ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

36 ವರ್ಷಗಳ ಬಳಿಕ ಕೋಡಿ ಬಿದ್ದ ಶಿವಗಂಗಾ ಕೆರೆ

ತಾಲ್ಲೂಕಿನ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ, 1,702 ಎಕರೆ ವಿಸ್ತೀರ್ಣ
Last Updated 21 ಅಕ್ಟೋಬರ್ 2022, 5:54 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನಲ್ಲೇ ಅತಿ ದೊಡ್ಡ ಕೆರೆಯಾಗಿರುವ ಶಿವಗಂಗಾ ಕೆರೆಗೆ ಗುರುವಾರ ಕೋಡಿ ಬಿದ್ದಿದೆ.

1,702 ಎಕರೆಯಷ್ಟು ವಿಶಾಲ ವಿಸ್ತೀರ್ಣ ಹೊಂದಿರುವ ಈ ಕೆರೆ 1986ರಲ್ಲಿ ತುಂಬಿ ಕೋಡಿ ಬಿದ್ದಿತ್ತು. 2009ರಲ್ಲಿ ಕೆರೆ ತುಂಬಿತ್ತಾದರೂ ಕೋಡಿಯಲ್ಲಿ ನೀರು ಹರಿದಿರಲಿಲ್ಲ. ಈ ವರ್ಷದ ಮಳೆಯಿಂದ ಕೆರೆ ಕೋಡಿ ಬಿದ್ದಿದ್ದು, ರೈತರು ಹರ್ಷಗೊಂಡಿದ್ದಾರೆ. ತಾಳ್ಯ, ಟಿ.ಎಮ್ಮಿಗನೂರು ಕೆರೆಗಳ ಕೋಡಿಯಲ್ಲಿ ಹರಿದ ನೀರಿನಿಂದ ಶಿವಗಂಗಾ ಕೆರೆ ಕೋಡಿ ಬಿದ್ದಿದ್ದು, ಸುತ್ತಲಿನ ಗ್ರಾಮದ ಜನ ನೀರು ಹರಿಯುವುದನ್ನು ನೋಡಿ ಸಂಭ್ರಮಿಸಿದರು.

16ನೇ ಶತಮಾನದಲ್ಲಿ ಈ ಕೆರೆ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದು, ಶಿವಗಂಗಾ ಸೇರಿದಂತೆ ಕೊಂಡಾಪುರ, ಚಿತ್ರಹಳ್ಳಿ, ಕಾಶಿಪುರ, ಗೌರಿಪುರ, ಟಿ.ನುಲೇನೂರು, ತೊಡರನಾಳ್, ಮಹದೇವ ಪುರ ಸೇರಿದಂತೆ ಹತ್ತಾರು ಹಳ್ಳಿಗಳ 1,551 ಎಕರೆ ಅಚ್ಚಕಟ್ಟು ಪ್ರದೇಶ ಹೊಂದಿದೆ. ಕೆರೆಯು 256.65 ಮಿಲಿಯನ್ ಕ್ಯುಬಿಕ್ ಫಿಟ್‌ (¼ ಟಿಎಂಸಿ ಅಡಿ) ನೀರಿನ ಸಾಮರ್ಥ್ಯ ಹೊಂದಿದ್ದು, ಒಂದು ಕಿ.ಮೀ. ಉದ್ದದ ಏರಿ ಹೊಂದಿದೆ.

‘1977 ರಲ್ಲಿ ಕೆರೆ ತುಂಬಿದಾಗ ಮುಖ್ಯಮಂತ್ರಿ ದೇವರಾಜ ಅರಸು ಇಲ್ಲಿಗೆ ಬಂದಿದ್ದರು. ಕೆರೆ ಕೋಡಿಯಲ್ಲಿ ನೀರು ಹರಿಯುತ್ತಿರುವುದರಿಂದ ಮತ್ತೊಂದು ಭಾಗಕ್ಕೆ ಹೋಗಲಾಗುವುದಿಲ್ಲ ಎಂದು ಅವರ ಬಳಿ ಹೇಳಿದಾಗ ತಕ್ಷಣವೇ ಒಂದು ಸೇತುವೆ ಮಂಜೂರು ಮಾಡಿದ್ದರು. ಮತ್ತೆ 1986ರಲ್ಲಿ ಕೆರೆ ತುಂಬಿ ಕೋಡಿ ಬಿದ್ದಿತ್ತು. ಮತ್ತೆ ಈಗ ಕೋಡಿ ಬಿದ್ದಿದ್ದು ಗ್ರಾಮಸ್ಥರಿಗೆ ಖುಷಿ ತಂದಿದೆ’ ಎಂದು ಕೆರೆ ಅಚ್ಚಕಟ್ಟುದಾರರ ಸಮಿತಿಯ ಅಧ್ಯಕ್ಷ ಲೋಕೇಶ್ ಸಂತಸ ಹಂಚಿಕೊಂಡರು.

‘ಶಿವಗಂಗಾ ಕೆರೆಯ ಮಣ್ಣು ಅಡಿಕೆ ತೋಟಗಳಿಗೆ ಹೆಚ್ಚು ಫಲವತ್ತತೆ ಕೊಡುತ್ತದೆ. ಆದ್ದರಿಂದ ಕಳೆದ ಐದಾರು ವರ್ಷಗಳಿಂದ ತಾಲ್ಲೂಕಿನ ರೈತರಲ್ಲದೆ ಚನ್ನಗಿರಿ, ಹೊಳೆಹೊನ್ನೂರು ಭಾಗದ ಅಡಿಕೆ ಬೆಳೆಗಾರರು ಹೆಚ್ಚು ಮಣ್ಣು ಸಾಗಿಸಿದರು. ಇದರಿಂದ ಕೆರೆಯ ಆಳ ಹೆಚ್ಚಾಗಿದ್ದು, ಹಿಂದಿಗಿಂತಲೂ ಹೆಚ್ಚು ನೀರು ಸಂಗ್ರಹ ಆಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಪಿ.ಸತೀಶ್, ಎಂ.ಸಿ.ಸಿದ್ದೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT