ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಮಾನುಸಾರ ಎಸ್ಸೆಸ್ಸೆಲ್ಸಿ ಪರೀಕ್ಷೆ

ಜುಲೈ 19, 22, 23ರಂದು 133 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
Last Updated 3 ಜುಲೈ 2021, 16:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 22,186 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 19, 22 ಹಾಗೂ 23ರಂದು ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.ಚಿತ್ರದುರ್ಗ 35, ಚಳ್ಳಕೆರೆ 30, ಹಿರಿಯೂರು 17, ಹೊಳಲ್ಕೆರೆ 18, ಹೊಸದುರ್ಗ 17, ಮೊಳಕಾಲ್ಮುರು 13 ಹಾಗೂ ಖಾಸಗಿ ಅಭ್ಯರ್ಥಿಗಳ 3 ಪರೀಕ್ಷಾ ಕೇಂದ್ರ ಸೇರಿ ಒಟ್ಟು 133 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಸಿದ್ಧತೆ ಸಂಬಂಧ ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ‘ಅಗತ್ಯ ಸುರಕ್ಷತಾ ಕ್ರಮದೊಂದಿಗೆ ಕೋವಿಡ್ ನಿಯಮಾನುಸಾರ ಪರೀಕ್ಷೆ ನಡೆಸಬೇಕು’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘19ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3ರವರೆಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2.30 ರಿಂದ ಸಂಜೆ 5 ರವರೆಗೆ ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್-2, ಎಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ನಡೆಯಲಿದೆ’ ಎಂದರು.

‘22ರಂದು ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ, ಹಿಂದಿ, ಅರೇಬಿಕ್, ಪರ್ಷಿಯನ್, ಕೊಂಕಣಿ, ತುಳು ಭಾಷೆಯ ಪರೀಕ್ಷೆ ನಡೆಯಲಿವೆ. ಎನ್‌ಎಸ್‌ಕ್ಯೂಎಫ್‌ ಪರೀಕ್ಷಾ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರೀಟೇಲ್, ಅಟೊಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್ ಪರೀಕ್ಷೆ ನಡೆಯಲಿದೆ. 23ರಂದು ಜೆಟಿಎಸ್ ಅಭ್ಯರ್ಥಿಗಳಿಗೆ ಮಾತ್ರ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆ ನಡೆಯಲಿದೆ. ಒಎಂಆರ್ ಮಾದರಿಯ ಪ್ರಶ್ನೆ ಪತ್ರಿಕೆಗಳಿದ್ದು, ಸ್ಕ್ಯಾನ್ ಮಾರ್ಕ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಪರೀಕ್ಷಾ ಕೇಂದ್ರಗಳಲ್ಲಿ ಆಸನ, ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಅದಕ್ಕಾಗಿ ಮೊದಲೇ ಕೇಂದ್ರಗಳನ್ನು ಪರಿಶೀಲನೆ ನಡೆಸಬೇಕು. ಪರೀಕ್ಷಾ ಕೇಂದ್ರಕ್ಕೆ ಬರಲು, ಹಿಂದಿರುಗಲು ವಿದ್ಯಾರ್ಥಿಗಳಿಗೆ ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್‍ಗಳು ನಿಗದಿತ ಸಮಯದಲ್ಲಿ ಸಂಚರಿಸಬೇಕು. ಕೇಂದ್ರದಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್ ಹಾಗೂ ಪಲ್ಸ್ ಆಕ್ಸಿಮೀಟರ್ ಮೂಲಕ ತಪಾಸಣೆ ಮಾಡಬೇಕು’ ಎಂದು ಡಿಡಿಪಿಐಗೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಡಿಡಿಪಿಐ ಕೆ.ರವಿಶಂಕರ್‌ ರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್. ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT