ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಪದವಿ ಪ್ರವೇಶಕ್ಕೆ ಹೆಚ್ಚಿದ ಬೇಡಿಕೆ

Published 2 ಮೇ 2024, 5:03 IST
Last Updated 2 ಮೇ 2024, 5:03 IST
ಅಕ್ಷರ ಗಾತ್ರ

ಚಿತ್ರದುರ್ಗ: ದ್ವಿತೀಯ ಪಿಯುಸಿ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆ ರಾಜ್ಯದ ಕೊನೆಯ ಸ್ಥಾನದಲ್ಲಿದ್ದರೂ ಶೇಕಡವಾರು ಉತ್ತೀರ್ಣ ಪ್ರಮಾಣ ಹೆಚ್ಚಾಗಿದೆ. ಇದರಿಂದ ಪದವಿ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

ಜಿಲ್ಲೆಯಲ್ಲಿ 21ಕ್ಕೂ ಹೆಚ್ಚು ಪದವಿ ಕಾಲೇಜುಗಳಿವೆ. ಅದರಲ್ಲಿ 10 ಸರ್ಕಾರಿ ಕಾಲೇಜುಗಳಿದ್ದು, ಗ್ರಾಮೀಣರ ಜೀವನಾಡಿಯಾಗಿವೆ. ಆದರೆ ಈ ಕಾಲೇಜುಗಳು ಉಪನ್ಯಾಸಕರು, ಕೊಠಡಿ ಸೇರಿ ಮೂಲ ಸೌಲಭ್ಯದಿಂದ ವಂಚಿತವಾಗಿವೆ.

ಜಿಲ್ಲೆಯಲ್ಲಿ ಈ ಬಾರಿ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಿಂದ ಶೇ 72.92ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶ ಕಳೆದ ವರ್ಷಕ್ಕಿಂತ ಶೇ 3.42ರಷ್ಟು ಹೆಚ್ಚಳವಾಗಿದೆ. ಪರೀಕ್ಷೆ ಬರೆದ 13,348 ವಿದ್ಯಾರ್ಥಿಗಳಲ್ಲಿ 9,734 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ 2,306, ವಾಣಿಜ್ಯ ವಿಭಾಗದಲ್ಲಿ 2,580 ಹಾಗೂ ವಿಜ್ಞಾನ ವಿಭಾಗದಲ್ಲಿ 4,848 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ 6,114 ವಿದ್ಯಾರ್ಥಿನಿಯರಿದ್ದು, 3,981 ನಗರ, 2,133 ಗ್ರಾಮೀಣ ಭಾಗದವರಿದ್ದಾರೆ. ಇನ್ನೂ ಎರಡು ಪರೀಕ್ಷೆಗಳ ಫಲಿತಾಂಶದ ಬಳಿಕ ಉತ್ತೀರ್ಣತೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

‘ಉತ್ತೀರ್ಣರಾದವರಲ್ಲಿ ಶೇ 60ರಷ್ಟು ಪದವಿ ಪ್ರವೇಶ ಪಡೆಯುತ್ತಾರೆ. ಆದರೆ, ತೇರ್ಗಡೆಯ ಪ್ರಮಾಣಕ್ಕೆ ತಕ್ಕಂತೆ ಪದವಿ ಕೋರ್ಸ್‌ಗಳಿಗೆ ಅಗತ್ಯವಾದ ಕಾಲೇಜುಗಳಿಲ್ಲದೇ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವುದು ದಟ್ಟವಾಗಿದೆ’ ಎನ್ನುತ್ತಾರೆ ಸರ್ಕಾರಿ ಕಾಲೇಜಿನ ಉಪನ್ಯಾಸಕರು.

ವಿಜ್ಞಾನ ವಿಭಾಗದವರಿಗೆ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿವೆ. ಆದರೆ, ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಲಿದ್ದಾರೆ. ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಬೋಧಕರ ಕೊರತೆ ಇದೆ. ಎಲ್ಲ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ.

