ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳಿ ಹುಳುಗಳ ಹಾವಳಿ: ಹೈರಾಣಾದ ಜನ

ಹೊಸದುರ್ಗ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಮಸ್ಯೆ
Last Updated 22 ಸೆಪ್ಟೆಂಬರ್ 2022, 5:15 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಮಂಟೇನಹಳ್ಳಿ, ಕೊಂಡಾಪುರ, ಹೆಬ್ಬಳ್ಳಿ, ಶ್ರೀರಂಗಾಪುರ, ಐಲಾಪುರ, ಕಂಗುವಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿಕಂಬಳಿ ಹುಳುಗಳ ಹಾವಳಿ ಹೆಚ್ಚಾಗಿದ್ದು, ಮನೆಮನೆಗಳ ಗೋಡೆಗಳ ಮೇಲೆ ಕಂಡುಬರುತ್ತಿರುವ ಹುಳುಗಳಿಂದಾಗಿ ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

ನೋಡಲು ಚಿಕ್ಕದಾಗಿರುವ ಕಂಬಳಿ ಹುಳುಗಳು ಮನೆ ಸುತ್ತಮುತ್ತ ಹಾಗೂ ಹಿತ್ತಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನ ಎದುರಿಸುತ್ತಿರುವ ತೊಂದರೆ ಹೇಳತೀರದಂತಾಗಿದೆ.

ಸಸಿಗಳ ಎಲೆ ತಿಂದು, ಗಿಡಗಳನ್ನು ಒಣಗಿಸುತ್ತವೆ. ಎರಡು ತಿಂಗಳಿಂದ ನಿರಂತರ ಸುರಿದ ಮಳೆಯಿಂದಾಗಿ ಮನೆಗಳಲ್ಲಿ ತೇವಾಂಶ ಹೆಚ್ಚಿದ ಪರಿಣಾಮ ಕಂಬಳಿ ಹುಳುಗಳ ಸಂಖ್ಯೆಯೂ ಹೆಚ್ಚಾಗಿದೆ.

ಹುಳುಗಳ ಕಾಟದಿಂದ ಎಲ್ಲೂ ಕಾಲಿಡಲು ಆಗುತ್ತಿಲ್ಲ. ಹುಳುಗಳು ಮೈ ಮೇಲೆ ಬೀಳುವ ಆತಂಕ ಹೆಚ್ಚಿದೆ. ಮಕ್ಕಳೂ ಭಯದಲ್ಲೇ ಕಾಲ ಕಳೆಯುವಂತಾಗಿದೆ. ಮನೆಯಲ್ಲಿನ ಪಾತ್ರೆ, ಬಟ್ಟೆ, ಗೋಡೆ ಮೇಲೆ ಇತ್ಯಾದಿ ಕಡೆಗಳಲೆಲ್ಲಾ ಕಂಬಳಿ ಹುಳುಗಳೇ ಇವೆ ಎಂದು ಶ್ರೀರಂಗಾಪುರದ ಯಶೋದಮ್ಮ ಹೇಳಿದರು.

ಕಂಬಳಿ ಹುಳುಗಳು ಮೈಮೇಲೆ ಬಿದ್ದರೆ ತುರಿಕೆ ಉಂಟಾಗಿ, ಅಲ್ಲಲ್ಲಿ ಸಣ್ಣ ಗುಳ್ಳೆಗಳು ಕಾಣುತ್ತವೆ. ತುರಿಕೆಯಾಗುತ್ತದೆ. ಚುಚ್ಚಿದ ಅನುಭವವೂ ಆಗುತ್ತದೆ ಎಂದು ಅವರು ಹೇಳಿದರು.

ಕಂಬಳಿ ಹುಳುಗಳು ಕಚ್ಚುವುದಿಲ್ಲ ಬದಲಿಗೆ ಇವುಗಳಲ್ಲಿರುವ ಮುಳ್ಳಿನಂತಹ ಕೂದಲು ಬಲವಾಗಿ ಚುಚ್ಚಿ ಮುರಿದುಕೊಳ್ಳುವಂತೆ ಮಾಡುತ್ತವೆ. ಇವುಗಳ ಕಡಿತದಿಂದ ತುರಿಕೆಯಾದರೆ ಉಗುರನ್ನು ಬಳಸದೆ ತೊಟ್ಟ ಬಟ್ಟೆಯಿಂದ ನಯವಾಗಿ ಉಜ್ಜಿಕೊಳ್ಳಬೇಕು. ಮನೆಯಲ್ಲಿನ ಪದಾರ್ಥಗಳನ್ನೇ ಉಪಯೋಗಿಸಿ ತುಳಸಿ ಎಲೆಗಳ ಲೇಪನ, ಜೇನುತುಪ್ಪ, ಕೊಬ್ಬರಿ ಎಣ್ಣೆ, ಹಲ್ಲುಜ್ಜುವ ಪೇಸ್ಟ್‌ ಅಥವಾ ಲೋಳೆರಸ ಇವುಗಳಲ್ಲಿ ಯಾವುದಾದರೊಂದನ್ನು ಉಜ್ಜಿಕೊಳ್ಳುವುದರಿಂದ ತುರಿಕೆ ಮತ್ತು ಉರಿ ಕಡಿಮೆಯಾಗುತ್ತದೆ ಎಂದು ಕೊಂಡಾಪುರದ ಲೋಹಿತ್‌ ಕುಮಾರ್‌ ಹೇಳಿದರು.

ಕೊಂಡಾಪುದಲ್ಲಿ ಕಂಬಳಿ ಹುಳು ನಿಯಂತ್ರಣಕ್ಕಾಗಿ ನೀಮ್‌ ಆಯಿಲ್‌ ಸಿಂಪಡಿಸಲಾಗಿದೆ. ಹುಳು ಹೆಚ್ಚಿರುವ ಕಡೆ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್‌ ತಯಾರಿಸಿ, 5 ಎಂ.ಎಲ್‌. ಪೇಸ್ಟ್‌ಗೆ 1 ಲೀಟರ್‌ ನೀರು ಬೆರೆಸಿ ಸಿಂಪಡಣೆ ಮಾಡಬೇಕು. ಕ್ರಮೇಣ ಹುಳುಗಳ ಸಂಖ್ಯೆ ಕಡಿಮೆಯಾಗುತ್ತದೆಎಂದು ತಾಲ್ಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ಹೇಳಿದರು.

ನಾಲ್ಕು ದಿನಗಳ ಹಿಂದೆ ಗ್ರಾಮ ಪಂಚಾಯಿತಿಯವರು ಔಷಧ ಸಿಂಪಡಣೆ ಮಾಡಿದ್ದಾರೆ. ಹುಳುಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಸಂಪೂರ್ಣ ನಿಯಂತ್ರಣವಾಗಿಲ್ಲ.

ಗಜೇಂದ್ರ ಬುಡ್ಡಿ, ಕೊಂಡಾಪುರ

ಕಂಬಳಿ ಹುಳಗಳನ್ನು ನೋಡಿದರೇ ಭಯವಾಗುತ್ತದೆ. ನಿತ್ಯ ಅವುಗಳನ್ನು ಹಿಡಿದು ಸಾಯಿಸುವುದೇ ಕೆಲಸವಾಗಿದೆ. ಚಿಕ್ಕ ಮಕ್ಕಳನ್ನು ಆಟ ಆಡಲು ಹೊರಗೆ ಬಿಡಲು ಆತಂಕವಾಗುತ್ತದೆ.

ಗಂಗಾ, ಶ್ರೀರಂಗಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT