ಸೋಮವಾರ, ಮೇ 23, 2022
20 °C
ಬಸವೇಶ್ವರ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸರ್ಜರಿ

ಚಿತ್ರದುರ್ಗ: ಮೆದುಳಿನ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ 45 ವರ್ಷದ ಮಹಿಳೆ ಪಾಲಮ್ಮ ಅವರಿಗೆ ಈಚೆಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ‘ಮೆದುಳಿನ ಗಡ್ಡೆ’ ಸಂಬಂಧ ಯಶಸ್ವಿಯಾಗಿ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಲಾಯಿತು.

‘ತಲೆ ಸುತ್ತು ಬರುತ್ತದೆ ಎಂದು ಆಸ್ಪತ್ರೆಗೆ ಬಂದಿದ್ದರು. ಡೆಂಗಿ ಜ್ವರ ಕೂಡ ಇದ್ದಿದ್ದರಿಂದ ಇವರ ಸ್ಥಿತಿ ಗಂಭೀರವಾಗಿತ್ತು. ಅಲ್ಲದೆ, ಎಂಆರ್‌ಐ ಸ್ಕ್ಯಾನಿಂಗ್ ಮಾಡಿದ ನಂತರವೇ ಇವರಿಗೆ ಮೆದುಳಿನ ಗಡ್ಡೆ ರೋಗ ಇರುವುದು ಪತ್ತೆಯಾಯಿತು. ತಡಮಾಡದೆ ಶಸ್ತ್ರಚಿಕಿತ್ಸೆ ಮಾಡಲಾಯಿತು’ ಎಂದು ನರರೋಗ ತಜ್ಞ ಡಾ.ಕಿರಣ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇಂತಹ ಪ್ರಕರಣಕ್ಕೆ ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಈಗ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದರು.

ಅನಸ್ತೇಸಿಯಾ ವಿಭಾಗದ ಡಾ.ಮೇಘಾ, ಇಎನ್‌ಟಿ ತಜ್ಞ ಡಾ.ಮಂಜುನಾಥ ರಾವ್, ಸಾಮಾನ್ಯ ಔಷಧ ವಿಭಾಗದ ಡಾ.ತೇಜಸ್ವಿ ಸೇರಿ ಇತರ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದೆ ಎಂದರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ‘ಶ್ರೀಮಠದ ಆಸ್ಪತ್ರೆಗೆ ಬರುವ ರೋಗಿಗಳು ಹೊರ ಜಿಲ್ಲೆ, ಬೇರೆ ಊರುಗಳಿಗೆ ಚಿಕಿತ್ಸೆಗೆ ಹೋಗದಂತೆ ಇಲ್ಲಿಯೇ ಚಿಕಿತ್ಸೆ ಮಾಡುವಷ್ಟು ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ನುರಿತ ತಜ್ಞ ವೈದ್ಯರು ಕೂಡ ಇದ್ದಾರೆ’ ಎಂದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಆಸ್ಪತ್ರೆಯ ಡೀನ್ ಡಾ.ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ. ಫಾಲಾಕ್ಷಯ್ಯ, ಚಿಕಿತ್ಸೆಗೆ ಒಳಗಾಗಿದ್ದ ಪಾಲಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.