ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯಿಂದ ಜನವಿರೋಧಿ ನೀತಿ: ವಿ.ಎಸ್. ಉಗ್ರಪ್ಪ

ಕಾಂಗ್ರೆಸ್ ಜನಾಂದೋಲನದಲ್ಲಿ ಮುಖಂಡ ವಿ.ಎಸ್. ಉಗ್ರಪ್ಪ ಆರೋಪ
Last Updated 26 ಜುಲೈ 2021, 3:31 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಜನ ವಿರೋಧಿ ನಿಲುವುಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಸ್ವಾತಂತ್ರ್ಯಾನಂತರ ದೇಶ ಕಂಡ ಆಧುನಿಕ ಭಸ್ಮಾಸುರನಾಗಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್. ಉಗ್ರಪ್ಪ ಆರೋಪಿಸಿದರು.

ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಾಂದೋಲನದಲ್ಲಿ ಅವರು ಮಾತನಾಡಿದರು.

ಚುನಾವಣಾ ಪೂರ್ವದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಯುವಸಮೂಹಕ್ಕೆ ಸುಳ್ಳು ಭರವಸೆ ನೀಡಿದ್ದರು. ಇದರಂತೆ ನಡೆದಿದ್ದಲ್ಲಿ ಏಳುವರ್ಷಗಳಲ್ಲಿ ಕೇಂದ್ರ ಸರ್ಕಾರ 14 ಕೋಟಿ ಮಂದಿಗೆ ಉದ್ಯೋಗ ನೀಡಬೇಕಿತ್ತು. ಆದರೆ, ಅದರ ಬದಲಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರೈತರನ್ನು ತುಚ್ಛವಾಗಿ ಕಾಣಲಾಗುತ್ತಿದೆ. ಇಂಧನ ದರ ಏರಿಕೆಯಿಂದ ರೈತರು ಬೆಳೆ ಬೆಳೆಯುವುದು ಇರಲಿ ಕೊನೆಪಕ್ಷ ಹೊಲ ಉಳುಮೆ ಮಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಎಂದು ದೂರಿದರು.

ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ‘ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಇದ್ದ ಇಂಧನ ದರಗಳು ದುಪ್ಪಟ್ಟಾಗಿವೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಕುಸಿದಿದೆ. ಇದರಿಂದ ಹೆಚ್ಚುವರಿ ಇಂಧನ ದರದ ಹಣ ಎಲ್ಲಿಗೆ ಹೋಗುತ್ತಿದೆ ಮತ್ತು ಏಕೆ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಡಾ.ಬಿ. ಯೋಗೇಶ್ ಬಾಬು, ‘₹ 224 ಕೋಟಿ ವೆಚ್ಚದ ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಜೂರುಮಾಡಲಾಗಿತ್ತು. ಕೆರೆ ತುಂಬಿಸುವ ಯೋಜನೆಯನ್ನು ಸಹ ಕಾಂಗ್ರೆಸ್ಸರ್ಕಾರ ಮಾಡಿದೆ. ಆದರೆ, ಸಚಿವಬಿ. ಶ್ರೀರಾಮುಲು ತಮ್ಮ ಸಾಧನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳು ಸ್ವಾತಂತ್ರ್ಯವಿಲ್ಲದೇ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ಪಿ.ಟಿ. ಹಟ್ಟಿಯಿಂದ ಬಸ್‌ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್‌ವೀಕ್ಷಕ ಆಡಿಟರ್ ನಾಗರಾಜ್, ಜಿಲ್ಲಾಧ್ಯಕ್ಷ ತಾಜ್‌ಪೀರ್, ಕಾರ್ಯದರ್ಶಿ ಸಂಪತ್ ಕುಮಾರ್, ರಾಜ್ಯ ಕಾರ್ಯದರ್ಶಿ ಕೆ. ಜಯಲಕ್ಷ್ಮಿ, ವಿ. ಮಾರನಾಯಕ, ಬ್ಲಾಕ್ಅಧ್ಯಕ್ಷರಾದ ಪಟೇಲ್ ಪಾಪನಾಯಕ, ನಾಗೇಶ್ ರೆಡ್ಡಿ, ಪಿ.ಎನ್. ಶ್ರೀನಿವಾಸುಲು, ಎಂ.ಡಿ. ಮಂಜುನಾಥ್, ರಾಂಪುರ ವಿಜಯಕುಮಾರ್,ಆರ್.ಎಂ. ಅಶೋಕ್, ಡಾ. ದಾದಾಪೀರ್, ಕೋನಸಾಗರ ಜಗದೀಶ್, ಅನ್ವರ್ ಬಾಷಾ, ಭಕ್ತಪ್ರಹ್ಲಾದ್, ಖಲೀಂವುಲ್ಲಾ, ಅಬ್ದುಲ್ಲಾ, ಎಸ್. ಖಾದರ್, ಮೊಗಲಹಳ್ಳಿ ಜಯಣ್ಣ, ನಾಗರಾಜ ಕಟ್ಟೆಇದ್ದರು.

ಕೊರೊನಾ ಮಾರ್ಗಸೂಚಿ ಮಾಯ: ಪ್ರತಿಭಟನೆಯಲ್ಲಿ ಕೋವಿಡ್ ಮಾರ್ಗಸೂಚಿಗಳು ಮಾಯವಾಗಿದ್ದವು. ಜಾಥಾ ಆರಂಭದಿಂದ ಅಂತ್ಯದವರೆಗೆ ಬಹುತೇಕ ಕಾರ್ಯಕರ್ತರು, ಮುಖಂಡರು ಮಾಸ್ಕ್ ಹಾಕಿಕೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT