ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯ, ದ್ರಾವಿಡರಲ್ಲ ಶೋಷಿತರ ಧ್ವನಿಕೇಳಿ: ಸಚಿವ ಎ.ನಾರಾಯಣಸ್ವಾಮಿ ಕೋರಿಕೆ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೋರಿಕೆ
Last Updated 31 ಮೇ 2022, 14:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಆರ್ಯರು ಮತ್ತು ದ್ರಾವಿಡರ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಆದರೆ, ಈ ನೆಲದ ಶೋಷಿತ ಸಮುದಾಯದ ನೋವು ಆಲಿಸುವ ಪ್ರಯತ್ನ ನಡೆಯುತ್ತಿಲ್ಲ. ಜಾತಿ ವ್ಯವಸ್ಥೆಯಿಂದಾಗಿ ಇಡೀ ಸಮಾಜ ಕುಟುಂಬದಂತೆ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಹರಳಯ್ಯ ಗುರುಪೀಠದ ವತಿಯಿಂದ ಮುರುಘಾ ಮಠದ ಅನುಭವಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರ ಆಶಯಗಳು ಸಂವಿಧಾನದಲ್ಲಿ ಅಡಕವಾಗಿವೆ. ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದರೂ ಶೋಷಿತ ಸಮುದಾಯದ ಬದುಕು ಸುಧಾರಣೆ ಕಂಡಿಲ್ಲ. ಸ್ವಾತಂತ್ರ್ಯಭಾರತದಲ್ಲಿ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಏಳಿಗೆಗೆ ಶ್ರಮಿಸುವ ನಾಟಕ ಮಾಡಿವೆ. ಅಸ್ಪೃಶ್ಯ ಸಮುದಾಯ ಜಯಂತಿಗೆ ಮಾತ್ರ ಸೀಮಿತವಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.

‘ಸಂತ ರವಿದಾಸರು ಉತ್ತರ ಭಾರತದಲ್ಲಿ ಮಾಡಿದ ಸುಧಾರಣೆ, ಆ ಶಕ್ತಿ ದಕ್ಷಿಣ ಭಾರತಕ್ಕೆ ಬರಲಿಲ್ಲ. 12ನೇ ಶತಮಾನದಲ್ಲಿ ಅತಿದೊಡ್ಡ ಕ್ರಾಂತಿ ನಡೆದರೂ ಬಸವಣ್ಣನವರ ನಿರೀಕ್ಷೆಯಂತೆ ಸಮಾಜ ಸುಧಾರಣೆಯಾಗಲಿಲ್ಲ. ಸಾಮಾಜಿಕ ಬದಲಾವಣೆಗೆ ಪೂರ್ಣವಿರಾಮ ಇಡಲಾಯಿತು. ಸಮುದಾಯದ ಹೆಜ್ಜೆಗುರುತುಗಳು ಇತಿಹಾಸದಲ್ಲಿ ಅಳಿಸಿಹೋಗಿವೆ. ಶೋಷಿತ ಸಮುದಾಯ ಪುಟಿದೇಳುವ ಅಗತ್ಯವಿದೆ. ಅಂಬೇಡ್ಕರ್‌ ಮತ್ತು ಬಾಬು ಜಗಜೀವನರಾಮ್‌ ಹೋರಾಟದ ಹೆಜ್ಜೆಗಳನ್ನು ಅನುಸರಿಸಿ ನಡೆದರೆ ಮಾತ್ರ ದಾರಿದೀಪ ಕಾಣಲಿದೆ’ ಎಂದು ಹೇಳಿದರು.

ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ‘ಮೀಸಲಾತಿಯ ದಲಿತರಾಗಿ ಉಳಿದರೆ ಅಂಬೇಡ್ಕರ್‌ ಅರಿಯಲು ಸಾಧ್ಯವಿಲ್ಲ. ಅಂಬೇಡ್ಕರ್‌ ಅವರ ಬಳಿ ಕತ್ತಿ ಇರಲಿಲ್ಲ. ಅವರ ಬೆನ್ನಿಗೆ ಯಾವ ಬಂಡವಾಳಶಾಹಿ ಕೂಡ ನಿಲ್ಲಲಿಲ್ಲ. ಶ್ರಮ, ಶ್ರದ್ಧೆ ಹಾಗೂ ಪ್ರಾಮಾಣಿಕ ದುಡಿಮೆಯಿಂದ ಅವರು ಬೆಳೆದರು. ವಿಶ್ವಮೆಚ್ಚುವ ಸಂವಿಧಾನವನ್ನು ನೀಡಿದರು’ ಎಂದು ಕೊಂಡಾಡಿದರು.

‘ಕೆಳವರ್ಗದಿಂದ ಮೇಲ್ವರ್ಗಕ್ಕೆ ಸಿಗುವ ಗೌರವ ಅಪಾರ. ಇದು ಸಂಪ್ರದಾಯದ ರೀತಿಯಲ್ಲಿ ನಡೆಯುತ್ತಲೇ ಇದೆ. ಬಸವಣ್ಣ ಅವರ ಮೂಲ ಸ್ಫೂರ್ತಿಯೇ ಹರಳಯ್ಯ. ಮಧುವರಸ ಹಾಗೂ ಹರಳಯ್ಯ ಅವರ ತ್ಯಾಗದ ಫಲವಾಗಿ ಲಿಂಗಾಯತ ಧರ್ಮ ಇಂದಿಗೂ ಉಳಿದಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಜಾಪ್ರಭುತ್ವದ ಜನಕ ಬಸವಣ್ಣ’

ಗ್ರೀಕ್‌ ದೇಶ ಕಣ್ಣು ತೆರೆಯುತ್ತಿದ್ದ ಸಂದರ್ಭದಲ್ಲಿಯೇ ವಚನಕಾರರು ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೊಂದನ್ನು ರೂಪಿಸಿದ್ದರು. ಪ್ರಜಾಪ್ರಭುತ್ವದ ಪ್ರಥಮ ಜನಕ ಬಸವಣ್ಣ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.

‘ಶರಣ ಎಂಬ ಪದವನ್ನು ಮೊದಲು ನೀಡಿದವರು ಬುದ್ಧ. ಸಾವಿರಾರು ವರ್ಷಗಳ ಬಳಿಕ ಬಸವಣ್ಣ ಇದೇ ಪದವನ್ನು ಪುನರುಚ್ಚರಿಸಿದರು. ಭಕ್ತರು ಮತ್ತು ದೇವರ ನಡುವೆ ಇದ್ದ ಮಧ್ಯವರ್ತಿಯನ್ನು ದೂರ ಮಾಡಿ ಲಿಂಗಪೂಜೆಯ ಪರಿಕಲ್ಪನೆ ಸೃಷ್ಟಿಸಿದರು. ಭಾಷೆಯನ್ನು ಸರಳಗೊಳಿಸಿ ಜನಸಾಮಾನ್ಯರು ಕೂಡ ಹೃದಯದ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಅವಕಾಶ ಕಲ್ಪಿಸಿದರು. ಬಸವಣ್ಣನವರ ವಚನ, ಅವರ ತತ್ವಗಳನ್ನು ಯಾರೂ ಮುಚ್ಚಿಹಾಕಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಹರಳಯ್ಯ ಗುರುಪೀಠದ ಹರಳಯ್ಯ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಮಾಜಿ ಶಾಸಕ ಪಿಚ್ಚನಹಳ್ಳಿ ಮುನಿಸ್ವಾಮಿ, ಮಾದಿಗ ಸಮುದಾಯದ ಮುಖಂಡ ಕನಕರಾಜ್, ಬಿಎಸ್‌ಪಿ ಮುಖಂಡ ಮಾರಸಂದ್ರ ಮುನಿಯಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಯೋಗೇಶ ಬಾಬು, ಬಿ.ಪಿ.ಪ್ರಕಾಶ್ ಮೂರ್ತಿ, ಸಾವಯವ ಗೊಬ್ಬರದ ಮಾಲೀಕ ನಾಗರಾಜ್, ಬಸವ ಟಿ.ವಿ ಮುಖ್ಯಸ್ಥ ಕೃಷ್ಣಪ್ಪ, ಟಿಪ್ಪು ಖಾಸೀಂ ಅಲಿ ಇತರರು ಇದ್ದರು.

***

ಪ್ರಶಸ್ತಿಯೊಂದಿಗೆ ನೀಡಿದ ನಗದು ಪುರಸ್ಕಾರ ಮರಳಿಸುತ್ತೇನೆ. ಇದರೊಂದಿಗೆ ಇನ್ನಷ್ಟು ಆರ್ಥಿಕ ನೆರವು ನೀಡಿ ಜಿಲ್ಲೆಯ ಆದಿವಾಸಿ ಸಮುದಾಯದ 25 ಆಸಕ್ತರಿಗೆ ಆನ್‌ಲೈನ್‌ನಲ್ಲಿ ಸಂಗೀತ ಕಲಿಸಿಕೊಡುತ್ತೇನೆ.
ಹಂಸಲೇಖ,ಸಂಗೀತ ನಿರ್ದೇಶಕ

***

ಪಟ್ಟಭದ್ರರು ನೀಡಿದ ಶಿಕ್ಷೆಗೆ ಗುರಿಯಾದವರು ಹರಳಯ್ಯ ಮತ್ತು ಮಧುವರಸ. ಏಸುಕ್ರಿಸ್ತರಷ್ಟೇ ಶಿವಶರಣರು ಕೂಡ ನೋವು ಅನುಭವಿಸಿದ್ದಾರೆ. ಸಮಾಜವನ್ನು ಶೋಷಣೆಯಿಂದ ಮುಕ್ತಗೊಳಿಸಲು ಶ್ರಮಿಸಿದ್ದಾರೆ.
ಶಿವಮೂರ್ತಿ ಮುರುಘಾ ಶರಣರು,ಮುರುಘಾ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT