ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ಲೋಕಾಯುಕ್ತ ಬಲೆಗೆ

ಗುತ್ತಿಗೆದಾರರೊಬ್ಬರಿಂದ ₹ 4 ಲಕ್ಷ ಲಂಚ ಪಡೆದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್‌.ವೈ.ಬಸವರಾಜಪ್ಪ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Published 6 ಮೇ 2024, 15:56 IST
Last Updated 6 ಮೇ 2024, 15:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಗುತ್ತಿಗೆದಾರರೊಬ್ಬರಿಂದ ₹ 4 ಲಕ್ಷ ಲಂಚ ಪಡೆದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್‌.ವೈ.ಬಸವರಾಜಪ್ಪ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಂಡಳಿಯ ಕಚೇರಿಯಲ್ಲಿ ಲಂಚದ ಸಮೇತ ಸಿಕ್ಕಿಬಿದ್ದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರಿನ ಗುತ್ತಿಗೆದಾರ ವೈ.ಪಿ.ಸಿದ್ದನಗೌಡ ಎಂಬುವರು ಗೌರಿಪುರ ಹಾಗೂ ಖಿಲಾಕಣಕುಪ್ಪೆ ವ್ಯಾಪ್ತಿಯ 15 ತುಂಡು ಕಾಮಗಾರಿಗಳ ಟೆಂಡರ್‌ ಪಡೆದಿದ್ದರು. ಅಗತ್ಯ ಅನುದಾನಕ್ಕೆ ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಆಡಳಿತಾತ್ಮಕ ಅನುಮೋದನೆಯ ಅಗತ್ಯವಿದೆ ಎಂಬುದನ್ನು ದಾವಣಗೆರೆಯ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ ಸ್ಪಷ್ಟಪಡಿಸಿತ್ತು. ಈ ಅನುಮೋದನೆಗಾಗಿ ಗುತ್ತಿಗೆದಾರ ಒಂದು ವರ್ಷದಿಂದ ಅಲೆದಿದ್ದರು ಎಂದು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಾಸುದೇವರಾಮ ಮಾಹಿತಿ ನೀಡಿದ್ದಾರೆ.

ಏ.30ರಂದು ಕಾರ್ಯದರ್ಶಿ ಬಸವರಾಜಪ್ಪ ಅವರನ್ನು ಗುತ್ತಿಗೆದಾರ ನೇರವಾಗಿ ಭೇಟಿ ಮಾಡಿದ್ದರು. ಎಲ್ಲ ಕಾಮಗಾರಿಗಳ ಮಂಜೂರಾತಿ ನೀಡಲು ಕಾರ್ಯದರ್ಶಿ ₹ 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸರಗೊಂಡಿದ್ದ ಸಿದ್ದೇಗೌಡ, ಮೇ 2ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸೋಮವಾರ ಬೆಳಿಗ್ಗೆ ಕಚೇರಿಯಲ್ಲಿಯೇ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿತು ಎಂದು ಪೊಲೀಸ್‌ ವರಿಷ್ಠಾಧಿಕಾರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT