ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಬೆಳೆ ಹಾನಿ: ಕೈಚೆಲ್ಲಿದ ರೈತರು

Last Updated 8 ಆಗಸ್ಟ್ 2022, 5:24 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ತಿಂಗಳಿಗೂ ಹೆಚ್ಚು ಕಾಲದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜೂನ್‌ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ಈಗ ಅಕ್ಷರಶಃ ನೀರು ಪಾಲಾಗಿವೆ. ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮೆಕ್ಕೆಜೋಳ, ಹತ್ತಿ ಮತ್ತಿತರ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಜೂನ್‌ ತಿಂಗಳ ಕೊನೆಯಲ್ಲಿ ಅರಂಭವಾದ ಮಳೆ, ಇಂದಿಗೂ ಬಿಡುವ ಲಕ್ಷಣವೇ ಕಾಣುತ್ತಿಲ್ಲ. ಇದರಿಂದಾಗಿ ಸಾವಿರಾರು ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದೆ. ಕೆಲವು ಕಡೆಗಳಲ್ಲಿ ನೀರು ನಿಂತು ಕೊಳೆತು ಹೋಗಿದ್ದರೆ, ಮತ್ತೆ ಕೆಲವೆಡೆ ಕಳೆ ಹುಲ್ಲು ಹೆಚ್ಚಾಗಿದ್ದು, ಪೈರುಗಳು ಹಳದಿ ಹಾಗೂ ಬಿಳಿ ಬಣ್ಣಕ್ಕೆ ತಿರುಗಿವೆ.

ನಿರಂತರ ಮಳೆಯಿಂದಾಗಿ ಅನೇಕ ರೈತರು ಕಳೆಯನ್ನು ತೆಗೆಯಲಾರದೇ ಸುಮ್ಮನಾಗಿದ್ದಾರೆ. ಮತ್ತೆ ಕೆಲವರು ಜಮೀನಿನಲ್ಲಿ ದನ, ಕರು, ಕುರಿ–ಮೇಕೆಗಳನ್ನು ಮೇಯಿಸಲು ಬಿಟ್ಟಿದ್ದಾರೆ. ಕಡೂರು, ಅಂತಾಪುರ, ಚಿಕ್ಕಎಮ್ಮಿಗನೂರು, ಹಿರೇಎಮ್ಮಿಗನೂರು, ಬಿ. ದುರ್ಗ ಮೊದಲಾದ ಕಡೆಗಳಲ್ಲಿ ಮೆಕ್ಕೆಜೋಳದ ಜತೆ ಬೆಳೆದು ನಿಂತಿದ್ದ ಹುಲ್ಲನ್ನು ಕೊಯ್ಲು ಮಾಡಿಕೊಂಡು ಮನೆಯಲ್ಲಿಯ ಜಾನುವಾರಿಗೆ ಮೇವಾಗಿ ಬಳಸುತ್ತಿದ್ದಾರೆ. ಚಿಕ್ಕಜಾಜೂರು, ಬಿ. ದುರ್ಗ, ವಿಶ್ವನಾಥನಹಳ್ಳಿ, ಅಂದನೂರು, ಹಿರಿಯೂರು, ಮಲ್ಲೇನಹಳ್ಳಿ, ಗ್ಯಾರೆಹಳ್ಳಿ, ಬಂಡೆಬೊಮ್ಮೇನಹಳ್ಳಿ ಮೊದಲಾದ ಕಡೆಗಳಲ್ಲಿ ರೈತರು ಹಾನಿಯಾಗಿದ್ದ ಮೆಕ್ಕೆಜೋಳವನ್ನು ಅಳಿಸಿದ್ದಾರೆ.

‘ಮೆಕ್ಕೆಜೋಳವನ್ನು ಅಳಿಸಿ, ಮರು ಬಿತ್ತನೆ ಮಾಡಿದ್ದೆವು. ಆದರೆ, ಮತ್ತೆ ಮಳೆ ಬಂದಿದ್ದರಿಂದ ಜಮೀನುಗಳಲ್ಲಿ ನೀರು ನಿಂತು, ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಇದುವರೆಗೂ ಹುಟ್ಟಿಲ್ಲ. ಮೊದಲ ಬಾರಿ ಬಿತ್ತನೆ ಮಾಡಿದಾಗ ಎಕರೆಗೆ
₹ 12,000 ಖರ್ಚು ಮಾಡಿದ್ದೆವು. ಈಗ ಮತ್ತೆ ಮರು ಬಿತ್ತನೆಗೆ ಬೇಸಾಯ, ಬಿತ್ತನೆ ಬೀಜ, ತಳಗೊಬ್ಬರ, ಕೂಲಿಗಾಗಿ ಎಕರೆಗೆ ಸುಮಾರು
₹ 9,000 ದಿಂದ ₹ 10,000 ದವರೆಗೆ ಖರ್ಚು ಮಾಡಲಾಗಿದೆ. ದೇವರು ಈ ವರ್ಷ ನಮ್ಮ ಕೈಹಿಡಿಯಲಿಲ್ಲ. ನಮ್ಮ ಅದೃಷ್ಟ ಸರಿ ಇಲ್ಲ ಎನಿಸುತ್ತಿದೆ. ಪ್ರತಿ ಗ್ರಾಮದಲ್ಲಿ ಶೇ 90ಕ್ಕೂ ಹೆಚ್ಚು ಜಮೀನುಗಳಲ್ಲಿ ಬೆಳೆ ಹಾನಿಯಾಗಿದೆ. ಎಲ್ಲ ರೈತರು ಮುಂದೇನು ಎಂದು ಚಿಂತಿಸುವಂತಾಗಿದೆ’ ಎಂದು ರೈತರಾದ ಬಸವರಾಜಪ್ಪ, ಶಿವಣ್ಣ, ಕಲ್ಲೇಶಪ್ಪ, ಮುರಿಗೆಪ್ಪ, ಶಿವಕುಮಾರ್‌ ಅಳಲು ತೋಡಿಕೊಂಡರು.

.......

ಬಿ. ದುರ್ಗ ಹೋಬಳಿಯಲ್ಲಿ ಮುಂಗಾರಿನಲ್ಲಿ 8,200 ಹೆಕ್ಟೇರ್‌ಗಳಷ್ಟು ಮೆಕ್ಕೆಜೋಳ, 340 ಹೆಕ್ಟೇರ್‌ ಹತ್ತಿ, 36 ಹೆಕ್ಟೇರ್‌ ತೊಗರಿಯನ್ನು ಬಿತ್ತನೆ ಮಾಡಲಾಗಿತ್ತು. ಆದರೆ, ಅಧಿಕ ಮಳೆಯಿಂದಾಗಿ ಬಹುತೇಕ ಕಡೆಗಳಲ್ಲಿ ಮೆಕ್ಕೆಜೋಳ, ತೊಗರಿ ಬೆಳೆಗೆ ಹಾನಿಯಾಗಿದೆ.

–ಪರಮಶಿವಪ್ಪ, ಚಿಕ್ಕಜಾಜೂರಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT