ಮಂಗಳವಾರ, ಜನವರಿ 19, 2021
26 °C
5 ದಿನಗಳ ಆಚರಣೆ, ಅಲಂಕಾರಕ್ಕೆ ಖ್ಯಾತಿ

ಜ.5 ರಂದು ಬಸವೇಶ್ವರ ಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಾಲ್ಲೂಕಿನ ಪ್ರಮುಖ ರಥೋತ್ಸವಗಳಲ್ಲಿ ಒಂದಾದ ಬಿ.ಜಿ. ಕೆರೆ ಬಸವೇಶ್ವರ ಸ್ವಾಮಿ ರಥೋತ್ಸವ ಜ.5 ರಂದು ಜರುಗಲಿದೆ.

ಎಲ್ಲಾ ಧರ್ಮದವರು ಈ ದೇವರ ಆಚರಣೆಯಲ್ಲಿ ಭಾಗವಹಿಸುವುದು ವಿಶೇಷ. ರಥೋತ್ಸವದ ಅಂಗವಾಗಿ ಡಿ.31 ರಂದು ಹಂಪಣ್ಣ ಆರಾಧನೆ ಹಾಗೂ ಅನ್ನಸಂತರ್ಪಣೆ ನಡೆಸಲಾಗಿದೆ. ಜ.4ರಂದು ಕಾರ್ತೀಕ ದೀಪೋತ್ಸವ ಹಾಗೂ ರಥದ ಅಲಂಕಾರ ಜರುಗುವುದು. 5ಕ್ಕೆ ಮೀಸಲು ಸ್ವೀಕಾರ, ಬಲಿ ಅನ್ನ ಅರ್ಪಣೆ ನಡೆಯಲಿದೆ. ನಂತರ ರಥೋತ್ಸವ ಆರಂಭವಾಗಲಿದೆ. ರಥದ ಮುಂಭಾಗದಲ್ಲಿ ಉರುಳುಸೇವೆ ಇಲ್ಲಿನ ವಿಶೇಷವಾಗಿದೆ.

ದೇವಾಲಯದ ಹಿನ್ನೆಲೆ: 

ಬಿ.ಜಿ. ಕೆರೆಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಇರುವ ಮಾರಮ್ಮ ದೇವಸ್ಥಾನ ಬಳಿ 17 ನೇ ಶತಮಾನದಲ್ಲಿ ಚಳ್ಳಕೆರೆ ತಾಲ್ಲೂಕಿನ ನಾಯನಕಹಟ್ಟಿ ಹೋಬಳಿ ಮಾಲೇನಹಳ್ಳಿ ಗ್ರಾಮದ ಜಾನುವಾರು ಸಾಕಣೆದಾರರು ವಾಸವಿದ್ದರಂತೆ. ಪ್ರತಿದಿನ ಹಸುವೊಂದು ಪೊದೆ ಬಳಿ ನಿಂತು ತಾನಾಗಿಯೇ ಹಾಲು ಸುರಿಸಿ ಬರುತ್ತಿದ್ದುದನ್ನು ಕಂಡು ಗೋಪಾಲಕರು ಕುತೂಹಲದಿಂದ ಹೋಗಿ ನೋಡಿದಾಗ ಅಲ್ಲಿ ಬಸವಣ್ಣನ ವಿಗ್ರಹ ಇರುವುದು ಬೆಳಕಿಗೆ ಬಂದಿತು ಎನ್ನಲಾಗಿದೆ.

ವಿಷಯ ತಿಳಿದ ಮಾಲೇನಹಳ್ಳಿ ಗ್ರಾಮಸ್ಥರು ಸಿಕ್ಕಿದ್ದ ಬಸವಣ್ಣ ವಿಗ್ರಹವನ್ನು ತಮ್ಮ ಊರಿಗೆ ಎತ್ತಿನಗಾಡಿಯಲ್ಲಿ ತೆಗೆದುಕೊಂಡು ಹೋಗುವಾಗ ಗಾಡಿ ಈಗಿನ ಬಸವೇಶ್ವ ಸ್ವಾಮಿ ದೇವಸ್ಥಾನ ಬಳಿ ನಿಂತುಕೊಂಡಿತಂತೆ. ನಂತರ ಎಷ್ಟೇ ಪ್ರಯತ್ನ ಮಾಡಿದರೂ ಎತ್ತುಗಳು ಮುಂದಕ್ಕೆ ಸಾಗದ ಪರಿಣಾಮ ಗಾಡಿ ನಿಂತಿದ್ದ ಸ್ಥಳದಲ್ಲೇ ಬಸವಣ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರು ಎಂಬ ಐತಿಹ್ಯವನ್ನು ಈ ದೇವಸ್ಥಾನ ಹೊಂದಿದೆ.

ಈ ಕಾರಣಕ್ಕಾಗಿಯೇ ಪ್ರತಿ ವರ್ಷ ರಥೋತ್ಸವದಲ್ಲಿ ಮಾಲೇನಹಳ್ಳಿ ಗ್ರಾಮಸ್ಥರು ಮೀಸಲು ಅರ್ಪಿಸಿದ ನಂತರ ರಥೋತ್ಸವ ಕಾರ್ಯ ಆರಂಭವಾಗುವುದನ್ನು ನಡೆಸಿಕೊಂಡು ಬರಲಾಗುತ್ತಿದೆ.

ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗಿದ್ದು, ಈಚೆಗೆ ದೇವಸ್ಥಾನ ಲೋಕಾರ್ಪಣೆ ಕಾರ್ಯ ನೆರವೇರಿಸಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.