ಶನಿವಾರ, ಜನವರಿ 18, 2020
22 °C
ರೈತರಲ್ಲಿ ಶಾಸಕ ಟಿ.ರಘುಮೂರ್ತಿ ಮನವಿ

ಭದ್ರಾ ಮೇಲ್ದಂಡೆಗೆ ಅಡ್ಡಿ ಮಾಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಯಲುಸೀಮೆಗೆ ನೀರಾವರಿ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಅನುಷ್ಠಾನಗೊಳ್ಳುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ವಿನಾ ಕಾರಣ ರೈತರು ಅಡ್ಡಿಪಡಿಸಬೇಡಿ. ಜಮೀನು ಕಳೆದುಕೊಳ್ಳುವ ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ ಎಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ರೈತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿದ್ದ ನಾಲೆ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು ಸೂಚನೆ ನೀಡಿದರು.

ತುರುವನೂರು ಹೋಬಳಿಯ ದ್ಯಾಮವ್ವನಹಳ್ಳಿ, ಬೆಳಗಟ್ಟ, ಕಲ್ಲೇನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ 377 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. 17 ಕಿ.ಮೀ ನಾಲೆಯ ಪೈಕಿ 4 ಕಿ.ಮೀ ವ್ಯಾಪ್ತಿಯಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ವಿತರಿಸಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದ್ದರಿಂದ ಈಚೆಗೆ ಕಾಮಗಾರಿ ಸ್ಥಗತಗೊಂಡಿತ್ತು.

‘ಭೂಪರಿಹಾರ ಕಾಯ್ದೆಯ ಅನ್ವಯ ಎಲ್ಲರಿಗೂ ಪರಿಹಾರ ಸಿಗುತ್ತದೆ. ಹೊಸದುರ್ಗ ಮತ್ತು ತರೀಕೆರೆ ಭಾಗದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಸಿಕ್ಕಿದೆ. ರೈತರನ್ನು ದಾರಿತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾಲೆ ನಿರ್ಮಾಣವಾಗಿ ನೀರು ಹರಿದರೆ ಕೃಷಿಗೆ ಅನುಕೂಲವಾಗುತ್ತದೆ. ಚಳ್ಳಕೆರೆ, ಜಗಳೂರು, ಮೊಳಕಾಲ್ಮುರು ಹಾಗೂ ಪಾವಗಡ ತಾಲ್ಲೂಕಿಗೆ ನೀರು ಕೊಂಡೊಯ್ಯಲು ಸಾಧ್ಯವಾಗುತ್ತದೆ’ ಎಂದು ರಘುಮೂರ್ತಿ ಅವರು ರೈತರ ಮನವೊಲಿಸಲು ಪ್ರಯತ್ನಿಸಿದರು.

‘ಕಾಮಗಾರಿಯಿಂದ ಬೆಳೆ ನಷ್ಟ ಸಂಭವಿಸಿದರೆ ಪರಿಹಾರ ಸಿಗುತ್ತದೆ. ಮಾಹಿತಿ ಕೊರತೆಯಿಂದ ಕೆಲ ರೈತರಲ್ಲಿ ಗೊಂದಲ ಉಂಟಾಗಿರಬಹುದು. ಅಂತಹ ರೈತರನ್ನು ತಪ್ಪು ದಾರಿಗೆ ಎಳೆಯುವ ಪ್ರಯುತ್ನವನ್ನು ಸಹಿಸುವುದಿಲ್ಲ. ಚಿತ್ರದುರ್ಗ ಜಿಲ್ಲೆಯ ನಾಲೆ ನಿರ್ಮಾಣ ಕಾಮಗಾರಿಗೆ ಅಡ್ಡಿಪಡಿಸಿದರೆ ಅಧಿಕಾರಿಗಳು ತುಮಕೂರು ನಾಲೆಗೆ ಒತ್ತು ನೀಡುತ್ತಾರೆ. ಇದರಿಂದ ಜಿಲ್ಲೆಗೆ ನಷ್ಟ ಉಂಟಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಭೂರಹಿತನಾದ ರೈತ: ಚಿತ್ರದುರ್ಗ ತಾಲ್ಲೂಕಿನ ಸಾಸಲುಹಟ್ಟಿಯ ಬೋರಯ್ಯ ‘ಭದ್ರಾ ಮೇಲ್ದಂಡೆ’ ಯೋಜನೆಯಿಂದ ಭೂರಹಿತರಾಗಿದ್ದಾರೆ. ಅವರ ಆರು ಎಕರೆ ಜಮೀನನ್ನು ನಾಲೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿದೆ.

‘ಕೃಷಿ ಬಿಟ್ಟರೆ ಬೇರೇನು ಗೊತ್ತಿಲ್ಲ ಸ್ವಾಮಿ. ಎಲ್ಲ ಭೂಮಿಯನ್ನು ಕಿತ್ತುಕೊಂಡರೆ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಕೂಲಿ ಮಾಡಲು ಮನಸು ಒಪ್ಪುತ್ತಿಲ್ಲ. ದಯವಿಟ್ಟು ಪರಿಹಾರೋಪಾಯ ಹೇಳಿ..’ ಎಂದು ಕಂಬನಿ ತುಂಬಿದ ಕಣ್ಣುಗಳಲ್ಲಿ ಶಾಸಕರನ್ನು ನೋಡುತ್ತ ಮನವಿ ಮಾಡಿಕೊಂಡರು.

ಕಾರ್ಯಪಾಲಕ ಎಂಜಿನಿಯರ್‌ ಸೋಮಶೇಖರ್ ಮಾತನಾಡಿ, ‘ಶೇ 50ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವ ರೈತರಿಗೆ ₹ 5 ಲಕ್ಷ ಹೆಚ್ಚುವರಿಯಾಗಿ ನೀಡುವ ಅವಕಾಶವಿದೆ’ ಎಂದರು.

‘ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ. ಸಾಧ್ಯವಾದರೆ ದುಪ್ಪಟ್ಟು ಪರಿಹಾರ ನೀಡಿ’ ಎಂದು ಶಾಸಕ ರಘುಮೂರ್ತಿ ಸೂಚನೆ ನೀಡಿದರು.

ಏಳು ತಿಂಗಳು ವಿಳಂಬ: ಚಳ್ಳಕೆರೆ ತಾಲ್ಲೂಕಿನ ಜನ್ನೇನಹಟ್ಟಿ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ಕಡತ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಳು ತಿಂಗಳಿಂದ ವಿಲೇವಾರಿಯಾಗದ ಬಗ್ಗೆ ಶಾಸಕ ರಘುಮೂರ್ತಿ ಸಮಾಧಾನ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಕಾಲುವೆ ಜನ್ನೇನಹಟ್ಟಿ ಮೂಲಕ ಹಾದು ಹೋಗಲಿದೆ. ಇದಕ್ಕೆ ಕೆಲ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ಕೋರಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಕಳುಹಿಸಿದ್ದ ಕಡತ ಹಲವು ದಿನಗಳಿಂದ ಬಾಕಿ ಉಳಿದಿತ್ತು ಎಂಬ ಸಂಗತಿಯನ್ನು ರೈತರೊಬ್ಬರು ಸಭೆಯ ಗಮನಕ್ಕೆ ತಂದರು. ಇದನ್ನು ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಕೂಡ ಒಪ್ಪಿಕೊಂಡರು.

‘ಯಾವ ಸಿಬ್ಬಂದಿಯಿಂದ ಈ ಲೋಪ ಉಂಟಾಗಿದೆ’ ಎಂದು ಶಾಸಕರು ಪ್ರಶ್ನಿಸಿದರು. ದೂರವಾಣಿ ಮೂಲಕ ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿ ಮಾತನಾಡಿದರು.

ಸೂಪರಿಟೆಂಡಿಂಗ್‌ ಎಂಜಿನಿಯರ್‌ ಶಿವಪ್ರಕಾಶ್‌ ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು