ಮಂಗಳವಾರ, ಮೇ 24, 2022
31 °C
ಅಧಿಕಾರಿಗಳಿಗೆ ಶಾಸಕ ಎಂ.ಚಂದ್ರಪ್ಪ ಸೂಚನೆ

ಚಿತ್ರದುರ್ಗ | ಬಗರ್‌ಹುಕುಂ ಅರ್ಜಿ: 27ರೊಳಗೆ ನಕ್ಷೆ ತಯಾರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಅಧಿಕಾರಿಗಳು ಸರ್ಕಾರದ ನಿಯಮಗಳ ನೆಪ ಒಡ್ಡಿ ಅರ್ಜಿ ತಿರಸ್ಕರಿಸುವುದರಿಂದ ಬಡವರು ಜಮೀನು ಪಡೆಯುವುದರಿಂದ ವಂಚಿತರಾಗುತ್ತಾರೆ. ಭೂರಹಿತ ಬಡವರಿಗೆ ಸರ್ಕಾರಿ ಜಮೀನು ಸಿಗಬೇಕು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಪಟ್ಟಣದ ಮೈರಾಡ ಸಭಾಂಗಣದಲ್ಲಿ ಸೋಮವಾರ ನಡೆದ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿದರು.

ಸರ್ವೆ, ಸ್ಕೆಚ್ ನಿಧಾನ ಮಾಡುವುದರಿಂದ ಭೂಮಿ ಮಂಜೂರು ಮಾಡಲು ಆಗುತ್ತಿಲ್ಲ. ಇದರಿಂದ ಅರ್ಹ ರೈತರು ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ಇದೆ. ತಾಳ್ಯ ಹೋಬಳಿಯ ಅರ್ಜಿಗಳು ಮಾತ್ರ ವಿಲೇವಾರಿ ಆಗಿದ್ದು, ಉಳಿದ ಕಸಬಾ, ಬಿ.ದುರ್ಗ, ರಾಮಗಿರಿ ಹೋಬಳಿಗಳಲ್ಲಿ ಅರ್ಜಿ ಸಲ್ಲಿಸಿರುವ ಜಮೀನುಗಳ ನಕ್ಷೆ ತಯಾರಿಸಿ ಮೇ 27ರ ಒಳಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಕೆಲವು ಗ್ರಾಮ ಲೆಕ್ಕಾಧಿಕಾರಿಗೆ ಸರ್ಕಾರಿ ಜಮೀನುಗಳ ಸರ್ವೆ ನಂಬರ್‌ಗಳೇ ಗೊತ್ತಿರುವುದಿಲ್ಲ. ಅಸಡ್ಡೆ ತೋರುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಿ’ ಎಂದು ಉಪ ವಿಭಾಗಾಧಿಕಾರಿ ಚಂದ್ರಪ್ಪ ಅವರಿಗೆ ತಾಕೀತು ಮಾಡಿದರು.

‘ಗಿರಿಜನ ವಾಸಿಗಳಿಗೆ ಜಮೀನು ಮಂಜೂರು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುತ್ತಾರೆ. ರೈತರಿಗೆ ಅಡ್ಡಗಾಲು ಹಾಕಿದರೆ ಸುಮ್ಮನಿರುವುದಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ಅವರಿಗೆ ಎಚ್ಚರಿಸಿದರು.

‘ತಣಿಗೆ ಹಳ್ಳಿ, ಮದಕರಿ ಪುರ ಗ್ರಾಮಗಳಲ್ಲಿ ಲಂಬಾಣಿ, ನಾಯಕ ಜನಾಂಗದ ಕಡುಬಡವರೇ ಇದ್ದು, ಭೂಮಿ ಹಂಚಿಕೆ ಆಗಬೇಕು. ಈಗ ಜಾನುವಾರು ಸಂಖ್ಯೆ ಕಡಿಮೆ ಆಗಿದೆ. ಗೋಮಾಳದಲ್ಲಿ ಜಾನುವಾರು ಮೇಯಿಸುವವರು ಯಾರೂ ಇಲ್ಲ. ಸರ್ಕಾರಿ ಜಮೀನು ಕಡಿಮೆ ಇರುವ ಕಡೆ ಆದ್ಯತೆಯ ಮೇರೆಗೆ ಜಮೀನು ಹಂಚಿಕೆ ಮಾಡಬೇಕು. ಗ್ರಾಮಗಳಿಗೆ ಹೊಂದಿಕೊಂಡಿರುವ ಸರ್ಕಾರಿ ಜಮೀನನ್ನು ಜನರಿಗೆ ಹಂಚಿಕೆ ಮಾಡಬಾರದು. ಈ ಜಾಗವನ್ನು ಭವಿಷ್ಯದಲ್ಲಿ ಶಾಲೆ, ಕಾಲೇಜು, ಸರ್ಕಾರಿ ಕಟ್ಟಡಗಳನ್ನು ಕಟ್ಟಲು ಮೀಸಲಿಡಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ನಿವೇಶನ, ಮನೆ ನಿರ್ಮಿಸಲು ಇಂತಹ ಜಾಗ ಬೇಕಾಗುತ್ತದೆ’ ಎಂದರು.

ತಾಳ್ಯ ಹೋಬಳಿಯ ಗಟ್ಟಿಹೊಸಹಳ್ಳಿ, ಮದ್ದೇರು, ಕುಮ್ಮಿನ ಘಟ್ಟ, ಹುಣಸೆ ಪಂಚೆ, ಮಲಸಿಂಗನ ಹಳ್ಳಿ, ಪಾಪೇನಹಳ್ಳಿ, ಮಹದೇವಪುರ ಗ್ರಾಮಗಳ 175 ಅಕ್ರಮ-ಸಕ್ರಮೀಕರಣ ಅರ್ಜಿಗಳನ್ನು ಸಮಿತಿ ಮುಂದೆ ಮಂಡಿಸಲಾಯಿತು.

ಉಪವಿಭಾಗಾಧಿಕಾರಿ ಚಂದ್ರಪ್ಪ, ತಹಶೀಲ್ದಾರ್ ರಮೇಶಾಚಾರಿ, ಚಿತ್ರದುರ್ಗ ತಹಶೀಲ್ದಾರ್ ಸತ್ಯ ನಾರಾಯಣ, ಬಗರ್‌ಹುಕುಂ ಸಮಿತಿ ಸದಸ್ಯರಾದ ದಗ್ಗೆ ಶಿವಪ್ರಕಾಶ್, ಕೃಷ್ಣಮೂರ್ತಿ, ಹಾಲಮ್ಮ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.