ಭದ್ರಾ ಮೇಲ್ದಂಡೆಗೆ ಸಿಗಲಿದೆ ರಾಷ್ಟ್ರೀಯ ಮಾನ್ಯತೆ: ಸಚಿವ ನಾರಾಯಣಸ್ವಾಮಿ ವಿಶ್ವಾಸ

ಚಿತ್ರದುರ್ಗ: ಭದ್ರಾ ಮೇಲ್ದಂಡೆಯ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್) ಉಲ್ಲೇಖಿಸಿದಂತೆ ಕೇಂದ್ರ ಬಜೆಟ್‌ನಲ್ಲಿ ₹ 5,300 ಕೋಟಿ ಅನುದಾನ ಮೀಸಲಿಡಲಾಗಿದೆ. ಯೋಜನೆಗೆ ಶೀಘ್ರವೇ ರಾಷ್ಟ್ರೀಯ ಮಾನ್ಯತೆ ಸಿಗುವ ವಿಶ್ವಾಸವಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
‘ರಾಷ್ಟ್ರೀಯ ಯೋಜನೆ ಘೋಷಣೆಯಾಗುವ ನಿರೀಕ್ಷೆ ಇತ್ತು. ಎರಡು ತಿಂಗಳ ಹಿಂದೆಯೇ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ನಡೆದಿತ್ತು. ಆರ್ಥಿಕ ಇಲಾಖೆಯ ಅನುಮತಿಯೂ ಸಿಕ್ಕಿತ್ತು. ‘ರಾಷ್ಟ್ರೀಯ ಯೋಜನೆ’ ಪದ ಹೊರತುಪಡಿಸಿ ಯೋಜನೆಯ ಉಳಿದ ಎಲ್ಲವನ್ನೂ ಕೇಂದ್ರ ಸರ್ಕಾರ ಪರಿಗಣಿಸಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ರೈತರ ಜಮೀನಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವುದೂ ಸೇರಿ ಯೋಜನಾ ಗಾತ್ರ ₹ 21 ಸಾವಿರ ಕೋಟಿಗೆ ಹಿಗ್ಗಿದೆ. ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಇರುವಷ್ಟು ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ. ರಾಷ್ಟ್ರೀಯ ಯೋಜನೆಯ ಮಾನ್ಯತೆ ಸಿಕ್ಕರೆ ನಿರ್ವಹಣೆಯ ಹೊಣೆ ಕೂಡ ಕೇಂದ್ರದ ಹೆಗಲಿಗೆ ಬೀಳಲಿದೆ. ಈ ಬಗ್ಗೆ ಚರ್ಚಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲಾಗುವುದು’ ಎಂದು ವಿವರಿಸಿದರು.
‘ಭದ್ರಾ ಮೇಲ್ದಂಡೆ ಯೋಜನೆ ಈ ರೂಪ ಪಡೆಯಲು ಅನೇಕರು ಶ್ರಮಿಸಿದ್ದಾರೆ. ರೈತರು ನೂರಾರು ದಿನ ಧರಣಿ ನಡೆಸಿ ಸರ್ಕಾರದ ಗಮನ ಸೆಳೆದಿರುವುದರ ಫಲವಾಗಿ ಈ ಯೋಜನೆ ರೂಪುಗೊಂಡಿದೆ. ಯೋಜನೆಗೆ ಅಗತ್ಯ ಇರುವ ಅನುದಾನದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಶ್ರಮಿಸಿದ್ದಾರೆ. ಅನುದಾನ ಮೀಸಲಿಟ್ಟ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರ ಪರವಾಗಿ ಅಭಾರಿಯಾಗಿದ್ದೇನೆ’ ಎಂದರು.
‘ದೇಶದ ಅಭಿವೃದ್ಧಿಗೆ ಪೂರಕವಾದ ಬಜೆಟ್ ರೂಪಿಸಲಾಗಿದೆ. ರೈತರು, ಯುವ ಸಮೂಹ, ಬುಡಕಟ್ಟು ಸಮುದಾಯಕ್ಕೆ ಬಜೆಟ್ ಶಕ್ತಿ ತುಂಬಿದೆ. ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕುವ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹಲವು ದೇಶಗಳು ಭಾರತದತ್ತ ನೋಡುತ್ತಿವೆ. ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದು ಗಮನಾರ್ಹ ಸಾಧನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಭಾರತದ ಕಚ್ಚಾವಸ್ತು ಪಡೆದು ವಿದೇಶಿ ಕಂಪನಿಗಳು ಸರಕು ಉತ್ಪಾದನೆ ಮಾಡುತ್ತಿದ್ದವು. ಕೇಂದ್ರದ ಆರ್ಥಿಕ ನೀತಿಗಳ ಪರಿಣಾಮವಾಗಿ ಈ ಪರಿಸ್ಥಿತಿ ಬದಲಾಗಿದೆ. ವಿದೇಶದಿಂದ ಕಚ್ಚಾವಸ್ತುಗಳು ಭಾರತಕ್ಕೆ ಬರುತ್ತಿವೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿದೆ. ಇನ್ನು ಮುಂದೆ ದೇಶದಲ್ಲಿ ಗುಡಿಕೈಗಾರಿಕೆಗಳನ್ನು ಕಾಣಬಹುದಾಗಿದೆ’ ಎಂದು ಹೇಳಿದರು.
‘ಪರಿಶಿಷ್ಟ ಪಂಗಡದ ಏಳಿಗೆಗಾಗಿ 740 ಏಕಲವ್ಯ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. 38 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಹಸಿರು ನಿಶಾನೆ ಸಿಕ್ಕಿದೆ. ಏಕಲವ್ಯ ಶಾಲೆಯನ್ನು ಚಿತ್ರದುರ್ಗದಲ್ಲಿ ತೆರೆಯುವಂತೆ ಕೋರಿಕೆ ಸಲ್ಲಿಸಲಾಗಿದೆ. ಸಿರಿಧಾನ್ಯ ಸಂಸ್ಕರಣೆಯ ನಿಟ್ಟಿನಲ್ಲಿ ಇನ್ನಷ್ಟು ಸ್ಪಷ್ಟತೆಯ ಅಗತ್ಯವಿದ್ದು, ಕೇಂದ್ರ ಸರ್ಕಾರ ಖಂಡಿತ ನೆರವು ನೀಡುವ ವಿಶ್ವಾಸವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ನಗರದ ಹೊರಗೆ ವೈದ್ಯಕೀಯ ಕಾಲೇಜು’
ಭವಿಷ್ಯದ ದೃಷ್ಟಿಯಿಂದ ನಗರದ ಹೊರಭಾಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಪೇಕ್ಷೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
‘ನಗರದ ಒಳಗೆ ಕಾಲೇಜು ನಿರ್ಮಾಣವಾಗಬೇಕು ಎಂಬುದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಅಪೇಕ್ಷೆ. ಕಾಲೇಜು ವಾತಾವರಣ, ನಗರದ ಬೆಳವಣಿಗೆ ಹಾಗೂ ಭವಿಷ್ಯದ ದೃಷ್ಟಿಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಾಲೇಜು ನಿರ್ಮಿಸುವುದು ಸೂಕ್ತವಲ್ಲ. ಇಂಗಳದಾಳ್ ಗ್ರಾಮದ ಬಳಿ 95.35 ಎಕರೆ ಡೀಮ್ಡ್ ಅರಣ್ಯ ಭೂಮಿ ಲಭ್ಯ ಇದೆ. ಈ ಭೂಮಿಯನ್ನು ಕಾಲೇಜಿಗೆ ಮೀಸಲಿಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರ ಬಳಿ ಚರ್ಚೆ ನಡೆಸಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿ ಜಿಲ್ಲಾ ಘಕಟದ ಅಧ್ಯಕ್ಷ ಎ.ಮುರುಳಿ, ಜಿಲ್ಲಾ ಕಾರ್ಯದರ್ಶಿ ಮೋಹನ್, ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.