ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಷೇಧಿತ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಲಾಕ್’

ನಿತ್ಯವೂ ನಿಯಮ ಉಲ್ಲಂಘಿಸಿದ ದ್ವಿಚಕ್ರ, ಕಾರು, ಆಟೊಗಳನ್ನು ಲಾಕ್ ಮಾಡುತ್ತಿರುವ ಸಂಚಾರ ಪೊಲೀಸರು
Last Updated 16 ಡಿಸೆಂಬರ್ 2018, 12:51 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ವಾಹನ ನಿಲುಗಡೆ ನಿಷೇಧ’ (ನೋ ಪಾರ್ಕಿಂಗ್) ಎಂಬ ಫಲಕ ಇದ್ದರೂ ನಿಯಮ ಉಲ್ಲಂಘಿಸಿ ನಗರದ ವಿವಿಧೆಡೆ ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಕಾರಣ ಅಂತಹ ವಾಹನಗಳ ಮೇಲೆ ಸಂಚಾರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ...

ವಾಹನ ನಿಲುಗಡೆ ನಿಷೇಧ ಸ್ಥಳದಲ್ಲಿ ಎಂಟರಿಂದ ಹತ್ತು ದ್ವಿಚಕ್ರ ವಾಹನಗಳಿದ್ದರೆ ಒಟ್ಟಿಗೆ ಸರಪಳಿ ಹಾಕಲಾಗುತ್ತಿದೆ. ಜತೆಗೆ ಕಾರು, ಆಟೊಗಳಿಗೆ ಲಾಕ್ ಮಾಡಲು ಮುಂದಾಗುತ್ತಿದ್ದಾರೆ.

ಕೆಲಸ ನಿಮಿತ್ತ ನಿತ್ಯವೂ ಮುಖ್ಯ ರಸ್ತೆಗಳಿಗೆ ಬರುವಂಥ ಕೆಲ ಸವಾರರು ಮನಸೋ ಇಚ್ಛೆ ವಾಹನ ನಿಲ್ಲಿಸಲು ಮುಂದಾಗುತ್ತಿರುವುದು ಹಾಗೂ ರಸ್ತೆಗೆ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದು ಸಹ ಕಂಡು ಬರುತ್ತಿದೆ. ಈ ಮೂಲಕ ಸಂಚಾರ ನಿಯಮ ಸ್ಪಷ್ಟ ಉಲ್ಲಂಘನೆ ಆಗುತ್ತಿದ್ದು, ಕ್ರಮ ಅನಿವಾರ್ಯ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಕಾರು, ಆಟೊಗಳ ನಿಲುಗಡೆ ಸ್ಥಳದಲ್ಲಿ ದ್ವಿಚಕ್ರ ವಾಹನಗಳು ನಿಂತಿರುತ್ತವೆ. ಕೆಲವೊಮ್ಮೆ ಅವುಗಳಿಗೆ ಜಾಗವಿಲ್ಲದಂತಾಗಿ ರಸ್ತೆಯಲ್ಲೇ ನಿಲ್ಲಿಸುವ ದುಸ್ಸಾಹಸಕ್ಕೂ ಸವಾರರು ಹಿಂದೇಟು ಹಾಕುತ್ತಿಲ್ಲ. ಈ ಸಮಸ್ಯೆಗಳನ್ನು ನಿಯಂತ್ರಿಸಲು ಪೊಲೀಸರು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೂ ‘ಟೈಗರ್’ ವಾಹನದ ಸಹಕಾರವನ್ನು ಪ್ರಸ್ತುತ ದಿನಗಳಲ್ಲಿ ಹೆಚ್ಚಿನದಾಗಿಯೇ ಪಡೆಯುತ್ತಿದ್ದಾರೆ.

ಟ್ರಾಫಿಕ್ ಸಮಸ್ಯೆ ನಿಯಂತ್ರಣ ಕೇವಲ ಸಂಚಾರ ಪೊಲೀಸರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದರಲ್ಲಿ ಸವಾರರು, ಸಾರ್ವಜನಿಕರ ಪಾತ್ರವೂ ಇದೆ. ಆದ್ದರಿಂದ ಸಂಚಾರ ನಿಯಮ ತಪ್ಪದೇ ಪಾಲಿಸಿ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಪೊಲೀಸರೊಂದಿಗೆ ಸಹಕರಿಸಿ ಎಂಬುದಾಗಿ ಈಗಾಗಲೇ ಗಾಂಧಿ ವೃತ್ತದ ಮುಂಭಾಗದಲ್ಲಿ ಜಾಗೃತಿಯನ್ನೂ ಮೂಡಿಸಲಾಗಿತ್ತು.

‘ಪ್ರತಿಯೊಬ್ಬ ವಾಹನ ಸವಾರರು ಸ್ವಯಂ ಪ್ರೇರಿತರಾಗಿ ಸಂಚಾರ ನಿಯಮ ಪಾಲಿಸುವಂತಾಗಬೇಕು. ಈ ನಿಟ್ಟಿನಲ್ಲಿ ಧ್ವನಿವರ್ಧಕದ ಮೂಲಕವೂ ಅನೇಕ ಬಾರಿ ವಾಹನ ಸವಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ’ ಎನ್ನುತ್ತಾರೆ ಸಂಚಾರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ರೇವತಿ.

‘ಇಲ್ಲಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳಾಯಿತು. ಆಗಿನಿಂದಲೂ ನಿಯಮ ಪಾಲನೆಯಿಂದ ಎಲ್ಲರಿಗೂ ಅನುಕೂಲ ಎಂಬ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತ ಬಂದಿದ್ದೇನೆ. ಏಕಾಏಕಿ ದಂಡ ವಿಧಿಸುವುದು ಸೂಕ್ತವಲ್ಲ ಎನ್ನುವ ಕಾರಣಕ್ಕಾಗಿ ಸುಮ್ಮನಿದ್ದೇವು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಕಾರಣ ಕೊನೆಯದಾಗಿ ದಂಡ ವಿಧಿಸಲು ಕ್ರಮ ಕೈಗೊಂಡಿದ್ದೇವೆ’ ಎನ್ನುತ್ತಾರೆ ಅವರು.

‘ಮುಖ್ಯ ರಸ್ತೆಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಹೆಚ್ಚಿನದಾಗಿ ಅಳವಡಿಸಲು ಸಂಚಾರ ಪೊಲೀಸ್ ಠಾಣೆ ಕ್ರಮ ಕೈಗೊಳ್ಳುತ್ತಿದೆ. ಸವಾರರು ಬೈಕ್‌ ನಿಲುಗಡೆ ಮಾಡಿದಲ್ಲಿ ಮೊದಲು ಧ್ವನಿವರ್ಧಕದ ಮೂಲಕ ಮಾಲೀಕರನ್ನು ಎಚ್ಚರಿಸುತ್ತೇವೆ. ತಕ್ಷಣ ಸ್ಥಳಕ್ಕೆ ದಾವಿಸದೆ, ಸ್ಪಂದಿಸದೆ ಇದ್ದಲ್ಲಿ ಟೈಗರ್‌ ವಾಹನದಲ್ಲಿ ಎತ್ತಿಕೊಂಡು ಹೋಗಲಾಗುತ್ತದೆ. ಒಂದು ಬಾರಿ ‘ಬೈಕ್’ ಟೈಗರ್ ವಾಹನ ಹತ್ತಿದರೆ ದಂಡ ಕಟ್ಟಲೇಬೇಕು’ ಎನ್ನುತ್ತಾರೆ ಸಂಚಾರ ಠಾಣೆ ಪೊಲೀಸರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT