ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ ತಾಲ್ಲೂಕಿನ ದುಗ್ಗಾವರ: ಲಕ್ಷ್ಮೀರಂಗನಾಥಸ್ವಾಮಿ ಅನ್ನದಕೋಟೆ ಸಂಭ್ರಮ

ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿ ಮೀಸಲು ಅಕ್ಕಿ ಸಮರ್ಪಿಸಿದ ಭಕ್ತರು
Last Updated 9 ಅಕ್ಟೋಬರ್ 2018, 13:27 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿ ದುಗ್ಗಾವರ ಗ್ರಾಮದ ಕೋಟೆಕಲ್ಲು ಲಕ್ಷ್ಮೀರಂಗನಾಥಸ್ವಾಮಿಯ ಅನ್ನದಕೋಟೆ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಭ್ರಮದಿಂದ ನೆರವೇರಿತು.

ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಗಂಗಾಪೂಜೆ, ಗಣಪತಿ ವಾಸ್ತು ಹಾಗೂ ನವಗ್ರಹ ಪೂಜೆ, ಅಭಿಷೇಕ, ಅಲಂಕಾರ ಪೂಜೆ, ಕುಂಕುಮಾರ್ಚನೆ, ಮಹಾಮಂಗಳಾರತಿ, ಧೂಪಸೇವೆ ಶ್ರದ್ಧಾಭಕ್ತಿಯಿಂದ ನೆರವೇರಿದವು.

800 ವರ್ಷಗಳ ಇತಿಹಾಸ ಇರುವ ಈ ಕ್ಷೇತ್ರದಲ್ಲಿ ಪ್ರತಿವರ್ಷ ಮಹಾಲಯ ಅಮಾವಾಸ್ಯೆಯಂದು ಕೋಟೆಕಲ್ಲು ಲಕ್ಷ್ಮೀರಂಗನಾಥಸ್ವಾಮಿಗೆ ಅನ್ನಶಾಂತಿ ಮಾಡುವಂತಹ ವಿಶಿಷ್ಟ ಧಾರ್ಮಿಕ ಆಚರಣೆ ನಡೆಯುತ್ತದೆ. ಸ್ವಾಮಿಯ ಪವಾಡದ ಬಗೆಗೆ ಅಪಾರ ನಂಬಿಕೆ ಇರುವ ದುಗ್ಗಾವರ ಸುತ್ತಮುತ್ತಲಿನ ದೊಡ್ಡಘಟ್ಟ, ಗೂಳಿಹಟ್ಟಿ, ಡಿ. ಮಲ್ಲಾಪುರ, ಬನ್ಸಿಹಳ್ಳಿ, ಕಂಠಾಪುರ, ಮನಸಿಂಗನಹಳ್ಳಿ, ಎನ್‌.ವಿ. ಹಟ್ಟಿ, ತಣೀಗೆಕಲ್ಲು, ಎಸ್‌. ರೊಪ್ಪ, ಎಚ್‌. ರೊಪ್ಪ ಸೇರಿ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅನ್ನದಕೋಟೆ ವಿಶೇಷ:

ಭಕ್ತರು ತಮ್ಮ ಶಕ್ತ್ಯಾನುಸಾರ ಅಕ್ಕಿಯನ್ನು ದೇವರಿಗೆ ಮೀಸಲು ಹಾಕುತ್ತಾರೆ. ಭಕ್ತರು ನೀಡಿದ ಮೀಸಲು ಅಕ್ಕಿಯಲ್ಲಿ ಸುಮಾರು 10 ಕ್ವಿಂಟಲ್‌ ಅಕ್ಕಿಯ ಅನ್ನವನ್ನು ದೇವಸ್ಥಾನ ಸನ್ನಿಧಿಯಲ್ಲಿ ದೇವರು ನೇಮಿಸಿದ ವ್ಯಕ್ತಿಗಳು ತಯಾರಿಸುತ್ತಾರೆ. ನಂತರ ಅಷ್ಟೂ ಅನ್ನವನ್ನು ಪುರೋಹಿತರ ನೇತೃತ್ವದಲ್ಲಿ ಅನ್ನದಕೋಟೆ ಕಟ್ಟಲಾಯಿತು.

ನಂತರ ಅದಕ್ಕೆ ಬೆಲ್ಲ, ಹಾಲು, ಮೊಸರು, ತುಪ್ಪ, ಬಾಳೆಹಣ್ಣು, ಎಳ್ಳು, ಚಿಗಳಿ, ತಂಬಿಟ್ಟು, ಕಲ್ಲು ಸಕ್ಕರೆ, ಉತ್ತುತ್ತೆ ಹಾಗೂ ಶೇಂಗಾ ಪುಡಿ ಹಾಕಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅಲಂಕೃತ ದೇವರ ಮೂರ್ತಿಯನ್ನು ಮೂರು ಸುತ್ತು ಅನ್ನದ ಕೋಟೆ ಸುತ್ತ ಸುತ್ತಿಸಲಾಗುತ್ತದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅನ್ನಸಂತರ್ಪಣೆ ಮಾಡಲಾಯಿತು.

‘ಪ್ರತಿವರ್ಷ ಅನ್ನದಕೋಟೆ ಮಹೋತ್ಸವ ಮಾಡುವುದರಿಂದ ಜನ ಹಾಗೂ ಜಾನುವಾರುಗಳಿಗೆ ರೋಗರುಜಿನ ಬರುವುದಿಲ್ಲ. ಮಳೆ–ಬೆಳೆ ಚೆನ್ನಾಗಿ ಆಗುತ್ತದೆ’ ಎಂಬ ನಂಬಿಕೆ ಇಲ್ಲಿನ ಭಕ್ತರಿಗಿದೆ ಎನ್ನುತ್ತಾರೆ ಪುರೋಹಿತರು.

ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ಫೀಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ್‌, ತಾಲ್ಲೂಕು ಪಂಚಾಯ್ತಿ ಸದಸ್ಯೆ ಶಶಿಕಲಾ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ಪರಮೇಶ್ವರಪ್ಪ, ಸುವರ್ಣಮ್ಮ, ದೇವಸ್ಥಾನ ಸಮಿತಿ ಗೌಡರಾದ ಕೆ.ಪಿ.ಮಂಜುನಾಥ್‌, ರಂಗಸ್ವಾಮಿ, ಪ್ರಸನ್ನಕುಮಾರ್‌, ಗೋವಿಂದಪ್ಪ, ಪರಮೇಶ್ವರಪ್ಪ, ಮಂಜುನಾಥ್‌, ಕುಮಾರ್‌, ಸದಾಶಿವಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT