿದ್ದು, ಕೂಡಲೇ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಯಿತು.

ಅರಣ್ಯ ಇಲಾಖೆಯ ಕಟ್ಟಿಗೆ ಡಿಪೋದಲ್ಲಿ ಸೌದೆ ಲಭ್ಯವಾಗದೆ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದು, ಶವ ಸುಡಲೂ ಕಟ್ಟಿಗೆಯಿಲ್ಲದ ಧಾರುಣ ಸ್ಥಿತಿ ಯಿದೆ ಎಂದು ಉಪಾಧ್ಯಕ್ಷ ಬೆಳಗೊಳ ರಮೇಶ್ ಸಭೆಯಲ್ಲಿ ಪ್ರಸ್ತಾಪಿಸಿದರು. ಕೂಡಲೇ ಸೌದೆ ದೊರೆಯಲು ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಭೆ ಸೂಚಿಸಿತು.

ತಾ.ಪಂ. ಸದಸ್ಯರಾದ ಸುಭದ್ರಮ್ಮ, ಸುಜಾತ, ಕಾರ್ಯನಿರ್ವಹಣಾಧಿಕಾರಿ ಜಿ.ಸಿ. ತಿಪ್ಪೇಶಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT