ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ವಾರಾಂತ್ಯದ ಕರ್ಫ್ಯೂ: ಕೋಟೆನಾಡು ಸ್ತಬ್ಧ

ವಾಹನ, ಬಸ್‌ ಸಂಚಾರ ವಿರಳ, ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಪ್ರಯೋಗ
Last Updated 9 ಜನವರಿ 2022, 6:01 IST
ಅಕ್ಷರ ಗಾತ್ರ

ಚಿತ್ರದುರ್ಗ:ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೇರಿದ ವಾರಾಂತ್ಯದ ಕರ್ಫ್ಯೂ ನಿಮಿತ್ತ ಶನಿವಾರ ಕೋಟೆನಾಡು ಬಹುತೇಕ ಸ್ತಬ್ಧವಾಯಿತು.ಶುಕ್ರವಾರ ರಾತ್ರಿ ಹತ್ತು ಗಂಟೆಯಿಂದ ಆರಂಭವಾದ ನಿಷೇಧಾಜ್ಞೆ ಶನಿವಾರ ಬೆಳಿಗ್ಗೆಯಿಂದ ಕೊಂಚ ಬಿಗಿಯಾಯಿತು.

ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕು ಏರಿಕೆಯಾದ ಕಾರಣದಿಂದ ಸರ್ಕಾರ ರಾತ್ರಿ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ.ಅಗತ್ಯ ಸೇವೆ, ಬಸ್ ಸಂಚಾರಕ್ಕೆ ಅವಕಾಶ ನೀಡಿದ್ದರೂ ಸಾರ್ವಜನಿಕರ ಸಂಚಾರ ವಿರಳವಾಗಿತ್ತು. ಬೆಳಿಗ್ಗೆ 9ರವರೆಗೆ ಆಟೊ, ದ್ವಿಚಕ್ರ ವಾಹನಗಳ ಸಂಚಾರ ಎಂದಿನಂತೆ ಕಂಡು ಬಂದಿತು.

ಗಾಂಧಿ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದ ಪೊಲೀಸರು ‘ಅಗತ್ಯ ವಸ್ತುಗಳನ್ನು ಖರೀದಿಸಿ ಬೇಗ ಮನೆಗೆ ತೆರಳಿ’ ಎಂದು ಸೂಚಿಸುತ್ತಿದ್ದರು. ಆದರೂ, ಔಧದ ಅಂಗಡಿ, ಹಣ್ಣು-ತರಕಾರಿ ಖರೀದಿ, ಊರಿಗೆ ಹೋಗಬೇಕೆಂಬ ನೆಪ ಹೇಳುತ್ತ ಅನಗತ್ಯವಾಗಿ ಸಂಚರಿಸುತ್ತಿದ್ದವರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು.

ದಂಡ ಪ್ರಯೋಗ: ನಗರದ ಗಾಂಧಿವೃತ್ತ, ನಗರ ಠಾಣೆ, ಹೊಳಲ್ಕೆರೆ ರಸ್ತೆ, ಚಳ್ಳಕೆರೆ ಗೇಟ್‌ನಲ್ಲಿ ಹತ್ತು ಗಂಟೆ ಬಳಿಕ ವಾಹನಗಳ ತಪಾಸಣೆ ನಡೆಸಿ ದಂಡ ಪ್ರಯೋಗಕ್ಕೆ ಪೊಲೀಸರು ಮುಂದಾದರು. ಈ ವೇಳೆ ಮಾಸ್ಕ್ ಧರಿಸದೇ ಬಂದ ಯುವಕನಿಗೆ ‘ನಾಚಿಕೆ ಆಗಬೇಕು’ ಎಂದು ತರಾಟೆಗೆ ತೆಗೆದುಕೊಂಡು ದಂಡ ಹಾಕಿ, ಅನಗತ್ಯವಾಗಿ ರಸ್ತೆಗೆ ಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಆಟೊ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಸ್ ನಿಲ್ದಾಣ ಬಿಟ್ಟು ರಸ್ತೆಗಳಲ್ಲಿ ಸುತ್ತಾಡುತ್ತಿದ್ದ ಆಟೊ ಚಾಲಕರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದರು. ಗ್ರಾಮೀಣ ಭಾಗಕ್ಕೆ ಸಂಚರಿಸುವ ಸರಕು ಸಾಗಣೆ ಆಟೊಗಳನ್ನು ತಪಾಸಣೆ ನಡೆಸಿದರು. ನಿಯಮ ಉಲ್ಲಂಘಿಸಿ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಚಾಲಕರಿಗೆ ದಂಡ ಹಾಕಿ ಎಚ್ಚರಿಕೆ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಂಚಾರ ವಿರಳ:ಅಗತ್ಯ ಸೇವೆ ಹೊರತು ಪಡಿಸಿ ಎಲ್ಲ ರೀತಿಯ ಅಂಗಡಿಗಳು ಬಂದ್ ಆಗಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಕ್ಷೀಣಿಸಿತು. ಮಧ್ಯಾಹ್ನದ ವೇಳೆಗೆ ರಸ್ತೆ ಬದಿಯ ಹಣ್ಣು, ಹೂ ವ್ಯಾಪಾರಿಗಳು ಸಹ ಮನೆಗೆ ತೆರಳಿದರು. ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ನಗರದ ಒಳ ಭಾಗದಲ್ಲಿ ಜನ ಜೀವನ ಎಂದಿನಂತೆ ಸಾಗಿತು.

ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶ ನೀಡಲಾಗಿತ್ತು. ಆದರೆ, ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಬೇಕರಿಗಳು, ಫಾಸ್ಟ್‌ಫುಡ್‌ ಸೆಂಟರ್‌ಗಳಲ್ಲಿ ಜನರು ಕಂಡು ಬಂದರು. ಪೆಟ್ರೋಲ್ ಬಂಕ್‌ಗಳು ಸಹ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಗಾಂಧಿ ವೃತದಲ್ಲಿ ಹೂ, ಹಣ್ಣು ಖರೀದಿಗೆ ಮಾಸ್ಕ್ ಧರಿಸದೇ ಬಂದ ಸಾರ್ವಜನಿಕರಿಗೆ ಗಸ್ತಿನಲ್ಲಿದ್ದ ಅಧಿಕಾರಿಗಳು, ಪೊಲೀಸರು ಬಿಸಿ ಮುಟ್ಟಿಸಿದರು. ಕೆಲವರಿಗೆ ದಂಡ ಬೀಳುತ್ತಿದ್ದಂತೆ ಜೇಬಿನಲ್ಲಿದ್ದ ಮಾಸ್ಕ್‌ಗಳನ್ನು ಹಾಕಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು. ಆದರೆ, ಖಾಸಗಿ ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಯಲ್ಲಿ ಮಾತ್ರ ಯಾರೊಬ್ಬರೂ ಮಾಸ್ಕ್ ಧರಿಸಿದ್ದು ಕಂಡುಬರಲಿಲ್ಲ.

ಬಸ್‌ಗಳ ಸಂಖ್ಯೆ ವಿರಳ
ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಎಂದಿನಂತೆ ಸಂಚಾರ ನಡೆಸಿದವು. ಆದರೆ, ಬಸ್‌ಗಳ ಸಂಖ್ಯೆ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್‌ಗಳು ಬಹುತೇಕ ಖಾಲಿ ಇದ್ದವು. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಜಿಲ್ಲೆಯಲ್ಲಿ ಸಂಚರಿಸುವ ಬಸ್‌ಗಳಲ್ಲಿ ಸಹ ಪ್ರಯಾಣಿಕರು ಅರ್ಧದಷ್ಟು ಕಡಿಮೆ ಇದ್ದದ್ದು ಕಂಡು ಬಂದಿತು.

**

ವಾರಾಂತ್ಯದ ಕರ್ಫ್ಯೂ ಕಾರಣಕ್ಕೆ ಸೆಲೂನ್ ಶಾಪ್‌ಗಳನ್ನು ಬಂದ್‌ಗೊಳಿಸಿದ್ದರಿಂದ ತೀವ್ರ ಸಮಸ್ಯೆ ಆಗಿದೆ. ವಾರದ ದುಡಿಮೆ ಶನಿವಾರ ಮತ್ತು ಭಾನುವಾರ ಆಧರಿಸಿರುತ್ತದೆ. ಹೀಗೆ ಆದರೆ ತಿಂಗಳ ಬಾಡಿಗೆ ಕಟ್ಟಲು ಆಗದ ಸ್ಥಿತಿ ಎದುರಾಗುತ್ತದೆ.
- ಆರ್. ಅಮಿತ್, ಜೇಂಟ್ಸ್ ಪಾರ್ಲರ್, ಜೋಗಿಮಟ್ಟಿ ರಸ್ತೆ

**

ನಾಲ್ಕೈದು ದಿನಗಳಿಂದ ಮೂಡಿಸಿದ ಜಾಗೃತಿಯಿಂದಾಗಿ ವಾರಾಂತ್ಯದ ಕರ್ಫ್ಯೂಗೆ ಜನತೆ ಸ್ಪಂದಿಸಿದ್ದಾರೆ. ಅನಗತ್ಯವಾಗಿ ಸಂಚಾರ ನಡೆಸಿದವರು, ಕೋವಿಡ್ ನಿಯಮ ಉಲ್ಲಂಘಿಸಿದರಿಗೆ ದಂಡ ವಿಧಿಸಲಾಗಿದೆ.
- ಜಿ. ರಾಧಿಕಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT