ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ನಷ್ಟದ ಸುಳಿಗೆ ಮದ್ಯದ ಉದ್ಯಮ

ಬಾರ್‌ ಅಂಡ್‌ ರೆಸ್ಟೊರೆಂಟ್‌ ಮೇಲಿನ ನಿರ್ಬಂಧಕ್ಕೆ ಮಾಲೀಕರ ಅಸಮಾಧಾನ
Last Updated 26 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳಲ್ಲಿ ಕುಳಿತು ಆಹಾರ ಸಹಿತ ಮದ್ಯ ಸೇವನೆಗೆ ಸರ್ಕಾರ ಇನ್ನೂ ಅವಕಾಶ ನೀಡದಿರುವುದು ಉದ್ಯಮವನ್ನು ನಷ್ಟಕ್ಕೆ ಸಿಲುಕಿಸಿದೆ. ನಿರ್ವಹಣಾ ವೆಚ್ಚ ಭರಿಸಲು ಸಾಧ್ಯವಾಗದೇ ಬಹುತೇಕವು ಎಂಆರ್‌ಪಿ ಅಂಗಡಿಗಳಾಗಿ ಪರಿವರ್ತನೆಯಾಗಿವೆ.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದ ಪರಿಣಾಮ ಈ ಸಂಕಷ್ಟ ಎದುರಾಗಿದೆ. ಕೆಲವು ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳು ಮಾರ್ಚ್‌ 25ರಿಂದ ನಿರಂತರವಾಗಿ ಬಾಗಿಲು ಮುಚ್ಚಿವೆ. ಬದಲಾದ ನಿಯಮಾವಳಿಯಲ್ಲಿ ಹಲವು ಉದ್ಯಮಗಳಿಗೆ ಅವಕಾಶ ಸಿಕ್ಕರೂ ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳನ್ನು ಪೂರ್ಣಪ್ರಮಾಣದಲ್ಲಿ ತೆರೆಯಲು ಅನುಮತಿ ಸಿಕ್ಕಿಲ್ಲ.

ಬಾರ್‌ ಅಂಡ್‌ ರೆಸ್ಟೂರೆಂಟ್‌ (ಸಿಎಲ್‌–9), ಎಂಆರ್‌ಪಿ (ಸಿಎಲ್‌–2), ಕ್ಲಬ್‌ (ಸಿಎಲ್‌–4), ಪ್ರವಾಸೋದ್ಯಮ ಇಲಾಖೆ ಮಾನ್ಯತೆ ಪಡೆದ ಹೋಟೆಲ್‌ (ಸಿಎಲ್‌–7), ಎಂಎಸ್‌ಐಎಲ್‌ (ಸಿಎಲ್‌–11ಸಿ) ಸೇರಿ ಜಿಲ್ಲೆಯಲ್ಲಿ 230 ಮದ್ಯದಂಗಡಿ ಇವೆ. ಈ ಪೈಕಿ ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳಿಗೆ ವಿಧಿಸಿದ ನಿರ್ಬಂಧ ಮಾತ್ರ ತೆರವಾಗಿಲ್ಲ. ಆಹಾರ ಸೇವನೆಗೆ ಹಾಗೂ ಮದ್ಯ ಮಾರಾಟಕ್ಕೆ ಮಾತ್ರ ಅವಕಾಶ ಸಿಕ್ಕಿದೆ. ಆದರೆ ಆಹಾರದೊಂದಿಗೆ ಮದ್ಯ ಸೇವನೆಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ, ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳಿಗೆ ಬರುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

‘ಲಾಕ್‌ಡೌನ್‌ ಬಳಿಕ ಉದ್ಯಮ ಸಂಪೂರ್ಣ ನಷ್ಟದತ್ತ ಸಾಗುತ್ತಿದೆ. ನಿರ್ವಹಣೆ ಮಾಡಲು ಸಾಧ್ಯವಾಗದೇ ಅನೇಕರು ಬಾಗಿಲು ಮುಚ್ಚಿದ್ದಾರೆ. ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಮದ್ಯವನ್ನು ಎಂಆರ್‌ಪಿ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಸರ್ಕಾರ ಅನುಮತಿ ನೀಡದೇ ಇದ್ದರೆ ಸಂಕಷ್ಟ ಇನ್ನಷ್ಟು ಹೆಚ್ಚಾಗಲಿದೆ’ ಎನ್ನುತ್ತಾರೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘ ಅಧ್ಯಕ್ಷ ಜಿ.ಟಿ.ಬಾಬುರೆಡ್ಡಿ.

ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆಯಲ್ಲಿಯೇ 58 ಬಾರ್ ಅಂಡ್‌ ರೆಸ್ಟೊರೆಂಟ್‌ಗಳಿವೆ. ಮದ್ಯದಂಗಡಿಗಿಂತ ಹೆಚ್ಚು ಜನರು ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಸಪ್ಲೈಯರ್‌, ಕ್ಲೀನರ್‌, ಅಡುಗೆ ತಯಾರಕ, ಬಿಲ್‌ ಪಡೆಯುವವರು ಸೇರಿ ಹಲವರು ಕಾರ್ಯನಿರ್ವಹಿಸುತ್ತಿದ್ದರು. ಬಾರ್‌ಗಳಲ್ಲಿದ್ದ ಉತ್ತರ ಭಾರತೀಯರು ಲಾಕ್‌ಡೌನ್‌ ಬಳಿಕ ಮತ್ತೆ ಮರಳಿಲ್ಲ. ಸ್ಥಳೀಯರಲ್ಲಿ ಕೆಲವರನ್ನು ಮಾತ್ರ ಮಾಲೀಕರು ಉಳಿಸಿಕೊಂಡಿದ್ದಾರೆ.

‘ಸಂಜೆ ಬಳಿಕ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಮಾಸಿಕ ₹ 5 ಸಾವಿರ ಸಂಬಳ ಹಾಗೂ ಟಿಪ್ಸ್‌ ಸಿಗುತ್ತಿತ್ತು. ಶಿಕ್ಷಣದ ಅಗತ್ಯಕ್ಕೆ ಈ ಸಂಪಾದನೆ ಸಾಕಾಗುತ್ತಿತ್ತು. ಮಾರ್ಚ್‌ನಿಂದ ಬಾರ್‌ ಅಂಡ್‌ ರೆಸ್ಟೊರೆಂಟ್‌ ಬಾಗಿಲು ಮುಚ್ಚಿರುವುದರಿಂದ ಕೆಲಸ ಇಲ್ಲದಂತೆ ಆಗಿದೆ’ ಎಂಬುದು ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಯೊಬ್ಬರ ಅಳಲು.

ಬಹುತೇಕರು ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳಿಂದ ಮದ್ಯ ಹಾಗೂ ಆಹಾರವನ್ನು ಪಾರ್ಸೆಲ್‌ ಪಡೆಯುತ್ತಿದ್ದಾರೆ. ನಿರ್ಜನ ಪ್ರದೇಶ, ಅರಣ್ಯ, ಪ್ರವಾಸಿ ತಾಣಗಳಲ್ಲಿ ಕುಳಿತು ಮದ್ಯ ಸೇವಿಸಿ ಊಟ ಮಾಡುತ್ತಿದ್ದಾರೆ. ನಗರದ ಹೊರವಲಯದಲ್ಲಿ ಅಭಿವೃದ್ಧಿಹೊಂದಿದ ನೂತನ ಬಡಾವಣೆಯ ಖಾಲಿ ನಿವೇಶನದಲ್ಲಿ ಮದ್ಯದ ಬಾಟಲಿ ಎಲ್ಲೆಂದರಲ್ಲಿ ಬೀಳುತ್ತಿವೆ. ಈ ನಡುವೆ ಮಿಲ್ಟ್ರಿ ಹೋಟೆಲ್‌, ಮಾಂಸದ ಹೋಟೆಲ್‌ಗಳಲ್ಲಿ ಅನಧಿಕೃತ ಮದ್ಯ ಸೇವನೆಯೂ ಹೆಚ್ಚಾಗಿದೆ ಎಂಬುದು ಮದ್ಯ ಮಾರಾಟಗಾರರ ಸಂಘ ಆರೋಪ. ಈ ಬಗ್ಗೆ ಜನಪ್ರತಿನಿಧಿಗಳ ಮೂಲಕ ಜಿಲ್ಲಾಡಳಿತಕ್ಕೆ ದೂರು ನೀಡಲು ಸಂಘ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT