ಬರಪೀಡಿತ ತಾಲ್ಲೂಕುಗಳ ಕಂದಾಯ ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ

7
ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಕೃಷಿ ಅಧಿಕಾರಿ ವೆಂಕಟೇಶ್

ಬರಪೀಡಿತ ತಾಲ್ಲೂಕುಗಳ ಕಂದಾಯ ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ

Published:
Updated:
Deccan Herald

ಚಿತ್ರದುರ್ಗ: ಸರ್ಕಾರ ಘೋಷಿಸಿದ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿರುವ ಚಿತ್ರದುರ್ಗದ 185 ಕಂದಾಯ ಗ್ರಾಮಗಳಲ್ಲಿ ಸೆ.20ರಿಂದ ಏಕಕಾಲಕ್ಕೆ ಬೆಳೆ ಸಮೀಕ್ಷೆ ಪ್ರಾರಂಭವಾಗಲಿದೆ.

ಇಲ್ಲಿ ಶನಿವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್‌ ಮಾಹಿತಿ ನೀಡಿದರು.

‘ಸಮೀಕ್ಷೆಗೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಯ ತಂಡ ರಚಿಸಲಾಗಿದೆ. ಸಮೀಕ್ಷೆ ವೇಳೆ ಸರ್ವೆ ನಂಬರ್‌ವಾರು ನಷ್ಟದ ಪ್ರಮಾಣವೆಷ್ಟು ಎಂಬುದರ ಅಂದಾಜು ಪಟ್ಟಿ ತಯಾರಿಸಲಾಗುತ್ತದೆ. ನಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

‘ಮಳೆ ಬಂದರೂ ಪುನಶ್ಚೇತನ ಆಗದಂತಹ ಸ್ಥಿತಿಯಲ್ಲಿ ಬೆಳೆಗಳಿವೆ. ಪ್ರತಿ ಗ್ರಾಮದಲ್ಲಿ 1 ಎಕರೆಗಿಂತ ಕಡಿಮೆ ಇರುವ 5 ಸರ್ವೆ ನಂಬರ್‌ಗಳಲ್ಲಿ ಬಿತ್ತನೆ ಮಾಡಿರುವ ಬೆಳೆಗಳ ಸ್ಪಷ್ಟ ಚಿತ್ರಣ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ, ಸಮೀಕ್ಷೆಗೂ ಮುನ್ನ ಗ್ರಾಮ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಸಮೀಕ್ಷೆ ಅವಧಿಯಲ್ಲೇ ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ ಸೇರಿ ಅನೇಕ ಸಮಸ್ಯೆಗಳನ್ನು ದಾಖಲು ಮಾಡಲಾಗುವುದು. ಅಲ್ಲದೆ, ವರದಿಯಲ್ಲಿ ಯಾವ ಬೆಳೆಯೂ ಕೈತಪ್ಪದಂತೆ ನೋಡಿಕೊಳ್ಳಲು ಜಾಗ್ರತೆ ವಹಿಸಲಾಗಿದ್ದು, ಆಯಾ ಗ್ರಾಮಗಳ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಕೂಡ ತಂಡದೊಂದಿಗೆ ಇದ್ದರೆ ಉತ್ತಮ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಅಧ್ಯಕ್ಷ ವೇಣುಗೋಪಾಲ ಮಾತನಾಡಿ, ‘ಕಳೆದ ವರ್ಷ ಅನೇಕ ಕಡೆಗಳಲ್ಲಿ ಮೆಕ್ಕೆಜೋಳ ಬೆಳೆಗೆ ಪರಿಹಾರ ನೀಡಲಾಯಿತು. ಆದರೆ, ಈರುಳ್ಳಿಗೆ ಮಾತ್ರ ಬರಲೇ ಇಲ್ಲ. ಜಿಲ್ಲಾಧಿಕಾರಿ ಅವರಿಗೆ ಕೇಳಿದರೆ, ಉತ್ತಮ ಬೆಳೆ ಬಂದಿದೆ ಎಂದು ಪ್ರತಿಕ್ರಿಯಿಸಿದ್ದರು. ಸಮೀಕ್ಷೆ ಮಾಡುವಾಗ ಸರಿಯಾಗಿ ಮಾಡದ ಕಾರಣ ಈರುಳ್ಳಿ ಬೆಳೆಗಾರರಿಗೆ ತೊಂದರೆ ಉಂಟಾಯಿತು. ಈ ಬಾರಿ ಆ ರೀತಿ ಪುನರಾವರ್ತನೆ ಆಗದಂತೆ ನೋಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಬೆಸ್ಕಾಂ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ಮಾತನಾಡಿ, ‘ಕೇಂದ್ರ ಸರ್ಕಾರದ ದೀನ್‌ದಯಾಳ್ ಗ್ರಾಮ ವಿದ್ಯುತ್ ಯೋಜನೆಯಡಿ ತಾಲ್ಲೂಕಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ 3,384 ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲು ಬೆಸ್ಕಾಂ ಮುಂದಾಗಿದೆ. ಈವರೆಗೆ 1,854 ಕುಟುಂಬಗಳಿಗೆ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ವಿದ್ಯುತ್ ಸೌಲಭ್ಯದಿಂದ ಗ್ರಾಮೀಣ ಭಾಗದವರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತಮ ಯೋಜನೆ ರೂಪಿಸಿದೆ. ಅಲ್ಲದೆ, ಗ್ರಾಮ ಸ್ವರಾಜ್ ಹಾಗೂ ಸೌಭಾಗ್ಯ ಯೋಜನೆಯಡಿ ಎಪಿಎಲ್ ಕುಟುಂಬದವರು ₹ 500 ರಂತೆ ಎರಡು ಕಂತುಗಳಲ್ಲಿ ಬೆಸ್ಕಾಂಗೆ ಪಾವತಿ ಮಾಡಿದರೆ ಅವರು ಸಹ ಸವಲತ್ತು ಪಡೆಯಬಹುದು’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶೋಭಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಾನಾಯ್ಕ ಗ್ರಾಮೀಣ ಉಪವಿಭಾಗದ ಸಹಾಯಕ ನಿರ್ದೇಶಕ ಎಚ್. ಹನುಮಂತಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !