ಚಿತ್ರದುರ್ಗ: ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಚಿತ್ರದುರ್ಗ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದ ಎದುರು ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಇಂಧನ ಬೆಲೆ ದಾಖಲೆ ರೀತಿಯಲ್ಲಿ ಏರಿಕೆ ಕಂಡಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ತಲುಪಿದ್ದು, ಜನಸಾಮಾನ್ಯರ ಬದುಕು ಇನ್ನಷ್ಟು ದುರ್ಬರವಾಗಿದೆ. ಇದೇನಾ ನಿಮ್ಮ ಅಚ್ಚಾದೀನ್ ಎಂದು ಪ್ರಶ್ನಿಸಿದರು.
ಅಗತ್ಯ ವಸ್ತು ಹಾಗೂ ಇಂಧನ ಬೆಲೆ ಏರಿಕೆಯಲ್ಲಿ ಸ್ಥಿರತೆ ತರುವುದಾಗಿ ಮೋದಿ ಅವರು ಚುನಾವಣೆಗೂ ಮುನ್ನ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದು 4 ವರ್ಷ ಕಳೆದರೂ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಜನರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮಧು ಪಾಲೇಗೌಡ ಮಾತನಾಡಿ, ‘ಪ್ರಧಾನಿಯಾದ ಬಳಿಕ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರುವುದಾಗಿ ಮೋದಿ ಭರವಸೆ ನೀಡಿದ್ದರು. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಭಾಷಣ ಮಾಡಿದ್ದರು. ಆದರೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ’ ಎಂದು ದೂರಿದರು.
‘ರೈತರ ಬದುಕು ಹಸನ ಮಾಡುವುದಾಗಿ ಹೇಳಿದ ಬಿಜೆಪಿ ಈವರೆಗೆ ಸಾಲ ಮನ್ನಾಗೆ ಮುಂದಾಗುತ್ತಿಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸಹಕಾರಿ ಬ್ಯಾಂಕ್ಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇನ್ನೂ ಹೆಚ್ಚಿನ ರೈತರಿಗೆ ಅನುಕೂಲವಾಗುವ ರೀತಿ ಸಾಲ ಮನ್ನಾ ನೀತಿ ಜಾರಿಗೆ ತಂದಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಈವರೆಗೆ ಇಂತಹ ಧೈರ್ಯ ತೋರಿಲ್ಲ’ ಎಂದು ಆರೋಪಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ನಾಯ್ಡು, ಮುಖಂಡರಾದ ಬಿ.ಟಿ.ಜಗದೀಶ್, ರಮೇಶ್, ಕಾರ್ತಿಕ್, ಎಂ.ಡಿ.ಹಸನ್ ತಾಹೀರ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.