ಕಳೆದ ವರ್ಷದಿಂದ ಜಿಲ್ಲೆಯ ಸರ್ಕಾರಿ ಕಾಲೇಜುಗಳ ಕಲಾ ವಿಭಾಗದಲ್ಲೂ ಮೆರಿಟ್‌ ಆಧಾರದ ಮೇಲೆ ಪ್ರವೇಶ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಪ್ರವೇಶ ಸಿಗದೇ ಪರದಾಡಿದ್ದರು. ಈ ವರ್ಷ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಲಕ್ಷಣ ಕಂಡುಬರುತ್ತಿದೆ.

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಒಟ್ಟು 24 ಕೊಠಡಿಗಳಿದ್ದು, ಪ್ರಾಂಶುಪಾಲರು, ಉಪನ್ಯಾಸಕರು ಸೇರಿ 36 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 30ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದೇ ಸ್ಥಿತಿ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿದೆ.

ಹೆಚ್ಚು ಅಂಕಗಳಿಸುವ ಪ್ರತಿಭಾವಂತರು ವೈದ್ಯಕೀಯ, ಎಂಜಿನಿಯರಿಂಗ್‌, ಕೃಷಿ ಮತ್ತಿತರ ವೃತ್ತಿಪರ ಕೋರ್ಸ್‌ಗಳತ್ತ ಚಿತ್ತಹರಿಸುತ್ತಿದ್ದಾರೆ. ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳು ಕನಿಷ್ಠ ಪದವಿ ಶಿಕ್ಷಣವನ್ನಾದರೂ ಪಡೆಯಬೇಕು ಎನ್ನುವ ಉದ್ದೇಶದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಕೊಡಲು ಸಹ ಆಗದ ಸ್ಥಿತಿ ನಿರ್ಮಾಣವಾಗಿದೆ.

ಕೊಠಡಿ ಸಮಸ್ಯೆ ಕಾರಣಕ್ಕೆ ಸರ್ಕಾರಿ ಕಾಲೇಜುಗಳಲ್ಲಿ ಒಂದು ತರಗತಿಗೆ 100 ವಿದ್ಯಾರ್ಥಿಗಳನ್ನು ನಿಗದಿಗೊಳಿಸಲಾಗುತ್ತಿದೆ. ಜತೆಗೆ ಬೆಂಚ್‌ಗಳ ಕೊರತೆ ಸಹ ಹೆಚ್ಚಾಗಿದೆ. ಈ ಎಲ್ಲವೂ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿವೆ.

ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅತಿಥಿ ಉಪನ್ಯಾಸಕರ ನೇಮಕಾತಿಯೂ ನಡೆದರೆ ಮೊದಲ ದಿನದಿಂದಲೇ ತರಗತಿಗಳು ಪ್ರಾರಂಭವಾಗುತ್ತವೆ. ಆದರೆ ಅದು ಸಹ ಸರಿಯಾಗಿ ನಡೆಯದಿರುವುದು ವಿಪರ್ಯಾಸ.

ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಬಿಸಿಎ ಸೇರಿ 1300 ಅರ್ಜಿ ವಿತರಿಸಲಾಗಿದೆ. ‌ಇನ್ನೂ ನಾಲ್ಕೈದು ದಿನಗಳಲ್ಲಿ ಪ್ರವೇಶಾತಿ ಪ್ರಾರಂಭವಾಗಲಿದೆ. ಫಲಿತಾಂಶ ಹೆಚ್ಚಾಗಿರುವ ಕಾರಣ ಈ ಬಾರಿ ಪ್ರವೇಶಕ್ಕೆ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.
ಪ್ರೊ.ಸಿದ್ದರಾಮ್‌ ಚನಗೊಂಡ ಪ್ರಾಂಶುಪಾಲರು ಸರ್ಕಾರಿ ವಿಜ್ಞಾನ ಕಾಲೇಜು
ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೊಠಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಸರ್ಕಾರ ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಿಸುವ ಜತೆಗೆ ಮೂಲಸೌಕರ್ಯ ಬೋಧಕ–ಬೋಧಕೇತರ ಸಿಬ್ಬಂದಿ ನೇಮಿಸಬೇಕು.
ಎಂ.ಆದರ್ಶ ಹಳೆ ವಿದ್ಯಾರ್ಥಿ ಕಲಾ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT