ಪ್ರತಿದಿನವೂ ಆದಾಯ ಕೊಡುವ ಕನಕಾಂಬರ

ಶನಿವಾರ, ಏಪ್ರಿಲ್ 20, 2019
29 °C
ಹೊಸದುರ್ಗ: ಕಡುಬೇಸಿಗೆಯಲ್ಲೂ ಕಣ್ಣಿಗೆ ಇಂಪು ನೀಡುವ ಹೂವು ಬೆಳೆ

ಪ್ರತಿದಿನವೂ ಆದಾಯ ಕೊಡುವ ಕನಕಾಂಬರ

Published:
Updated:

ಹೊಸದುರ್ಗ: ಪಟ್ಟಣದ ಹೊರವಲಯದ ಯಲ್ಲಕಪ್ಪನಹಟ್ಟಿ ಗ್ರಾಮದ ರೈತ ಮಹಿಳೆ ಗೌರಮ್ಮ ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಕನಕಾಂಬರ ಹೂವು ಬೆಳೆದು, ಕಡುಬೇಸಿಗೆಯಲ್ಲೂ ಪ್ರತಿದಿನವೂ ಆದಾಯ ಗಳಿಸುತ್ತಿರುವುದು ಹಲವು ರೈತರಿಗೆ ಮಾದರಿಯಾಗಿದೆ.

ನಾಲ್ಕು ವರ್ಷಗಳ ಹಿಂದೆ ತಾವೇ ಮಡಿ ಮಾದರಿಯಲ್ಲಿ ಕನಕಾಂಬರ ಬೀಜ ಚೆಲ್ಲಿ ಸಸಿ ಮಾಡಿಕೊಂಡಿದ್ದಾರೆ. ತಮ್ಮ ತೆಂಗಿನ ತೋಟದ ಮಧ್ಯೆದ 15 ಗುಂಟೆ ಜಮೀನಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಸಮತಟ್ಟಾಗಿ ಹಸನು ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ ನೀರು ಸರಾಗವಾಗಿ ಹರಿಯುವಂತೆ ಎರಡೂವರೆ ಅಡಿ ಅಂತರದಲ್ಲಿ ಸಾಲಾಗಿ ಡ್ರಿಪ್‌ ವ್ಯವಸ್ಥೆ ಮಾಡಿ ಸಸಿ ನಾಟಿ ಮಾಡಿದ್ದಾರೆ. ಈ ಪದ್ಧತಿಯು ನೀರು ಸಂರಕ್ಷಣೆಗೆ ನೆರವಾಗಿದ್ದು, ಎರಡು ದಿನಕ್ಕೊಮ್ಮೆ ನೀರು ಹಾಯಿಸಲಾಗುತ್ತಿದೆ.

ಕನಕಾಂಬರ ಸಸಿ ನಾಟಿ ಮಾಡಲು ₹ 8 ಸಾವಿರ ಖರ್ಚು ಆಗಿದೆ. ಮೂರು ವರ್ಷದಿಂದ ಹೂವು ಬಿಡಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇವೆ. ತಮ್ಮ ಹೂವು ಬೆಳೆಯನ್ನು ನಾಲ್ಕು ಭಾಗ ಮಾಡಿಕೊಂಡಿದ್ದಾರೆ. ದಿನಕ್ಕೆ ಒಂದು ಭಾಗದಲ್ಲಿ ಮಾತ್ರ ಇಬ್ಬರು ಮಹಿಳೆಯರು ಹೂವು ಬಿಡಿಸುತ್ತಿದ್ದು ಪ್ರತಿದಿನ ಕನಿಷ್ಠ 2 ಕೆ.ಜಿ. ಸಿಗುತ್ತಿದೆ. 1 ಕೆ.ಜಿ.ಗೆ 40 ಮಾರಿನಂತೆ 2 ಕೆ.ಜಿ ಗೆ ದಿನಕ್ಕೆ 80 ಮಾರು ಹೂವು ಆಗುತ್ತದೆ. ಕಡುಬೇಸಿಗೆಯಲ್ಲೂ ಕಡಿಮೆ ನೀರು ಬಳಸಿಕೊಂಡು ಬೆಳೆದಿರುವ ಹೂವಿನ ಬೆಳೆ ನೋಡಿದರೆ ಖುಷಿ ಅನ್ನಿಸುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ತೋಟಕ್ಕೆ ಭೇಟಿ ಕೊಟ್ಟರೆ ಅರಳಿರುವ ಕನಕಾಂಬರ ಕಣ್ಣಿಗೆ ಇಂಪು ನೀಡುತ್ತದೆ.

ವರ್ಷದಲ್ಲಿ ಮೂರರಿಂದ 4 ತಿಂಗಳು ಮಾತ್ರ ಹೂವು ದರ ಕಡಿಮೆ ಇರುತ್ತದೆ. ಶ್ರಾವಣ, ಗೌರಿ, ದಸರಾ, ದೀಪಾವಳಿ, ಯುಗಾದಿ, ಬಸವ ಜಯಂತಿ ಹಬ್ಬದ ಸಂದರ್ಭದಲ್ಲಿ ಒಂದು ಮಾರು ಹೂವಿಗೆ ₹40 ವರೆಗೂ ಬೆಲೆ ಸಿಗುತ್ತದೆ. ಇಂತಹ ಸಮಯದಲ್ಲಿ 80 ಮಾರು ಹೂವಿಗೆ ದಿನಕ್ಕೆ ₹ 3,200 ಆದಾಯ ಸಿಗುತ್ತದೆ. ಹೂವು ಬಿಡಿಸುವ ಇಬ್ಬರು ಕೂಲಿ ಕಾರ್ಮಿಕರಿಗೆ ದಿನಕ್ಕೆ ತಲಾ ₹ 150 ಕೂಲಿ ಕೊಡಲಾಗುತ್ತದೆ. ಒಬ್ಬರು ಒಂದು ದಿನಕ್ಕೆ 1ರಿಂದ ಒಂದೂವರೆ ಕೆ.ಜಿ. ಹೂವು ಬಿಡಿಸುತ್ತಾರೆ. 1 ಕೆ.ಜಿ. ಹೂವು ಕಟ್ಟಿದವರಿಗೆ ₹ 80 ಕೊಡಲಾಗುತ್ತದೆ ಎಂದು ರೈತ ಮಹಿಳೆ ಗೌರಮ್ಮ ‘ಪ್ರಜಾವಾಣಿ’ಗೆ ವಿವರಿಸಿದರು.

 ‘ತೆಂಗು ಬೆಳೆಗೆ ಸಹಕಾರಿ’
‘ಸತತ ಬರಗಾಲ, ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿಹೋಗಿದ್ದು ತೆಂಗಿನ ತೋಟ ಒಣಗುತ್ತಿದ್ದು, ತಾಲ್ಲೂಕಿನ ಹಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವು ಡ್ರಿಪ್‌ ವ್ಯವಸ್ಥೆಯಲ್ಲಿ ತೆಂಗಿನ ನಡುವೆ ಕನಕಾಂಬರ ಬೆಳೆಯುತ್ತಿರುವುದರಿಂದ ಕಡುಬೇಸಿಗೆಯಲ್ಲೂ ತೆಂಗಿನ ಮರಗಳು ನಳನಳಿಸುತ್ತಿದ್ದು, ಇಳುವರಿಯೂ ಉತ್ತಮವಾಗಿದೆ. ತರಕಾರಿ ಬೆಳೆದರೆ ಅದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಹೊರೆ ಬೇರೆ. ಆದರೆ, ಹೂವು ಬೆಳೆಯುವುದರಿಂದ ಆ ಭಾರ ತಪ್ಪುತ್ತದೆ’ ಎನ್ನುತ್ತಾರೆ ಗೌರಮ್ಮ ಅವರ ಸಹೋದರ ಶಿಕ್ಷಕ ಲೇಪಾಕ್ಷಿ.

‘15 ವರ್ಷ ಆದಾಯ’
‘ಒಮ್ಮೆ ಕನಕಾಂಬರ ಸಸಿ ನಾಟಿ ಮಾಡಿ, ಬೆಳೆಯನ್ನು ಚೆನ್ನಾಗಿ ನೋಡಿಕೊಂಡರೆ 15ಕ್ಕಿಂತ ಹೆಚ್ಚು ವರ್ಷ ಹೂವು ಬಿಡಿಸಬಹುದು. ಹುಳು, ತ್ರಿಪ್ಸ್‌ಗೆ 20 ದಿನಕ್ಕೊಮ್ಮೆ  ಔಷಧ ಸಿಂಪಡಿಸಲಾಗುತ್ತದೆ. ಅವಶ್ಯಕತೆ ಎನ್ನಿಸಿದರೆ ಡಿಎಪಿ ಗೊಬ್ಬರ ಹಾಕಲಾಗುತ್ತದೆ. ವರ್ಷಕ್ಕೆ ₹ 1 ಲಕ್ಷದ ವರೆಗೂ ಆದಾಯ ಕೈಸೇರುತ್ತಿದ್ದು, ಕನಕಾಂಬರ ಕೃಷಿ ಸಂತಸವನ್ನುಂಟು ಮಾಡಿದೆ’ ಎನ್ನುತ್ತಾರೆ ಗೌರಮ್ಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !