ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಹಾಕುವಂತೆ 2 ಲಕ್ಷ ವಿದ್ಯಾರ್ಥಿಗಳಿಂದ ಪತ್ರ ಚಳವಳಿ!

‘ಸ್ವೀಪ್’ ಸಮಿತಿಯಿಂದ ವಿನೂತನ ಕಾರ್ಯಕ್ರಮ, ಕಡ್ಡಾಯವಾಗಿ ಮತ ಚಲಾಯಿಸುವಂತೆ ಪೋಷಕರಿಗೆ ಪತ್ರ
ಅಕ್ಷರ ಗಾತ್ರ

ಹೊಳಲ್ಕೆರೆ: ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನದ ಜಾಗೃತಿ ಮೂಡಿಸುವ ಅಂಗವಾಗಿ ‘ವಿದ್ಯಾರ್ಥಿಗಳಿಂದ ಪತ್ರ ಚಳವಳಿ’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಅದರಂತೆ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳ ಸುಮಾರು 2 ಲಕ್ಷ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಕೋರಿ ಪತ್ರ ಬರೆದಿದ್ದಾರೆ.

ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಪತ್ರ ಚಳವಳಿ ನಡೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಸಲಾಗಿತ್ತು. ವಿದ್ಯಾರ್ಥಿಗಳು ಅಂಚೆ ಕಚೇರಿಯಲ್ಲಿ ‘ಪೋಸ್ಟ್ ಕಾರ್ಡ್’ ಖರೀದಿಸಿ ಮತದಾನ ಮಾಡುವಂತೆ ಮನವಿ ಮಾಡಿ ಪೋಷಕರಿಗೆ ಪತ್ರ ಬರೆದಿದ್ದಾರೆ.

‘ಪ್ರೀತಿಯ ತಂದೆ, ತಾಯಿ, ಪೋಷಕರೇ, ಭಾರತ ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಎಲ್ಲರೂ ಮತದಾನ ಮಾಡಿದರೆ ಮಾತ್ರ ನಮಗೆ ಬೇಕಾದ ನಾಯಕರನ್ನು ಆಯ್ಕೆ ಮಾಡಲು ಸಾಧ್ಯ. ಮತ ಚಲಾಯಿಸುವುದು ಎಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಸಮರ್ಥ ಅಭ್ಯರ್ಥಿಗೆ ಮತ ಹಾಕಿ’ ಎಂದು ಪತ್ರ ಬರೆದಿದ್ದಾರೆ.

‘ಮತದಾನ ಜಾಗೃತಿ ಬಗ್ಗೆ ಪತ್ರ ಚಳವಳಿ’ ನಡೆಸುತ್ತಿರುವುದು ಶೇಕಡಾವಾರು ಮತದಾನ ಹೆಚ್ಚಿಸುವ ಹೊಸ ತಂತ್ರ. ವಿದ್ಯಾರ್ಥಿಗಳು ಪೋಷಕರಿಗೆ ‘ಮತಗಟ್ಟೆಗೆ ಹೋಗಿ ಮತ ಚಲಾಯಿಸುವಂತೆ’ ಪತ್ರದ ಮೂಲಕ ಮನವೊಲಿಸುವುದು ಹೆಚ್ಚು ಪರಿಣಾಮ ಬೀರುತ್ತದೆ. ಅಂಚೆ ಇಲಾಖೆಯ ಮೂಲಕ ಪತ್ರ ಬರುವುದರಿಂದ ಮತ್ತಷ್ಟು ಪರಿಣಾಮಕಾರಿ ಆಗಿರುತ್ತದೆ. ಮಕ್ಕಳೇ ಪತ್ರ ಬರೆದಿರುವುದರಿಂದ ಪೋಷಕರು ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸುತ್ತಾರೆ’ ಎಂಬುದು ಬಿಇಒ ಜಗದೀಶ್ವರ ಅವರ ಅಭಿಪ್ರಾಯ.

‘ನಮ್ಮ ತಂದೆ ತಾಯಿ, ಅಜ್ಜ, ಅಜ್ಜಿ ಮುಗ್ದರು. ಚುನಾವಣೆ ಬಗ್ಗೆ ಅವರಿಗೆ ಹೆಚ್ಚು ಜ್ಞಾನವಿಲ್ಲ. ‘ಮತ ಹಾಕಿದರೆ ನಮಗೇನು ಸಿಗುತ್ತದೆ? ಯಾರಿಗೋ ಒಬ್ಬರಿಗೆ ಮತ ಹಾಕಿದರಾಯ್ತು’ ಎಂಬ ನೀರಸ ಮನೋಭಾವ ಅವರದು. ಕೆಲವೊಮ್ಮೆ ‘ಅನಾರೋಗ್ಯ, ಬಿಸಿಲು, ಬೇರೆ ಕೆಲಸ ಇದೆ’ ಎಂದು ಮತದಾನದಿಂದ ಹಿಂದೆ ಸರಿಯುವ ಸಂದರ್ಭವೂ ಬರುತ್ತದೆ. ಗ್ರಾಮದ ಹೆಚ್ಚು ಮನೆಗಳಲ್ಲಿ ಪೋಷಕರು ಬೆಂಗಳೂರು ಕಡೆ ಕೆಲಸಕ್ಕೆ ಹೋಗಿದ್ದಾರೆ. ಅವರು ಅಲ್ಲಿಂದ ಬಂದು ಮತ ಹಾಕಲು ಆಸಕ್ತಿ ತೊರಿಸುವುದಿಲ್ಲ. ಅವರು ‘ಮತ ಹಾಕಲು ಊರಿಗೆ ಹೋಗಲು ಬಸ್ ಚಾರ್ಜು, ಖರ್ಚಿಗೆ ಹಣ ಯಾರು ಕೊಡುತ್ತಾರೆ?’ ಎಂದು ಪ್ರಶ್ನಿಸುತ್ತಾರೆ. ಅವರಿಗೆ ಚುನಾವಣೆಯ ಮಹತ್ವದ ಬಗ್ಗೆ ಪತ್ರದಲ್ಲಿ ವಿವರಿಸಿದ್ದೇವೆ. ಪತ್ರ ಚಳವಳಿಯಿಂದ ನಮಗೂ ಚುನಾವಣೆಯ ಬಗ್ಗೆ ಹೆಚ್ಚು ವಿಷಯ ತಿಳಿದಂತಾಯಿತು’ ಎನ್ನುತ್ತಾರೆ ಉಗಣೇಕಟ್ಟೆ ವಡ್ಡರಹಟ್ಟಿ ಶಾಲೆಯ→ವಿದ್ಯಾರ್ಥಿನಿಯರಾದ ಅಂಜಲಿ, ನಯನಾ.

ಇದಲ್ಲದೆ ಮತದಾನ ಜಾಗೃತಿಗಾಗಿ ಮಾರ್ಚ್ 19ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ, ಮಾರ್ಚ್ 23ರಂದು ಗ್ರಾಮಗಳಲ್ಲಿ ಜಾಗೃತಿ ಜಾಥಾ, ಮಾರ್ಚ್ 30ರಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಂದ ಬೈಕ್ ರ್‍ಯಾಲಿ, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮತದಾನ ಜಾಗೃತಿಗಾಗಿ ಪತ್ರ ಬರೆದ ವಿದ್ಯಾರ್ಥಿಗಳು

ತಾಲ್ಲೂಕು→ಶಾಲೆಗಳ ಸಂಖ್ಯೆ→ವಿದ್ಯಾರ್ಥಿಗಳ ಸಂಖ್ಯೆ

ಚಳ್ಳಕೆರೆ 451→40→467

ಚಿತ್ರದುರ್ಗ→409→39→654

ಹಿರಿಯೂರು→373→27→588

ಹೊಳಲ್ಕೆರೆ→268→19→201

ಹೊಸದುರ್ಗ→362→23→732

ಮೊಳಕಾಲ್ಮುರು 167→20→843

ಒಟ್ಟು 2,030 1,71,485

*ಮತದಾನ ಮಾಡುವಂತೆ ತಮ್ಮ ಮಕ್ಕಳೇ ಪತ್ರ ಬರೆದಿರುವುದರಿಂದ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಮತದಾನದ ಸಂಖ್ಯೆ ಹೆಚ್ಚಲಿದೆ.
-ಜಗದೀಶ್ವರ, ಬಿಇಒ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT