ಶನಿವಾರ, ಡಿಸೆಂಬರ್ 14, 2019
24 °C
ಭಗವದ್ಗೀತೆ ಅಭಿಯಾನದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಎಸ್.ವಿ. ಹಲಸೆ

ವಚನ ಸಾಹಿತ್ಯದಲ್ಲಿ ಅಡಗಿದೆ ಭಗವದ್ಗೀತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರ ವಚನಗಳಲ್ಲೂ ಭಗವದ್ಗೀತೆಯ ಅಂಶಗಳಿವೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ.ಹಲಸೆ ಹೇಳಿದರು.

ತಾಲ್ಲೂಕಿನ ಗುಡ್ಡದ ರಂಗವ್ವನಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ದಾವಣಗೆರೆ ವಿಶ್ವವಿದ್ಯಾಲಯ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಮೂಲ ಸಂಸ್ಕೃತಿ ಮರೆಯದೇ ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಪ್ರಯತ್ನ ನಾವೆಲ್ಲರೂ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಿರುಪತಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ‌ಪ್ರೊ.ಎಂ.ಎಲ್. ನರಸಿಂಹಮೂರ್ತಿ ಮಾತನಾಡಿ, ‘ಹಿಂದೂಗಳಿಗೆ ಶ್ರೇಷ್ಠವಾದ ಗ್ರಂಥ ಭಗವದ್ಗೀತೆ. ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ಹೇಳಿದ್ದನ್ನು ವ್ಯಾಸರು ವಿಸ್ತರಿಸಿ ಗ್ರಂಥದ ರೂಪದಲ್ಲಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ’ ಎಂದರು.

‘ಭಗವದ್ಗೀತೆ ಮತ್ತು ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಬಿತ್ತುವ ಕೆಲಸ ಆಗಬೇಕು. ಅದಕ್ಕಾಗಿ ಈ ಎರಡರಲ್ಲೂ ಇರುವಂಥ ಅಂಶಗಳನ್ನು ತಿಳಿಸಬೇಕು. ಅದರಲ್ಲೂ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಸರಿಯಾಗಿ ಅರ್ಥೈಸಿಕೊಂಡರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

‘ರೈತ, ಸೈನಿಕ, ವಿದ್ಯಾರ್ಥಿ ಹೀಗೆ ಪ್ರತಿಯೊಬ್ಬರು ಅವರವರ ಕರ್ತವ್ಯವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿದರೆ ಖಂಡಿತ ಉತ್ತಮ ಫಲ ಸಿಗುತ್ತದೆ. ಭಗವದ್ಗೀತೆಯ ಸಾರಾಂಶವೂ ಇದೆ ಆಗಿದೆ. ಮನಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದ ಹೊರತು ಏನು ಸಾಧನೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ನಿತ್ಯ ಪ್ರಾಣಾಯಾಮ, ಧ್ಯಾನಕ್ಕಾಗಿ ಸಮಯ ಮೀಸಲಿಡಬೇಕು’ ಎಂದು ಹೇಳಿದರು.

ವಚನ ಮತ್ತು ಆಧ್ಯಾತ್ಮ ಕುರಿತು ಹಾಸನದ ಎ.ವಿ.ಕೆ. ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸಿ.ಚ. ಯತೀಶ್ವರ್, ‘ಕನ್ನಡ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ 12ನೇ ಶತಮಾನ ಆಧ್ಯಾತ್ಮಿಕ ಯುಗವಾಗಿದೆ. 21 ಸಾವಿರ ಪುಟದ ಅಂದಿನ ವಚನ ಸಾಹಿತ್ಯ ವಿಶ್ವ ಮನ್ನಣೆ ಪಡೆದಿದೆ. ಮನುಕುಲದ ಒಳಿತಿಗಾಗಿ, ಎಲ್ಲರಲ್ಲೂ ಮಾನವೀಯ ಮೌಲ್ಯ ಬಿತ್ತಿ ಮನುಷ್ಯರನ್ನಾಗಿ ಮಾಡಿದ್ದು ವಚನ ಸಾಹಿತ್ಯ’ ಎಂದು ಬಣ್ಣಿಸಿದರು.

‘ಎಲ್ಲರ ವ್ಯಕ್ತಿತ್ವ ವಿಕಸನಕ್ಕಾಗಿ ವಚನ ಸಾಹಿತ್ಯ ಶ್ರಮಿಸಿದೆ. ಅದೇ ರೀತಿ ಮನುಷ್ಯನ ತಳಹದಿಗೆ ಆಧಾರಸ್ತಂಭವೇ ಅಧ್ಯಾತ್ಮ. ಬಸವಾದಿ ಶರಣರ ವಚನ ಸಾಹಿತ್ಯ ಅನುಭಾವದ ಜತೆಗೆ ಆಧ್ಯಾತ್ಮಿಕ ಚಿಂತನೆಗಳಿಗೂ ನಮ್ಮನ್ನು ಒಳಪಡಿಸುತ್ತವೆ’ ಎಂದು ಹೇಳಿದರು.

‘ಭಗವದ್ಗೀತೆ ಸಾಮಾಜಿಕ ಸಾಮರಸ್ಯ’ ಕುರಿತು ಶೃಂಗೇರಿಯ ರಾಜೀವಗಾಂಧಿ ಪರಿಸರ ಮತ್ತು ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಗಣೇಶ್‌ ಈಶ್ವರ್ ಭಟ್, ‘ಇಂದಿನ ಎಲ್ಲ ಅನಾರ್ಥಕ್ಕೂ ವಿಘಟನೆಯೇ ಕಾರಣ. ವಿಶ್ವದಲ್ಲಿರುವ ಸಕಲ ಜೀವರಾಶಿಗಳಲ್ಲೂ ಭಗವಂಥ ಇದ್ದಾನೆ. ಆದ್ದರಿಂದ ಯಾರನ್ನೂ ಹಿಂಸಿಸದೇ ಸಾಮಾಜಿಕ ಸಾಮರಸ್ಯದೊಂದಿಗೆ ಬದುಕಬೇಕು’ ಎಂದು ತಿಳಿಸಿದರು.

ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅಭಿಯಾನದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿ.ಎಲ್. ಸುರೇಶ್‌ರಾಜು, ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿವಿಶ್ವನಾಥ ಶೆಟ್ಟಿ ಅವರೂ ಇದ್ದರು.

ಪ್ರತಿಕ್ರಿಯಿಸಿ (+)