ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯ ಭರಾಟೆಯಲ್ಲಿ ನಶಿಸುತ್ತಿರುವ ಕುಂಬಾರಿಕೆ

Last Updated 12 ಮೇ 2013, 5:00 IST
ಅಕ್ಷರ ಗಾತ್ರ

ಜಗತ್ತು ಬದಲಾದಂತೆ ಮನುಷ್ಯನ ಬೇಡಿಕೆಗಳು ಆದ್ಯತೆಗಳು ಬದಲಾಗುತ್ತಿವೆ. ಇಂದು ಇರುವ ವಸ್ತು ನಾಳೆಗೆ ಹಳತು. ಇದು ಪ್ರಕೃತಿ ನಿಯಮ. ಒಂದು ಕಾಲದಲ್ಲಿ ಬದುಕಿನ ಭಾಗವಾಗಿದ್ದ ಕುಂಬಾರಿಕೆ ಇಂದು ವಿನಾಶದ ಅಂಚಿಗೆ ತಲುಪಿದೆ. ಮಣ್ಣಿನ ಮಡಿಕೆಯ ನೆನಪು ಇಂದಿನ ಮಕ್ಕಳೀಗೂ ಇಲ್ಲದ ಸ್ಥಿತಿ ಉದ್ಭವಿಸಿದೆ. ಮಡಿಕೆಯ ಜಾಗದಲ್ಲಿ ಸ್ಟೀಲ್, ಹಿತ್ತಾಳೆ, ಕಂಚು, ಅಲ್ಯೂಮಿನಿಯಂ ಪಾತ್ರೆಗಳು ಬೆಸೆದುಕೊಂಡಿದ್ದು ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆ ಮರೆಯಾಗುತ್ತಿದೆ.

ಆದರೂ, ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಕುಂಬಾರಿಕೆ ವೃತ್ತಿಯನ್ನು ಉಳಿಸಿಕೊಳ್ಳುವ ಯತ್ನ ಸಾಗಿದೆ. ಈ ನಿಟ್ಟಿನಲ್ಲಿ ಬಾಳೆಹೊನ್ನೂರಿನ `ಕುಂಬಾರಗಲ್ಲಿ'ಯಲ್ಲಿ ಇನ್ನೂ ಮರೆಯಾಗದೆ ಉಳಿದ ಮಡಿಕೆ ತಯಾರಿಕಾ ಸ್ಥಳಕ್ಕೆ ಈ  ಬಾರಿ ನಮ್ಮನ್ನು ಕರೆದೊಯ್ಯಿದಿದ್ದು ಛಾಯಾಗ್ರಾಹಕ ಎಲ್.ಪಿ.ಜಗದೀಶ್.

ಹೆಸರೇ ಹೇಳುವಂತೆ ಒಂದು ಕಾಲದಲ್ಲಿ ಇಲ್ಲಿ ಮೂರು ಕಡೆಗಳಲ್ಲಿ ಕುಂಬಾರಿಕೆ ನಡೆಯುತ್ತಿತ್ತು. ಅದರ ಪರಿಣಾಮ ಈ ಬೀದಿಗೆ ಕುಂಬಾರಗಲ್ಲಿ ಎಂದು ಹೆಸರು ಬಂದಿದೆ.

ಕಾಲ ಪಲ್ಲಟದ ಪರಿಣಾಮ ಇಬ್ಬರು ವೃತ್ತಿ ಬಾಂಧವರು ಬೇರೆ ಉದ್ಯೋಗ ಅರೆಸಿ ಹೋರ ನಡೆದಿದ್ದಾರೆ. ವೃತ್ತಿ ಪ್ರೀತಿಯ ಪರಿಣಾಮ ಕೃಷ್ಣಪ್ಪಮೂಲ್ಯ ದಂಪತಿ ಮಾತ್ರ ಇನ್ನೂ ಮಡಿಕೆ ತಯಾರಿಕೆಯಲ್ಲೇ ಸುಖ ಕಂಡುಕೊಂಡಿದ್ದಾರೆ.

ಸುಮಾರು 50-60 ವರ್ಷಗಳಿಂದ ಅದೇ ಹೆಂಚಿನ ಮಾಡು ಹೊಂದಿದ ಸ್ಥಳದಲ್ಲಿ ಮಡಿಕೆ ತಯಾರಿಕೆ ನಡೆಸುತ್ತಿರುವ ಇವರು, ಆಧುನಿಕತೆಯ ಭರಾಟಗೆ ನಲುಗಿದ್ದಾರೆ. ಸುಮಾರು 4 ಕಿಮೀ ದೂರದಿಂದ ಮಡಿಕೆ ತಯಾರಿಕೆಗೆ ಬೇಕಾದ ಜೇಡಿಮಣ್ಣನ್ನು ತರಲಾಗುತ್ತಿದೆ. ಹೀಗೆ ತಂದ ಮಣ್ಣನ್ನು ಪತಿ ಮತ್ತು ಪತ್ನಿ ಸೇರಿ ಚೆನ್ನಾಗಿ ಕುಟ್ಟಿ ಪುಡಿಮಾಡಿ ಜರಡಿ ಮಾಡಿದಾಗ ನಶ್ಯದಷ್ಟು ನುಣುಪಾಗುತ್ತದೆ. ಆ ವೇಳೆಗೆ ಮಣ್ಣಿನಲ್ಲಿದ್ದ ಕಲ್ಲು, ಕಸ ಕಡ್ಡಿ ಬೇರ್ಪಡೆಯಾಗಿ ಉತ್ತಮ ಮಣ್ಣುನ್ನು ಮಾತ್ರ ಮಡಿಕೆ ತಯಾರಿಕೆಗೆ ಬಳಸುತ್ತಾರೆ.

ಮಣ್ಣಿಗೆ ನೀರು ಹಾಕಿ ಕಲಿಸಿದಾಗ, ಅದು ಅಂಟು ಅಂಟಾದ ಗುಣ ಹೊಂದಿರುವುದು ಅಗತ್ಯ. ಅದನ್ನು ಚಕ್ರದ ಮೇಲಿಟ್ಟು ಬೇಕಾದ ಆಕಾರದ ಮಡಿಕೆಗಳನ್ನು ತಯಾರಿಸುತ್ತಾರೆ. ದಿನವೊಂದಕ್ಕೆ ಗರಿಷ್ಠ 25 ಮಡಿಕೆಗಳನ್ನು ತಯಾರಿಸಿ, ಸ್ಪಷ್ಟವಾದ ಆಕಾರ ನೀಡಲಾಗುತ್ತದೆ. ನಂತರ ಸುಮಾರು 12 ಗಂಟೆಗಳ ಕಾಲ ಬಿಸಲಿನಲ್ಲಿ ಒಣಗಿಸಿ ಒಳಭಾಗದಲ್ಲಿರುವ ಒಲೆಯ ಸುತ್ತ ಹಾಕಿ ಬೆಂಕಿ ಹಾಕಲಾಗುತ್ತದೆ. ಹೀಗೆ 12ರಿಂದ 18 ಗಂಟೆ ಕಾದ ಮೇಲೆ ಮಡಿಕೆಗಳು ಬಣ್ಣ ಬದಲಿಸಿ ಗಟ್ಟಿಮುಟ್ಟಾಗುತ್ತವೆ.

ಹಣತೆ, ಹೂಜಿ, ರೋಟ್ಟಿ ಕಾವಲಿ, ಅನ್ನ ಬಸಿಯುವ ಮಡಿಕೆ, ಹ್ಯಾಂಗಿಂಗ್ ಪಾಟ್, ಹೂವಿನಕುಂಡ, ಅಸ್ತ್ರಒಲೆ, ಕಾಣಿಕೆ ಡಬ್ಬ ಸೇರಿದಂತೆ ಸುಮಾರು 30ಕ್ಕೂ ಅಧಿಕ ರೀತಿಯ ಮಣ್ಣಿನ ಪಾತ್ರೆಗಳನ್ನು ಇವರು ತಯಾರಿಸುತ್ತಾರೆ.

`ಹೊಟ್ಟೆಪಾಡಿಗಾಗಿ ಕುಲಕಸುಬು ನಡೆಸುತ್ತಿದ್ದೇವೆ. ಲಾಭ ಅಂತೇನಿಲ್ಲ. ಭಾನುವಾರದ ಸಂತೆಯಲ್ಲಿ ಮಡಿಕೆಗಳನ್ನು ಮಾರಾಟ ಮಾಡ್ತೇವೆ. ಎನ್ನುತ್ತಾರೆ ಬಿ.ಕೆ.ಕೃಷ್ಣಪ್ಪ ಮೂಲ್ಯ. `ಇತ್ತೀಚಿನ ದಿನಗಳಲ್ಲಿ ಕುಂಬಾರಿಕೆಯ ಗುಡಿ ಕೈಗಾರಿಕೆ ನಶಿಸುತ್ತಿದ್ದರೂ ಇದೂವರೆಗೂ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಮಡಿಕೆ ಮಾಡೋ ಕುಲಕಸುಬು ನಮ್ಮ ಜೊತೆಯಲ್ಲೆ ಮರೆಯಾಗ್ತಿದೆ. ನಮ್ಮ ಮಕ್ಕಳು ಇದನ್ನು ಮಂದುವರೆಸುವ ಇರಾದೆ ಹೊಂದಿಲ್ಲ' ಎನ್ನುವುದು ಮೂಲ್ಯ ಅವರ ಪತ್ನಿ ರಾಧ ಅಳಲು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT