ಶುಕ್ರವಾರ, ಜೂನ್ 25, 2021
30 °C
ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದ ಪುತ್ರಿ ನೇಹಾ

ಎಸಿ ಪ್ರಸನ್ನ ಚಿತೆಗೆ ಪುತ್ರಿಯಿಂದ ಅಗ್ನಿಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಾಮಾನ್ಯವಾಗಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಪುರುಷರು ನೆರವೇರಿಸುತ್ತಾರೆ. ಆದರೆ, ಅಪಘಾತಕ್ಕೀಡಾಗಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಉಪವಿಭಾಗಾಧಿಕಾರಿ ವಿ.ಪ್ರಸನ್ನ ಅವರ ಅಂತ್ಯಕ್ರಿಯೆಯನ್ನು ಹಿರಿಯ ಪುತ್ರಿ ನೇಹಾ ಬುಧವಾರ ಪೂರೈಸಿದರು.

ಪುತ್ರಿ ಧಾರ್ಮಿಕ ವಿಧಿ ವಿಧಾನ ಪೂರೈಸಿದ ನಂತರ ಅಂತಿಮ ಸಂಸ್ಕಾರ ನಡೆಸುವ ಸ್ಥಳವಾದ ಇಲ್ಲಿನ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮಕ್ಕೆ ಪಾರ್ಥೀವ ಶರೀರವನ್ನು ಕರೆತರಲಾಯಿತು. ಪುತ್ರಿಯೇ ಚಿತೆಗೂ ಅಗ್ನಿಸ್ಪರ್ಶ ಮಾಡಿದರು. ಪತ್ನಿ ಸುಧಾ, ಕಿರಿಯ ಮಗಳು ಇದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಪ್ರಸನ್ನ, ಚಿಕಿತ್ಸೆಗೆ ಸ್ಪಂದಿಸದೇ ಬೆಂಗಳೂರಿನ ಆಸ್ಟರ್‌ ಸಿಎಂಐ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದರು. ಅವರ ಪಾರ್ಥೀವ ಶರೀರವನ್ನು ಚಿತ್ರದುರ್ಗಕ್ಕೆ ಕರೆತರಲಾಯಿತು. ಉಪವಿಭಾಗಾಧಿಕಾರಿ ನಿವಾಸದ ಎದುರು ಪಾರ್ಥೀವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನಡೆಯಿತು.

ಶವಸಂಸ್ಕಾರಕ್ಕೂ ಮುನ್ನ ಪೊಲೀಸರು ಮೂರು ಸುತ್ತು ಕುಶಾಲುತೋಪು ಹಾರಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅಂತಿಮ ಸಂಸ್ಕಾರ ನಡೆಯುವವರೆಗೂ ಸ್ಥಳದಲ್ಲಿಯೇ ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ ಪುಷ್ಪನಮನ ಸಲ್ಲಿಸಿದರು. ಅಂಸರಳ, ಸಜ್ಜನಿಕೆಯ ಅಧಿಕಾರಿಗೆ ಕಚೇರಿಯ ಸಿಬ್ಬಂದಿ ಅಶ್ರುತರ್ಪಣದೊಂದಿಗೆ ವಿದಾಯ ಹೇಳಿದರು.

ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ತಹಶೀಲ್ದಾರ್ ವೆಂಕಟೇಶಯ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ಶರಣ ಸೇನೆ ಅಧ್ಯಕ್ಷ ಮರುಳಾರಾಧ್ಯ ಸೇರಿ ಗಣ್ಯರು ಪ್ರಸನ್ನ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

***

ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದ ವಿ.ಪ್ರಸನ್ನ ಅವರ ನಿಧನ ಮನಸ್ಸಿಗೆ ನೋವುಂಟು ಮಾಡಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.

ಟಿ.ರಘುಮೂರ್ತಿ, ಶಾಸಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು